ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸೋದಕ್ಕೆ ಪೋಷಕರು ಹುಡುಕಾಡುತ್ತಿದ್ದಾರೆ. ಯಾವ ಶಾಲೆಗಳು ಅನಧಿಕೃತ, ಯಾವುವು ಅಧಿಕೃತ ಎನ್ನುವ ಮಾಹಿತಿಯನ್ನು ಪ್ರಕಟಿಸುವಂತೆ ಬಿಇಓಗಳಿಗೆ ಸೂಚಿಸಿದ್ದರೂ ಈವರೆಗೆ ಪ್ರಕಟಿಸಿಲ್ಲ. ಈ ಕೂಡಲೇ ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವಂತ ಅವರು, ರಾಜ್ಯದಲ್ಲಿರುವ 17,329 ಖಾಸಗಿ ಶಾಲೆಗಳ ಪೈಕಿ 1,695 ಅನಧಿಕೃತ ಶಾಲೆಗಳಿವೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ಅನೇಕ ಪಾಲಕರಿಗೆ ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆ ಅಧಿಕೃತವೇ ಅಥವಾ ಅನಧಿಕೃತವೇ ಎಂಬುದರ ಬಗ್ಗೆ ಖಚಿತ ಮಾಹಿತಿಯೇ ಇರುವುದಿಲ್ಲ ಎಂದಿದ್ದಾರೆ.

ಈಗಾಗಲೇ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಸಹಜವಾಗಿ ಪಾಲಕರಿಗೆ ತಮ್ಮ ಮಕ್ಕಳನ್ನು ಉತ್ತಮ ಶಾಲೆಗಳಿಗೆ ಸೇರಿಸುವ ಧಾವಂತ. ಆದರೆ, ಈ ಪಾಲಕರ ನಂಬಿಕೆಗೆ ಅನುಗುಣವಾಗಿ ಇರುವ ಶಾಲೆಗಳೆಷ್ಟು? ಎಂದು ಪ್ರಶ್ನಿಸಿದ್ದಾರೆ.

ಶಾಲಾ ನೋಂದಣಿ ಅನುಮತಿ ಪಡೆಯದೇ ಇರುವುದು, ನೋಂದಣಿ ಇಲ್ಲದೆಯೇ ತರಗತಿಗಳನ್ನು ಉನ್ನತೀಕರಿಸಿರುವುದು, ಶಾಲಾ ಪಠ್ಯಕ್ರಮ ಅನುಮತಿ ಪಡೆದು ಬೇರೆ ಪಠ್ಯಕ್ರಮ ಬೋಧನೆ ಮಾಡುವುದು, ಅನುಮತಿ ಇಲ್ಲದ ಮಾಧ್ಯಮ ಬೋಧನೆ ಮಾಡುವುದು, ಒಪ್ಪಿಗೆ ಪಡೆಯದೆ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವುದು ಸೇರಿದಂತೆ ವಿವಿಧ ರೀತಿಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಖಾಸಗಿ ಶಾಲೆಗಳನ್ನು ಶಿಕ್ಷಣ ಇಲಾಖೆಯೇ ಅನಧಿಕೃತ ಎಂದು ಘೋಷಿಸಿದೆ ಎಂದು ತಿಳಿಸಿದ್ದಾರೆ.

ತಮ್ಮ ಮಕ್ಕಳು ಸೇರುವ ಶಾಲೆ ಅಧಿಕೃತವೋ ಅಥವಾ ಅನಧಿಕೃತವೋ ಎಂಬುದನ್ನು ತಿಳಿಯುವ ಹಕ್ಕು ಪಾಲಕರಿಗೆ ಇದೆ. ಅದನ್ನು ತಿಳಿಸುವ ಕರ್ತವ್ಯ ಶಿಕ್ಷಣ ಇಲಾಖೆಗೆ ಇದೆ. ಈ ನಿಟ್ಟಿನಲ್ಲಿ ಸರ್ಕಾರವೇ ಅಧಿಕೃತ ಶಾಲೆಗಳ ಪಟ್ಟಿಯನ್ನು ಏಪ್ರಿಲ್ 24 ರೊಳಗೆ ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಛೇರಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿತ್ತು. ಇದರಿಂದ ಅಧಿಕೃತ ಶಾಲೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚಲು ಪಾಲಕರಿಗೆ ಸುಲಭವಾಗುತ್ತದೆ ಎಂಬ ಶಿಕ್ಷಣ ಇಲಾಖೆಯ ಆಲೋಚನೆ ಅತ್ಯಂತ ಯೋಗ್ಯವಾಗಿದೆ ಎಂದಿದ್ದಾರೆ.

ಆದರೆ, ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೆ ಸರ್ಕಾರ ನೀಡಿದ ಗಡುವು ಮುಗಿದ ಎರಡು ವಾರವಾದರೂ ಬಹುತೇಕ ಬಿಇಒ ಗಳು ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸದೇ ಕಾಲದೂಡಿದ್ದಾರೆ. ಇದರಿಂದ ನಷ್ಟವಾಗುವುದು ಮಕ್ಕಳಿಗೆ ಮತ್ತು ಪಾಲಕರಿಗೆ ಮಾತ್ರ ಶಾಲೆಗಳ ವಿವರಣಾ ಪುಸ್ತಕದ ಮಾಹಿತಿ ನಂಬಿ ಪಾಲಕರು ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಭವಿಷ್ಯದಲ್ಲಿ ಈ ಶಾಲೆಗಳಿಗೆ ಆಪತ್ತು ಎದುರಾದರೆ, ಈ ಮೋಸಕ್ಕೆ ಪಾಲಕರ ಹೊಣೆಯಾಗಬೇಕಾಗುತ್ತದೆ. ಅವರದಲ್ಲದ ತಪ್ಪಿಗೆ ನೋವು ಮತ್ತು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಆದ್ದರಿಂದ, ಕೂಡಲೇ ರಾಜ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯಾ ಜಿಲ್ಲೆಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಪಟ್ಟಿ ಪ್ರಕಟವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮ ಮತದಾನ : MLC ಎಂಟಿಬಿ ನಾಗರಾಜ್ ಗಂಭೀರ ಆರೋಪ

Teacher Jobs: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳೇ ಗಮನಿಸಿ: ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share.
Exit mobile version