ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಸಾಗರದ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವಾಗಿದೆ. ಈ ಜಾತ್ರೆಯ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಫೆ.7ರಿಂದ ಜಾತ್ರೆಯು ವಿಜೃಂಭಣೆಯಿಂದ ನಡೆಯಲಿದೆ. ಇದಷ್ಟೇ ಅಲ್ಲದೇ ಜಾತ್ರೆಯ ಸಂಪೂರ್ಣ ವಿಶೇಷ, ಐತಿಹ್ಯ, ಕತೆಯ ಬಗ್ಗೆ ಮುಂದೆ ಓದಿ.
ಇಂದು ಕಂಚಿಗಾರ್ ಸಮಾಜದ ವತಿಯಿಂದ ಮಾರಿಕಾಂಬ ದೇವಿಗೆ ಬಾಗಿನ ಅರ್ಪಿಸಲಾಯಿತು. ಈ ಬಳಿಕ ದೇವರ ಗರ್ಭಗುಡಿಗೆ ಬಾಗಿನ ತಂದರೇ, ಅಶೋಕ ರಸ್ತೆಯ ಗೋವಿಂದಪ್ಪ ಮನೆಯಿಂದ ಉತ್ಸವ ಮೂರ್ತಿಗೆ ಸೀರೆ ತಂದು ಸಮರ್ಪಿಸಲಾಗಿದೆ.
ಸಾರ್ವಜನಿಕರಿಂದ ಸಂಗ್ರಹಿಸಿದಂತ ದೇಣಿಗೆಯಿಂದ 672 ಗ್ರಾಂ ಬಂಗಾರದ ತಾಳಿಯನ್ನು ದೇವಸ್ಥಾನದ ಸುಪರ್ದಿಗೆ ವಹಿಸಿದ್ರೇ, ಜಾತ್ರೆಯ ಪ್ರಯುಕ್ತ ಅಮ್ಮನವರ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಜಯಲಕ್ಷ್ಮೀ ಜ್ಯೂವೆಲ್ಲರಿ ವರ್ಕ್ಸ್ ವತಿಯಿಂದ ಪಾಲಿಶ್ ಮಾಡಿ, ದೇವಸ್ಥಾನಕ್ಕೆ ನೀಡಲಾಯಿತು. ಈ ಮೂಲಕ ಮಾರಿಕಾಂಬ ದೇವಿಯ ಧಾರ್ಮಿಕ ಕಾರ್ಯಗಳು ಚಾಲನೆಗೊಂಡು, ಫೆ.7ರಿಂದ 15ರವರೆಗೆ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದೆ.
ದೇವಿ ಮಾರಿಕಾಂಬ ಜಾತ್ರೆ ವಿಶೇಷ
ಫೆಬ್ರುವರಿ ಮಾರ್ಚ್ ಎಪ್ರಿಲ್ ತಿಂಗಳು ಬಂತೆಂದರೆ, ಎಲ್ಲ ಗ್ರಾಮ, ನಗರ, ಪಟ್ಟಣ, ಪ್ರದೇಶಗಳಲ್ಲಿ ಜಾತ್ರೆಗಳು ಆರಂಭವಾಗುತ್ತದೆ. ಅದರಲ್ಲೂ ಗ್ರಾಮದೇವತೆಗಳಾದ ಮಾರಿಕಾಂಬ ದೇವಿ, ದುರ್ಗಾದೇವಿ, ದ್ಯಾಮವ್ವದೇವಿಯ ಆಯಾಯ ಗ್ರಾಮಕ್ಕೆ ಸಂಬಂಧಪಟ್ಟ ಗ್ರಾಮದೇವತೆಗಳು. ಜಾತ್ರೆಗಳಂತು ಎಲ್ಲಾ ಕಡೆಗಳಲ್ಲೂ ಆಚರಿಸುತ್ತಾರೆ. ಬೆಂಗಳೂರಿನ ಅಣ್ಣಮ್ಮನ ಜಾತ್ರೆಯಂತೆ, ಮಲೆನಾಡಿನ ಮೂರು ಶಕ್ತಿದೇವತೆ ಎಂದೇ ಪ್ರಸಿದ್ಧರಾಗಿರುವ ಶಿವಮೊಗ್ಗ, ಸಾಗರ ಮತ್ತು ಶಿರಸಿಯಲ್ಲಿ ಮಾರಿಕಾಂಬ ಜಾತ್ರೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಶಿವಮೊಗ್ಗ, ಸಾಗರದಲ್ಲಿ ಮೂರು ವರ್ಷಗಳಿಗೊಮ್ಮೆ ಆಚರಿಸಿದರೆ ಶಿರಸಿಯಲ್ಲಿ ಎರಡು ವರ್ಷಕ್ಕೊಮ್ಮೆ ಜಾತ್ರೆ ನಡೆಸುತ್ತಾರೆ.
ಸಾಗರ ಮಾರಿಕಾಂಬ ಜಾತ್ರೆಯ ಹಿನ್ನೆಲೆ
ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಹೆಸರು ಪಡೆದ ಸಾಗರದಲ್ಲಿ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದ್ದು ಎನ್ನಲಾಗಿದೆ. ಸಾಗರ ನಗರದ ಮಧ್ಯ ಭಾಗದಲ್ಲಿ ಮಾರಿಕಾಂಬಾ ಗುಡಿಯಿದೆ. ದೇವಿಯು ಶಿರಸಿ ಮಾರಿಕಾಂಬಳ ಸಹೋದರಿಯಾಗಿದ್ದಾಳೆ. ಇಲ್ಲಿನ ಜಾತ್ರೆ ತುಂಬಾ ಪ್ರಸಿದ್ಧಿ ಪಡೆದಿದೆ. ಸಾಗರದ ಹತ್ತಿರ ಇರುವ ಕೆಳದಿ, ಇಕ್ಕೇರಿ ಸಂಸ್ಥಾನದ ನಾಯಕರಾದ ಶಿವಪ್ಪ ನಾಯಕರು, ಚಿಕ್ಕದಾಗಿದ್ದ ಮಾರಿಕಾಂಬಾ ಗುಡಿಯನ್ನು ಸಾಗರದ ಮಧ್ಯಭಾಗದಲ್ಲಿ ಅತಿ ಎತ್ತರದ ಗೋಪುರದೊಂದಿಗೆ ರಥದ ಮಾದರಿಯಲ್ಲಿ ಕಟ್ಟಿಸಿದರು.
ಮಾರಿಕಾಂಬೆ ಕುರಿತಾಗಿ ಇರುವ ದಂತಕಥೆ
ಈ ಕಥೆಯ ಪ್ರಕಾರ ಹೆತ್ತವರನ್ನು ಕಳೆದುಕೊಂಡ ಮಾದಿಗರ ಜಾತಿಯ ಚಿಕ್ಕ ಹುಡುಗ, ಒಬ್ಬ ಬ್ರಾಹ್ಮಣನ ಮನೆಯಲ್ಲಿ, ಹಸು-ಕರುಗಳನ್ನು ಮೇಯಿಸುತ್ತಾ, ಹಿತ್ತಲು ಕೊಟ್ಟಿಗೆಗಳ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಅವರ ಮನೆಯವರಲ್ಲಿ ಒಬ್ಬನಾಗಿ ಬೆಳೆಯುತ್ತಿದ್ದ. ಬ್ರಾಹ್ಮಣರ ಮನೆಯಾದ್ದರಿಂದ ನಿತ್ಯವೂ ಸ್ನಾನ -ಸಂಧ್ಯಾವಂದನೆ, ದೇವರ ಪೂಜೆ, ಮಂತ್ರ, ಜಪ -ತಪ ಹೋಮ-ಹವನಗಳು ವೇದಗಳನ್ನು ಪಠಿಸುವುದು. ಹೀಗೆ ದಿನನಿತ್ಯವೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿತ್ತು. ಈ ಬಾಲಕನು ಚಿಕ್ಕಂದಿನಿಂದ ಅಲ್ಲಿಯೇ ಬೆಳೆದುದರಿಂದ ನಿತ್ಯವೂ ವೇದಮಂತ್ರಗಳನ್ನು ಕೇಳಿ , ಅಲ್ಪಸ್ವಲ್ಪ ವಿಧಿವಿಧಾನಗಳನ್ನು ನೋಡಿ ಬೆಳೆದಿದ್ದರಿಂದ ದೂರದಿಂದ ಒಂದಷ್ಟು ಗೊತ್ತಿತ್ತು.
ಯುವಕನಾದ ಮೇಲೆ ಹಸು-ಕರು ಕೊಟ್ಟಿಗೆ ಕೆಲಸಗಳನ್ನು ಬಿಟ್ಟು, ಹೊಸ ಉದ್ಯೋಗ ಮಾಡಿಕೊಂಡು ವಿವಾಹ ಮಾಡಿಕೊಳ್ಳುವ ಸಲುವಾಗಿ ಆ ಗ್ರಾಮವನ್ನು ಬಿಟ್ಟು ಬೇರೆ ಕಡೆ ಹೊರಟು, ಕಾಡಿನ ಬದಿಯಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ನಿತ್ಯವೂ ಸ್ನಾನ ಮಾಡಿ ಪಂಚೆ ಶಲ್ಯ ಮತ್ತು ವಿಭೂತಿ, ಕುಂಕುಮ, ಎಲ್ಲವನ್ನು ಧರಿಸಿ, ತನ್ನದೇ ಆದ ರೀತಿಯಲ್ಲಿ ಪೂಜೆ ಪುನಸ್ಕಾರ ಗಳನ್ನು ಮಾಡುತ್ತಾ, ಜೊತೆಗೆ ತನ್ನ ಜೀವನಕ್ಕಾಗಿ ತನ್ನ ಮೂಲ ವೃತ್ತಿಯನ್ನು ಮಾಡುತ್ತಿದ್ದನು.
ಒಮ್ಮೆ ಬ್ರಾಹ್ಮಣನೊಬ್ಬ ಮದುವೆ ಮಾಡುವ ಸಲುವಾಗಿ ತನ್ನ ಮಗಳು ಪಾರ್ವತಿಯನ್ನು ಕರೆದುಕೊಂಡು ವರನನ್ನು ಹುಡುಕುತ್ತಾ ಅದೇ ಮಾರ್ಗವಾಗಿ ಬರುತ್ತಿದ್ದನು. ಈ ಮಾದಿಗರ ಹುಡುಗ ಆ ಸಮಯಕ್ಕೆ ತನ್ನದೇ ಶೈಲಿಯಲ್ಲಿ ಸಂಧ್ಯಾ ವಂದನೆ ಮಾಡುತ್ತಿದ್ದ. ಬ್ರಾಹ್ಮಣ ಇವನನ್ನು ನೋಡಿದ. ಹೆಸರು ಗೋತ್ರ ಕೇಳಿದಾಗ, ಆತ ಅಂದವಾದ ಬ್ರಾಹ್ಮಣನ ಮಗಳನ್ನು ನೋಡಿ ತಾನೇ ಮದುವೆಯಾಗಬೇಕೆಂದು ಆಸೆಯಿಂದ ತಾನು ಬ್ರಾಹ್ಮಣ ಎಂಬುದಾಗಿ ಸುಳ್ಳು ಹೇಳುತ್ತಾನೆ. ಹುಡುಗಿಯ ತಂದೆ ಅದನ್ನು ನಿಜವೆಂದು ನಂಬಿ ಅಂದಿನ ಕಾಲದಂತೆ ಮಗಳು ಪಾರ್ವತಿಯನ್ನು ಅವನಿಗೆ ಕೊಟ್ಟು ವಿವಾಹ ಮಾಡಿ ತಾನು ತೀರ್ಥಯಾತ್ರೆಗೆ ಹೊರಟನು.
ಮದುವೆ ಮಾಡಿಕೊಂಡ ಈತ ಹೆಂಡತಿಗೆ ಸ್ವಲ್ಪವೂ ಗೊತ್ತಾಗದಂತೆ ಸಂಸಾರ ನಡೆಸುತ್ತಾ ಬಂದ. ಆಗಲೇ ಒಂದಷ್ಟು ಮಕ್ಕಳುಗಳಾದವು. ಸಂಸಾರ ಬೆಳೆಯಿತು ಹೀಗಾಗಿ ಸ್ನಾನ ಪೂಜೆಗಳ ಕಡೆಗೆ ಗಮನ ಕೊಡದೆ ದಿನದ ಹೆಚ್ಚು ಹೊತ್ತು ತನ್ನ ವೃತ್ತಿಯನ್ನು ಮಾಡತೊಡಗಿದನು. ದಿನ ಕಳೆದಂತೆ ಪಾರ್ವತಿಗೆ ಅವನ ನಡೆ-ನುಡಿ ನೋಡಿ ಸ್ವಲ್ಪ ಅನುಮಾನ ಬಂದಿತ್ತು.
ಒಂದು ದಿನ ಅವಳ ಮಕ್ಕಳುಗಳು ಬೀದಿ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದವು. ಮಕ್ಕಳು ಏನು ಆಟ ವಾಡುತ್ತಿದ್ದಾರೆಂದು ನೋಡಲು ಬಂದಳು. ಮಕ್ಕಳು ಮರದಿಂದ ಬಿದ್ದ ಎಲೆಗಳನ್ನು ಚಪ್ಪಲಿ ಆಕಾರದಲ್ಲಿ ಹರಿದು, ಪಾದ ರಕ್ಷೆಯನ್ನಾಗಿ ಮಾಡುತ್ತಿದ್ದದ್ದನ್ನು ನೋಡಿದಳು. ಒಂದೆರಡು ದಿನ ಹೀಗೆ ಗಮನಿಸಿ ಇದನ್ನು ಯಾರು ಹೇಳಿಕೊಟ್ಟರು ಎಂದು ಕೇಳಿದಾಗ ಅಪ್ಪ ಮಾಡುತ್ತಾರೆ. ನೋಡಿ ಕಲಿತೆವು ಎಂದು ಹೇಳಿದವು. ಆ ಕ್ಷಣವೇ ಅವಳಿಗೆ ಸಿಟ್ಟು ಬಂದು ಮಕ್ಕಳ ಜೊತೆ ಗಂಡನಿರುವ ಜಾಗಕ್ಕೆ ಬಂದಳು. ಅವನು ಪ್ರಾಣಿಗಳ ಚರ್ಮದಿಂದ ಚಪ್ಪಲಿಗಳನ್ನು ಹೊಲಿಯುವುದನ್ನು ನೋಡಿದಳು. ಏನೊಂದೂ ಮಾತನಾಡದೆ ರೌದ್ರಾವತಾರದಲ್ಲಿ ಮನೆಗೆ ಬಂದಳು.
ಆಕೆಗೆ ಅಸಾಧ್ಯವಾದ ಕೋಪ ಬಂತು. ಭಯಂಕರ ರೂಪ ತಾಳಿದಳು. ಮನೆಗೆ ಬಂದವಳೇ ಹರಿತವಾದ ಕತ್ತಿಯನ್ನು ತೆಗೆದುಕೊಂಡು ಬಂದು ಗಂಡನನ್ನು ಕಡಿಯಲು ಮುಂದಾದಳು. ಆಗ ಹೆದರಿಕೊಂಡು ಓಡಿದಂತ ಆತ ಒಂದು ಕೋಣನೊಳಗೆ ಸೇರಿಕೊಳ್ಳುತ್ತಾನೆ. ಮೈ ಮೇಲೆ ಮಾರಿ ಬಂದಂಥ ಆಕೆ ಒಂದೇ ಏಟಿಗೆ ಕೋಣನ ಕುತ್ತಿಗೆಯನ್ನೆ ಕಡಿದಳು. ಅವಳ ಮುಖಕ್ಕೆಲ್ಲ ರಕ್ತ ಚಿಮ್ಮಿತು. ಇದನ್ನು ಕಂಡು ಹೆದರಿದ ಅವಳ ಮಕ್ಕಳು ಓಡುತ್ತಿದ್ದವು. ಅವುಗಳ ಹಿಂದೆಯೇ ತಾನೂ ಓಡಿ ಒಂದರ ಮೇಲೊಂದರಂತೆ ಎಲ್ಲರನ್ನು ಕಡಿದು ಹಾಕಿದಳು. ಇದನ್ನು ಕಂಡ ಊರವರೆಲ್ಲ ಆಕೆಯ ಮೈಮೇಲೆ ಅರಿಶಿನ-ಕುಂಕುಮ ಸುರಿದು, ಕೆಂಪು ಹೂವು, ಬೇವಿನ ಸೊಪ್ಪು ಗಳನ್ನು ಹಾಕಿ ಪೂಜೆ ಮಾಡಿ ಆಕೆಯನ್ನು ಶಾಂತಗೊಳಿಸಿದರು.
ಜನರು ಅಂದಿನಿಂದ ಆಕೆಯನ್ನು ‘ಮಾರಮ್ಮ’ ಎಂಬ ಹೆಸರಿನಿಂದ ಕರೆದು ಪೂಜಿಸತೊಡಗಿದರು. ಆಕೆ ಗ್ರಾಮದ ಜನರ ರಕ್ಷಣೆಗಾಗಿ ಹಾಗೂ ಕಾಲರಾ, ಪ್ಲೇಗ್ ನಂತಹ ಸಾಂಕ್ರಾಮಿಕ ರೋಗಗಳು ಬರದಂತೆ ತಡೆಯುತ್ತಾ ಊರಿನ ಗ್ರಾಮದೇವತೆಯಾದಳು. ಪ್ಲೇಗು, ಕಾಲರಾ ಅವುಗಳನ್ನು ಮಾರಿ ರೋಗ ಎಂದೇ ಹಿಂದಿನವರು ಕರೆಯುತ್ತಿದ್ದರು. ಈ ರೋಗಗಳು ಬಂದರೆ ನೂರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಸಾಂಕ್ರಾಮಿಕ ರೋಗಗಳಂಥ ಮಾರಿ ರೋಗಗಳನ್ನು ತಡೆಗಟ್ಟಲು, ದೇವಿಗೆ ಹರಕೆಯಾಗಿ, ಪೂಜೆ, ಉತ್ಸವ -ಜಾತ್ರೆಯನ್ನು ಮಾಡುವದಾಗಿ ಊರಿನ ಹಿರಿಯರು ಹೇಳಿಕೊಂಡರು. ಆಗ ರೋಗವು ಸಂಪೂರ್ಣವಾಗಿ ನಿಂತುಹೋಯಿತು. ಮೊದಮೊದಲು ಚಿಕ್ಕದಾಗಿ ಆರಂಭ ಮಾಡಿದ ಜಾತ್ರೆ, ಕ್ರಮೇಣ ಹಲಸಿನ ಮರದಿಂದ ದೇವಿಯ ವಿಗ್ರಹ ಮಾಡಿ ಪ್ರತಿಷ್ಠಾಪಿಸಿ ಪೂಜೆ, ಜಾತ್ರೆ ಉತ್ಸವಗಳನ್ನು ಮಾಡಿ, ನಂತರ ಊರಿನ ಹೊರಗೆ ಬಿಟ್ಟು ಬರುತ್ತಿದ್ದರು.
ಒಂಭತ್ತು ದಿನಗಳ ಕಾಲ ನಡೆಯುವ ಜಾತ್ರೆ
ಸಾಗರದ ಮಾರಿಕಾಂಬ ಜಾತ್ರೆಯು ಒಂಬತ್ತು ದಿನಗಳ ಕಾಲ ಜಾತ್ರೆ ಮಾಡುತ್ತಾರೆ. ಜಾತ್ರೆಗೆ ಒಂದು ವಾರಕ್ಕೆ ಮುಂಚೆ ಊರ ಗಡಿ ಭಾಗದಲ್ಲಿ ‘ಅಂಕೆ ಹಾಕುತ್ತಾರೆ’ ಆನಂತರ ಈ ಅಂಕೆ ಮೀರಿ ಯಾರು ಊರ ಹೊರಗೆ ಹೋಗುವಂತಿಲ್ಲ. ಅದರಲ್ಲೂ ತವರಿಗೆ ಬಂದ ಹೆಣ್ಣು ಮಕ್ಕಳು ಜಾತ್ರೆ ಮುಗಿಸದೆ ಹೋಗುವಂತಿಲ್ಲ. ಸಾಗರದಲ್ಲಿ ಮಾರಿಕಾಂಬಾ ದೇವಸ್ಥಾನ ಎರಡು ಇದ್ದು, ತವರು ಮನೆ ಹಾಗೂ ಹೃದಯಭಾಗದಲ್ಲಿರುವ ದೇವಸ್ಥಾನ ಗಂಡನ ಮನೆ ಆಗಿದೆ.
ಉಪ್ಪಾರ ಕುಟುಂಬಕ್ಕೆ ಸೇರಿದವರು ದೇವಿಯ ಪೂಜೆ ಮಾಡುತ್ತಾರೆ. ಈ ಪೂಜಾರಿಗೆ ‘ಪೋತರಾಜ’ ಎಂದು ಕರೆಯುತ್ತಾರೆ. ಈತ ಜಾತ್ರೆಗೆ ಒಂದು ತಿಂಗಳು ಮೊದಲೇ ವಿಗ್ರಹ ಮಾಡಲು ಹಲಸಿನ ಮರವನ್ನು ಗುರುತಿಸುತ್ತಾನೆ. ಈ ಮರದಿಂದ ಗುಡಿಗಾರರ ಸಮುದಾಯಕ್ಕೆ ಸೇರಿದವರು ಮೂರ್ತಿಯನ್ನು ಕೆತ್ತುತ್ತಾರೆ.
ಮಂಗಳವಾರದಿಂದಲೇ ಆರಂಭವಾದ ಜಾತ್ರೆ ಮತ್ತೊಂದು ಬುಧವಾರಕ್ಕೆ ಮುಗಿಯುತ್ತದೆ. ಜಾತ್ರೆಯ ಮೊದಲ ದಿನ ತವರು ಮನೆಯಲ್ಲಿ ಬಹಳ ಸಡಗರ. ಅಂದು ಬ್ರಾಹ್ಮಣ ಸಮುದಾಯದ ಮಹಿಳೆಯರೆಲ್ಲಾ ಬಂದು ದೇವಿಗೆ ಪೂಜೆ ಸಲ್ಲಿಸಿ ಮಡಿಲು ತುಂಬಿ, ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಂಡವರು ಬೆಲ್ಲದಾರತಿ, ತಂಬಿಟ್ಟು ಮತ್ತು ತುಪ್ಪ ದಾರತಿಗಳನ್ನೂ ಎತ್ತುತ್ತಾರೆ.
ಅದೇ ದಿನ ರಾತ್ರಿ ಒಂಬತ್ತು ಗಂಟೆಯ ನಂತರ ಆಕೆಯನ್ನು ವಾದ್ಯ -ಮೇಳಗಳ ಮೆರವಣಿಗೆಯೊಂದಿಗೆ ಗಂಡನ ಮನೆಗೆ ಕಳಿಸುತ್ತಾರೆ. ಇಲ್ಲಿ ಆಕೆಯ ಗಂಡನಾದ ಕೋಣ ಕಡಿಯುವ ಶಾಸ್ತ್ರದಂತೆ ಸಾಂಕೇತಿಕವಾಗಿ ರಕ್ತವನ್ನು ಅರ್ಪಿಸುತ್ತಾರೆ. ಇಲ್ಲಿ ದೇವಿಯನ್ನು ಗದ್ದುಗೆ ಮೇಲೆ ಕೂರಿಸುತ್ತಾರೆ. ನಂತರ ಜಾತ್ರಾ ಮಹೋತ್ಸವ ಬಹಳ ವೈಭವದಿಂದ ನಡೆಯುತ್ತದೆ.
ಸಾಗರದ ಜಾತ್ರೆ ನೋಡಲು ಎರಡು ಕಣ್ಣು ಸಾಲದು. ಜಾತ್ರೆಯಲ್ಲಿ ಏನುಂಟು ಏನಿಲ್ಲ ಇದ್ದಂತೆ ಸಕಲವೂ ಸಿಗುತ್ತದೆ. ಬೆಳಗ್ಗೆಯಿಂದ ಇಡೀರಾತ್ರಿ ತನಕವೂ ಜಾತ್ರೆ ಸಂಭ್ರಮ ಇದ್ದೇ ಇರುತ್ತದೆ. ಜಾತ್ರೆಯ ಕೊನೆಯ ದಿನ ರಾಜಬೀದಿ ಉತ್ಸವ ಮಾಡುತ್ತಾರೆ. ಡೊಳ್ಳು ಕುಣಿತ, ಕಹಳೆ, ಕೀಲು ಕುದುರೆ, ತೊಟ್ಟಿ ರಾಯ, ಉದ್ದನೆ ಮರದ ಕಾಲಿನ ಮನುಷ್ಯ, ಗೊಂಬೆಗಳು, ಬಳೆ ಸರಗಳು, ಎಲ್ಲೆಲ್ಲೂ ಸಿಗದ ಅಪರೂಪದ ವಸ್ತುಗಳು, ಅನೇಕ ವೇಷಭೂಷಣಗಳಿಂದ ಕೂಡಿದ ಜಾನಪದ ಕಲಾವಿದರೆಲ್ಲರೂ ಪಾಲ್ಗೊಳ್ಳುತ್ತಾರೆ.
ಮಾರಿಯಮ್ಮನ ಮಕ್ಕಳಾದ ಕುರಿ-ಕೋಳಿಗಳನ್ನು ದೇವಿಗೆ ಕೊಡುತ್ತೇವೆ ಎಂದು ಹರಕೆ ಹೊತ್ತಿರುತ್ತಾರೆ. ಮೊದಲೆಲ್ಲ ಹೆಜ್ಜೆಹೆಜ್ಜೆಗೂ ಕಡಿಯುತ್ತಿದ್ದರಂತೆ. ಈಗ ದೇವಿಯ ಮೇಲೆ ಎಸೆಯುತ್ತಾರೆ ಯಾರ ಕೈಗೆ ಸಿಗುತ್ತದೆಯೋ ಅವರಿಗೆ ದೇವಿಪ್ರಸಾದ ಸಿಕ್ಕಂತಾಗುತ್ತದೆ. ಈ ರೀತಿ ಮೆರವಣಿಗೆ ಮೂಲಕ ಕರೆದುಕೊಂಡು ಬಂದ ದೇವಿಯನ್ನ ಊರಿನಿಂದ ದೂರದ ಕಾಡಿನಲ್ಲಿ ಬಿಟ್ಟು ತಿರುಗಿ ನೋಡದೆ ಬರುತ್ತಾರೆ. ಎಲ್ಲಾ ಧರ್ಮೀಯರಿಂದ ಪೂಜಿಸಲ್ಪಡುವ ದೇವಿಯ ಜಾತ್ರೆಯು ಭಾವೈಕ್ಯತೆ ಸಾರುವ ಸರ್ವಧರ್ಮಸಮನ್ವಯ ಪ್ರತೀಕದ ಜಾತ್ರೆಯಾಗಿದೆ.
BIGG NEWS: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 20 ಸ್ಥಾನ ಕೂಡ ಗೆಲ್ಲಲ್ಲ: ನಳಿನ್ ಕುಮಾರ್ ಕಟೀಲ್