ಕೆಎನ್ಎನ್ ಸಿನಿಮಾ ಡೆಸ್ಕ್: ಸಿದ್ಧಸೂತ್ರಗಳ ಸರಹದ್ದು ದಾಟಿದ ಚಿತ್ರಗಳು ಕನ್ನಡದಲ್ಲಿ ಆಗಾಗ ಸದ್ದು ಮಾಡುತ್ತವೆ. ಕನ್ನಡ ಚಿತ್ರರಂಗದ ಘನತೆಯನ್ನು ಗಡಿಗಳಾಚೆಗೂ ಎತ್ತಿ ಹಿಡಿದು ಇತಿಹಾಸ ಬರೆಯುತ್ತವೆ. ಆ ಸಾಲಿಗೆ ಇತ್ತೀಚಿನ ಸೇರ್ಪಡೆಯಂತಿರುವ ಚಿತ್ರ `ಪಿಂಕಿ ಎಲ್ಲಿ?’. ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳಿಗೆ ಭಾಜನವಾಗಿರುವ ಈ ಚಿತ್ರವೀಗ ಬಿಡುಗಡೆಗೆ ಅಣಿಗೊಂಡಿದೆ. ಬಹುಮುಖ ಪ್ರತಿಭೆಯ ಖ್ಯಾತ ನಿರ್ಮಾಪಕ ಕೃಷ್ಣೇ ಗೌಡ ಅವರು ನಿರ್ಮಾಣ ಮಾಡಿ, ಪೃಥ್ವಿ ಕೋಣನೂರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಇದೇ ಜೂನ್ 2ರಂದು ಅದ್ದೂರಿಯಾಗಿ ತೆರೆಗಾಣಲಿದೆ.
ಸತ್ಯ ಘಟನೆಯನ್ನಾಧರಿಸಿ ರೂಪುಗೊಂಡಿರುವ ಈ ಸಿನಿಮಾ ಭಿನ್ನ ಧಾಟಿಯದ್ದು. ಕಮರ್ಶಿಯಲ್ ಅಲೆಯ ಅಬ್ರದಾಚೆಗೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ, ವಾಸ್ತವಿಕ ನೆಲೆಯಲ್ಲಿಯೇ ಕುತೂಹಲ ನಿಗಿನಿಗಿಸುವಂತೆ ಮಾಡುವ, ಕಣ್ಣಂಚನ್ನು ತೇವಗೊಳಿಸುತ್ತಲೇ ಆಲೋಚನೆಗೆ ಹಚ್ಚುವ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಒಂದು ಮನಸು ಮುರಿದ ದಂಪತಿ ಮತ್ತು ಪುಟ್ಟ ಮಗುವಿನ ಸುತ್ತಾ, ನಾನಾ ಕಾಡುವ ಪಾತ್ರಗಳೊಂದಿಗೆ ಚಲಿಸುವ ಈ ಕಥಾನಕ ಕನ್ನಡದ ಮಟ್ಟಿಗೆ ಹೊಸಾ ದಿಕ್ಕಿನತ್ತ ತೆರೆದುಕೊಳ್ಳುವ ವಿಭಿನ್ನ ಪ್ರಯತ್ನವೆಂದರೂ ತಪ್ಪೇನಲ್ಲ.
ಸಾಮಾನ್ಯವಾಗಿ ಸಿನಿಮೋತ್ಸವಗಳಲ್ಲಿ ಪ್ರದರ್ಶಿತಗೊಂಡ, ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾಗಳು ಕಮರ್ಶಿಯಲ್ ಸಿನಿಮಾಗಳಿಗೆ ಪೈಪೋಟಿ ಕೊಟ್ಟು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗೋದು, ಸಾಮಾನ್ಯ ಪ್ರೇಕ್ಷಕರನ್ನು ತಲುಪೋದು ಅತ್ಯಂತ ಅಪರೂಪ. ಆದರೆ ನಿರ್ಮಾಪಕರಾದ ಕೃಷ್ಣೇಗೌಡರು ಅದನ್ನು ಸಾಧ್ಯವಾಗಿಸಿದ್ದಾರೆ. ನಿರ್ದೇಶಕ ಪೃಥ್ವಿ ಕೋಣನೂರರ ಕಲಾವಂತಿಕೆ ಅದಕ್ಕೆ ಸೂಕ್ತ ರೀತಿಯಲ್ಲಿ ಸಾಥ್ ಕೊಟ್ಟಿದೆ. ಈ ಹಿಂದೆ ಐಲ್ವೇ ಚಿಲ್ಡ್ರನ್ ಅಂತೊಂದು ಚೆಂದದ ಚಿತ್ರ ಮಾಡಿ ಗಮನ ಸೆಳೆದಿದ್ದ ಪೃಥ್ವಿ, ಈ ಮೂಲಕ ಮತ್ತೊಂದು ಭಿನ್ನ ಚಿತ್ರದೊಂದಿಗೆ ಅಚ್ಚರಿ ಮೂಡಿಸಿದ್ದಾರೆ.
ಈ ಸಿನಿಮಾದಲ್ಲಿ ಅತ್ಯಂತ ಸಹಜ ಸ್ಥಿತಿಯಲ್ಲಿ ಕದಲುವ ನಾನಾ ಪಾತ್ರಗಳಿದ್ದಾವೆ. ಅದರಲ್ಲಿ ಪ್ರಧಾನ ಪಾತ್ರವನ್ನು ಪ್ರತಿಭಾನ್ವಿತ ರಂಗಭೂಮಿ ಕಲಾವಿದೆ, ನಟಿ ಅಕ್ಷತಾ ಪಾಂಡವಪುರ ನಿಭಾಯಿಸಿದ್ದಾರೆ. ಸವಾಲಿನದ್ದಾದ ಈ ಪಾತ್ರವನ್ನು ಲೀಲಾಜಾಲವಾಗಿ ಆವಾಹಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿಕೊಂಡಿದ್ದಾರೆ. ಪ್ರಶಸ್ತಿಗೂ ಭಾಜನರಾಗಿದ್ದಾರೆ. ದೀಪಕ್ ಸುಬ್ರಮಣ್ಯ, ಪೃಥ್ವಿ ಕೋಣನೂರು ಮುಂತಾದವರ ತಾರಾಗಣವಿದೆ.
ವಿಶೇಷ ವಿಚಾರವೆಂದರೆ, ಎಲ್ಲ ಬಗೆಯಲ್ಲಿಯೂ ಪಿಂಕಿ ಎಲ್ಲಿ ಚಿತ್ರ ದಾಖಲೆಗಳನ್ನು ಬರೆಯುತ್ತಿದೆ. ಈ ಬಗೆಯ ಚಿತ್ರಗಳು ವ್ಯಾವಹಾರಿಕವಾಗಿ ಗೆಲುವು ಕಾಣೋದು ಕಷ್ಟ ಎಂಬಂಥಾ ವಾತಾವರಣ ಇದುವರೆಗಿತ್ತು. ಆದರೆ ಪಿಂಕಿ ಎಲ್ಲಿ ಚಿತ್ರ ಅದನ್ನು ಸುಳ್ಳಾಗಿಸಿದೆ. ಈಗಾಗಲೇ ಇದರ ರೀಮೇಕ್ ಹಕ್ಕುಗಳಿಗೆ ಬೇಡಿಕೆ ಬರುತ್ತಿದೆ. ಡಬ್ಬಿಂಗ್ ರೈಟ್ಸ್‍ಗೂ ಮಾತುಕಥೆ ಚಾಲ್ತಿಯಲ್ಲಿದೆ. ಇದೆಲ್ಲವೂ ಚಿತ್ರತಂಡವನ್ನು ಖುಷಿಗೊಳಿಸಿದೆ. ಇಂಥಾ ನಾನಾ ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾ ಇದೇ ಜೂನ್ 2ರಂದು ನಿಮ್ಮ ಮುಂದೆ ಹಾಜರಾಗಲಿದೆ.