ನವದೆಹಲಿ:ಬುಡಕಟ್ಟು ಮೂಲದ ಕಾರಣ ಅಯೋಧ್ಯೆಯಲ್ಲಿ ನಡೆದ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ರಾಷ್ಟ್ತಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ನಿರಾಕರಿಸಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ವಯನಾಡ್ ಸಂಸದರ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ದಾರಿತಪ್ಪಿಸುವಂಥವು ಎಂದು ಹೇಳಿದೆ.

ಈ ವರ್ಷದ ಜನವರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾರತದ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರತಿಪಾದಿಸಿದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ತಮ್ಮ ತೀವ್ರ ಆಕ್ಷೇಪವಿದೆ ಎಂದು ಹೇಳಿದರು.

“ಗುಜರಾತ್ನಲ್ಲಿ ನಡೆದ ಸಭೆಯಲ್ಲಿ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮತ್ತು ಟ್ರಸ್ಟಿಯಾಗಿ, ರಾಹುಲ್ ಗಾಂಧಿ ಅವರ ಈ ಹೇಳಿಕೆಗಳಿಗೆ ನಾನು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತೇನೆ. ಈ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ದಾರಿತಪ್ಪಿಸುವವು” ಎಂದು ಅವರು ಹೇಳಿದರು.

ಮೂರು ತಿಂಗಳ ಹಿಂದೆ ನಡೆದ ಘಟನೆಯ ಬಗ್ಗೆ ರಾಹುಲ್ ಅವರ ಆಧಾರರಹಿತ ಆರೋಪವು ಸಮಾಜದಲ್ಲಿ ವಿಭಜನೆಯನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು.”ಭಾಷಣದ ಈ ಭಾಗಗಳು ನಮಗೆ ಗಂಭೀರ ಆಕ್ಷೇಪಾರ್ಹವಾಗಿವೆ” ಎಂದು ಅವರು ಹೇಳಿದರು.

ರಾಷ್ಟ್ರಪತಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಬ್ಬರನ್ನೂ ಪ್ರಾಣ ಪ್ರತಿಷ್ಠಾನಕ್ಕೆ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

Share.
Exit mobile version