ಬೆಂಗಳೂರು: 165 ರಲ್ಲಿ 158 ಭರವಸೆ ಈಡೇರಿಸಿದ್ದೇವೆ ಎಂದು ಕಾಂಗ್ರೆಸ್‌ ( Congress ) ಹೇಳುತ್ತಿದೆ. ಇದು ಶತಮಾನದ ಸುಳ್ಳು! ಅಸಲಿಗೆ ಕಾಂಗ್ರೆಸ್‌ 173 ಭರವಸೆ ನೀಡಿತ್ತು. ಕಾಂಗ್ರೆಸ್‌ ಇಲ್ಲೂ ಸುಳ್ಳು ಹೇಳುತ್ತಿದೆ. 173 ಭರವಸೆಗಳಲ್ಲಿ ಈಡೇರಿಸಿದ್ದು ಕೇವಲ 67 ಮಾತ್ರ! ಸುಳ್ಳಿನ‌ ಆರಾಧನೆಯ ಮೂಲಕ‌‌ ಅಧಿಕಾರಕ್ಕೇರುವ ಹಪಾಹಪಿಯೇ? ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ಪ್ರಶ್ನಿಸಿದೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, 2013 ರಲ್ಲಿ ನೀಡಲಾದ ಭರವಸೆಗಳಲ್ಲಿ 95% ರಷ್ಟನ್ನು ಕಾಂಗ್ರೆಸ್ ಈಡೇರಿಸಿದೆ ಎನ್ನುವುದೇ ಒಂದು ದೊಡ್ಡ ಸುಳ್ಳು. ಪ್ರಣಾಳಿಕೆಯಲ್ಲಿದ್ದ ಮೊತ್ತ ಮೊದಲ ಭರವಸೆಯೇ ಜಾರಿಯಾಗಿಲ್ಲ. ಘೋಷಿಸಿರುವ ಎಲ್ಲಾ ಅಂಶಗಳ ಜಾರಿ ಹಾಗೂ ಮೇಲುಸ್ತುವಾರಿಗೆ ಸಮಿತಿ ರಚಿಸುತ್ತೇವೆ ಎಂದು ಹೇಳಿ ಅದರಿಂದ ನುಣುಚಿಕೊಂಡಿತ್ತು ಎಂದಿದೆ.

2013 ರಲ್ಲಿ ಕಾಂಗ್ರೆಸ್ ಕೃಷಿ ಪಂಪ್‌ಸೆಟ್‌ ಮತ್ತು ಗೃಹ ಬಳಕೆಗೆ 24 ಗಂಟೆ ವಿದ್ಯುತ್‌ ಪೂರೈಸುವ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ 5 ವರ್ಷ ಪೂರೈಸಿದ್ದರೂ ಈ ಭರವಸೆ ಈಡೇರಲಿಲ್ಲ. ಕಾಂಗ್ರೆಸ್ಸಿಗರೇ, ಸುಳ್ಳು ನಿಮ್ಮ ಮನೆ ದೇವರೇ? ಎಂದು ವಾಗ್ಧಾಳಿ ನಡೆಸಿದೆ.

ವಿಪಕ್ಷ ನಾಯಕ ಸಿದ್ಧರಾಮಯ್ಯ  ಅವರು, ಪ್ರಣಾಳಿಕೆಯಲ್ಲಿ ನೀಡಿದ್ದ ಅಷ್ಟೂ ಭರವಸೆಗಳನ್ನು ಈಡೇರಿಸಿದ್ದಾಗಿ ಭಾಷಣ ಮಾಡುತ್ತಾರೆ. ಕಾಂಗ್ರೆಸ್ ನೀಡಿದ ಭರವಸೆಗಳ ಪೈಕಿ ಒಂದನ್ನಾದರೂ ಕಾಂಗ್ರೆಸ್ ಪಕ್ಷ ಸರಿಯಾಗಿ ಜಾರಿ ಮಾಡಿದೆಯೇ? ಎಂದು ಕಿಡಿಕಾರಿದೆ.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ಮೇಲ್ದರ್ಜೆಗೆ ಏರಿಸುವುದಾಗಿ ಕಾಂಗ್ರೆಸ್ ನಾಡಿನ ಜನತೆಗೆ ಭರವಸೆ ನೀಡಿತ್ತು. ಆದರೆ ಸಚಿವರಾಗಿದ್ದ ಆಂಜನೇಯ ಹಾಸಿಗೆ ದಿಂಬಿನ ಹೆಸರಲ್ಲಿ ಅಕ್ರಮವೆಸಗಿ ರಾಜ್ಯದ ಹಿಂದುಳಿದ ವರ್ಗಕ್ಕೆ ಅನ್ಯಾಯ ಬಗೆದಿತ್ತು. ನುಡಿದಂತೆ ಏಕೆ‌ ನಡೆದಿಲ್ಲ? ಎಂದಿದೆ.

ಕಾಂಗ್ರೆಸ್, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಿಸುವ ಘೋಷಣೆ ಮಾಡಿತ್ತು. ಇದೆಲ್ಲಾ ಘೋಷಣೆಯಲ್ಲೇ ಉಳಿದಿದೆ, ಹಾಗಾದರೆ ಕಾಂಗ್ರೆಸ್ ಮಾಡಿದ್ದೇನು? ಎಲ್ಲಾ ಭರವಸೆ ಈಡೇರಿಸಿದ್ದೇವೆ ಎಂದು ಯಾವ ಮುಖ ಇಟ್ಟುಕೊಂಡು ಜನತೆಯ ಮುಂದೆ ಸುಳ್ಳು ಹೇಳುತ್ತಿದ್ದೀರಿ? ಎಂದು ಕೇಳಿದೆ.

ಬೀದರ್ – ಚಾಮರಾಜನಗರ ಹೆದ್ದಾರಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಸ್ಲಂ ಮುಕ್ತ ಬೆಂಗಳೂರು ಸೇರಿದಂತೆ ಕಾಂಗ್ರೆಸ್ ಈಡೇರಿಸದ ಭರವಸೆಗಳ ಪಟ್ಟಿ ಉದ್ದವಿದೆ. ಯೋಜನೆಗಳ ಹೆಸರಿನಲ್ಲಿ ಮಾಡಿದ ಭ್ರಷ್ಟ ಹಣ ಕಾಂಗ್ರೆಸ್‌ ಭ್ರಷ್ಟರ ಜೇಬು ಸೇರಿದರೆ, ಉಳಿದ ಭರವಸೆಗಳು ಕಸದ ಬುಟ್ಟಿಯಲ್ಲಿದೆ ಎಂಬುದಾಗಿ ಗುಡುಗಿದೆ.

Share.
Exit mobile version