ಇಸ್ಲಾಮಾಬಾದ್ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪಾಕಿಸ್ತಾನ ಸರ್ಕಾರ ಪ್ರತಿ ಲೀಟರ್ ಗೆ 35 ರೂಪಾಯಿ ಹೆಚ್ಚಿಸಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಘೋಷಣೆ ಮಾಡಿದ್ದಾರೆ ಮತ್ತು ಇದು ಜನವರಿ 29 ರಂದು ಬೆಳಿಗ್ಗೆ 11 ಗಂಟೆಯಿಂದ ಜಾರಿಗೆ ಬಂದಿದೆ ಎಂದು ಡಾನ್ ವರದಿ ಮಾಡಿದೆ.
ಇಶಾಕ್ ದಾರ್ ಭಾನುವಾರ ದೂರದರ್ಶನ ಭಾಷಣದಲ್ಲಿ ಈ ಘೋಷಣೆ ಮಾಡಿದ್ದಾರೆ. ಸೀಮೆಎಣ್ಣೆ ಮತ್ತು ಲಘು ಡೀಸೆಲ್ ತೈಲದ ಬೆಲೆಯನ್ನು ಪ್ರತಿ ಲೀಟರ್ ಗೆ 18 ಪಿಕೆಆರ್ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಪಾಕಿಸ್ತಾನದ ಹಣಕಾಸು ಸಚಿವಾಲಯವು ಟ್ವೀಟ್ ನಲ್ಲಿ ಪೆಟ್ರೋಲ್ ನ ಹೊಸ ಬೆಲೆ ಲೀಟರ್ ಗೆ 249.80 ಪಿಕೆಆರ್ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 262.80 ಎಂದು ತಿಳಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಖರೀದಿ ವೆಚ್ಚ ಹೆಚ್ಚಾಗಿರುವುದರಿಂದ ತೈಲ ಮತ್ತು ಅನಿಲ ಅಧಿಕಾರಿಗಳು ಬೆಲೆ ಏರಿಕೆಗೆ ಶಿಫಾರಸು ಮಾಡಿದ್ದಾರೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಹೇಳಿದ್ದಾರೆ. ದೇಶದ ಪ್ರಸ್ತುತ ಧನಸಹಾಯ ಕಾರ್ಯಕ್ರಮದ ಸ್ಥಗಿತಗೊಂಡ ಒಂಬತ್ತನೇ ಪರಾಮರ್ಶೆಯ ಬಗ್ಗೆ ಚರ್ಚಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ ಮಿಷನ್ ಪಾಕಿಸ್ತಾನಕ್ಕೆ ಭೇಟಿ ನೀಡುವ ಕೆಲವು ದಿನಗಳ ಮೊದಲು ಈ ನಿರ್ಧಾರ ಬಂದಿದೆ.