ಅಹ್ಮದಾಬಾದ್: ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರದ ಕಿರಿಯ ಗುಮಾಸ್ತರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಭಾನುವಾರ ನಿಗದಿಯಾಗಿದ್ದ ಕೆಲವೇ ಗಂಟೆಗಳ ಮೊದಲು ರದ್ದುಪಡಿಸಲಾಗಿದೆ ಮತ್ತು ಈ ಸಂಬಂಧ ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ ಎಂದು ರಾಜ್ಯ ಪಂಚಾಯತ್ ಪರೀಕ್ಷಾ ಮಂಡಳಿ ತಿಳಿಸಿದೆ.
ರಾಜ್ಯಾದ್ಯಂತ 2,995 ಕೇಂದ್ರಗಳಲ್ಲಿ ನಡೆಯಬೇಕಿದ್ದ 1,181 ಹುದ್ದೆಗಳಿಗೆ 9.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಖಚಿತ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡು ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ಭಾನುವಾರ ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ, ನಂತರ ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿ ಅಭ್ಯರ್ಥಿಗಳ ವಿಶಾಲ ಹಿತದೃಷ್ಟಿಯಿಂದ ಪರೀಕ್ಷೆಯನ್ನು “ಮುಂದೂಡಲು” ನಿರ್ಧರಿಸಿದೆ ಎಂದು ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.