ಕೆಎನ್ಎನ್ಸಿನಿಮಾಡೆಸ್ಕ್: ಯುವ ಪ್ರತಿಭೆ ರಿಚ್ಚಿ ನಾಯಕನಾಗಿ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ರಿಚ್ಚಿ’ ಶೀಘ್ರದಲ್ಲಿಯೇ ತೆರೆಗೆ ಬರುವ ತಯಾರಿಯಲ್ಲಿದೆ. ಸದ್ಯ ‘ರಿಚ್ಚಿ’ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಮೇ 18 ರಂದು ‘ರಿಚ್ಚಿ’ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ರೆಡಿಯಾಗಿದೆ.
ಇನ್ನು ಬಿಡುಗಡೆಯಾಗಲಿರುವ ‘ರಿಚ್ಚಿ’ ಸಿನಿಮಾದ ಮೊದಲ ಹಾಡಿಗೆ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ಹತ್ತಾರು ಸೂಪರ್ ಹಿಟ್ ಹಾಡುಗಳನ್ನು ನೀಡಿ, ಕೆಲ ಸಮಯದಿಂದ ಚಂದನವನದಿಂದ ದೂರ ಉಳಿದಿದ್ದ ಕುನಾಲ್ ಗಾಂಜಾವಾಲಾ, ಈ ಹಾಡಿನ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಾಸಾಗುತ್ತಿದಾರೆ.
‘ರಿಚ್ಚಿ’ ಸಿನಿಮಾದ ಈ ಹಾಡಿಗೆ ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದು, ನಾಯಕ ನಟ ರಿಚ್ಚಿ ಮತ್ತು ನಾಯಕಿ ರಮೋಲಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಈ ಗೀತೆಗೆ, ಖ್ಯಾತ ಕೋರಿಯೋಗ್ರಾಫರ್ ಚಿನ್ನಿಮಾಸ್ಟರ್ ನೃತ್ಯನಿರ್ದೇಶನ ಮಾಡಿದ್ದಾರೆ.
ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ‘ರಿಚ್ಚಿ’ ಸಿನಿಮಾವನ್ನು ಅಣಜಿ ನಾಗರಾಜ್ ಅರ್ಪಿಸುತ್ತಿದ್ದು, ಚಿತ್ರಕ್ಕೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ.
‘ಇದೊಂದು ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೆ ಸೇರಬಹುದಾದ ಸಿನಿಮಾವಾದರೂ, ಹಾಡುಗಳಿಗೂ ಪ್ರಧಾನ ಪ್ರಾಶಸ್ತ್ಯ ಕೊಡಲಾಗಿದೆ. ಇಂದಿನ ಪ್ರೇಕ್ಷಕರ ಅಭಿರುಚಿಕೆ ತಕ್ಕಂತೆ ‘ರಿಚ್ಚಿ’ ಸಿನಿಮಾವನ್ನು ಮಾಡಿದ್ದೇವೆ’ ಎಂಬುದು ನಾಯಕ ಕಂ ನಿರ್ದೇಶಕ ರಿಚ್ಚಿ ಮಾತು.
ಸದ್ಯ ಮೊದಲ ಹಾಡಿನ ಮೂಲಕ ಸಿನಿಪ್ರಿಯರ ಮುಂದೆ ಬರುತ್ತಿರುವ ‘ರಿಚ್ಚಿ’ ಎಷ್ಟರ ಮಟ್ಟಿಗೆ ಕೇಳುಗರ ಗಮನ ಸೆಳೆಯಲಿದ್ದಾನೆ ಎಂಬ ಕುತೂಹಲಕ್ಕೆ ಮೇ. 18 ರಂದು ಉತ್ತರ ಸಿಗಲಿದೆ.