ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲ್ಗುಣದಿಂದಾಗಿ ರಾಜ್ಯದಲ್ಲಿ ಬರಗಾಲ ಬಂದಿದೆ. ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಕೋಟಿಗಟ್ಟಲೆ ರೂಪಾಯಿ ಸಾಲ ಮಾಡುವುದರ ಜೊತೆಗೆ, ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಹಣ ನೀಡಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರ ರಿಪೋರ್ಟ್‌ ಕಾರ್ಡ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಬಂದ ಹಿಂದೂಗಳು ರಸ್ತೆ ಬದಿಯಲ್ಲಿ ಬದುಕುತ್ತಿದ್ದಾರೆ. ಇದುವರೆಗೆ ಅವರಿಗೆ ಬದುಕುವ ಅವಕಾಶವನ್ನೇ ನೀಡಲಿಲ್ಲ. ಕಾಂಗ್ರೆಸ್‌ನವರಿಗೆ ಕರುಣೆಯೇ ಇಲ್ಲ. ಆದರೆ ಅವರಿಗೆ ಪೌರತ್ವವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದಾಗಿ ವಿಧಾನಸೌಧದಲ್ಲೇ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದರು. ಅವರಿಗೆ ಸರ್ಕಾರ ಬಿರಿಯಾನಿ ಕೊಟ್ಟು ಕಳುಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಸರಿನಲ್ಲೇ ರಾಮ ಇದ್ದಾನೆ ಎನ್ನುತ್ತಾರೆ. ಹಾಗೆಯೇ ವೀರಪ್ಪನ್‌ ಕೂಡ ದೇವರ ಹೆಸರು ಇಟ್ಟುಕೊಂಡಿದ್ದ. ದೇವರ ಹೆಸರು ಹೃದಯದಲ್ಲಿ ಇರಬೇಕು. ರಾಮಮಂದಿರ ಕಟ್ಟಿದರೂ ಕಾಂಗ್ರೆಸ್‌ ನಾಯಕರು ಅಲ್ಲಿಗೆ ಹೋಗಲಿಲ್ಲ. ಮೋದಿಯವರು ಇಲ್ಲದಿದ್ದರೆ ಮಂದಿರ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ರಾಮನ ಹೆಸರಿನಿಂದ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಆದರೆ ದೀಪದ ಜ್ವಾಲೆ ಹೊತ್ತುತ್ತದೆ ಎಂದರು.

ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಯವರ ಆಡಳಿತಾವಧಿಯಲ್ಲಿ ಒಂದು ಬಾರಿಯೂ ಬರಗಾಲ ಬರಲಿಲ್ಲ. ನಾನು ಸಚಿವನಾಗಿದ್ದಾಗ ಮನೆಗೆ ನೀರು ನುಗ್ಗಿದೆ ಎಂದು ಜನರು ದೂರು ಹೇಳುತ್ತಿದ್ದರು. ಸಿಎಂ ಸಿದ್ದರಾಮಯ್ಯನವರ ಕಾಲ್ಗುಣದಿಂದಾಗಿ ಬರಗಾಲ ಬಂದಿದೆ. 2013 ರಿಂದ 2018 ರವರೆಗೂ ಬರಗಾಲ ಇತ್ತು, ಈಗಲೂ ಇದೆ. ಬಿಜೆಪಿ ಸರ್ಕಾರ ಬಂದ ಕೂಡಲೇ ವಿಪರೀತ ಮಳೆಯಾಗಿತ್ತು. ಅಂದು ಜಲಾಶಯಗಳು ತುಂಬಿದ್ದರೆ ಈಗ ಬರಿದಾಗಿದೆ. ಕುಡಿಯಲು ನೀರು, ಗೋವುಗಳಿಗೆ ಮೇವು ಇಲ್ಲ. ಒಂದೇ ಒಂದು ಗೋಶಾಲೆಯನ್ನೂ ನಿರ್ಮಿಸಿಲ್ಲ. ಇನ್ನೂ ಐವತ್ತು ಗ್ಯಾರಂಟಿಗಳನ್ನು ಕಾಂಗ್ರೆಸ್‌ ನೀಡಲಿ. ಆದರೆ ಇವರು ಮಾಡಿರುವ ಸಾಲವನ್ನು ನಾವು ವಿರೋಧಿಸುತ್ತೇವೆ ಎಂದರು.

ಇಡೀ ಕರ್ನಾಟಕದಲ್ಲಿ ಅಭಿವೃದ್ಧಿಗೆ ಒಂದೇ ಒಂದು ರೂಪಾಯಿಯನ್ನು ಸರ್ಕಾರ ನೀಡಿಲ್ಲ. ಕಾಂಗ್ರೆಸ್‌ನ ಯೋಗ್ಯತೆಯಿಂದಾಗಿ ಬರಗಾಲ ಬಂದು ಜನರು ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಸರ್ಕಾರ ಪಾಪರ್‌ ಆಗಿ ಗತಿ ಕೆಟ್ಟಿದ್ದು, ಎಲ್ಲ ಕಡೆ ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆ ಮೇಲೂ 97 ಸಾವಿರ ರೂಪಾಯಿ ಸಾಲವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಎಲ್ಲ ಜನರು ಸಾಲಗಾರರಾಗಿದ್ದಾರೆ. ಹೀಗೆಯೇ ಬಿಟ್ಟರೆ ಎರಡು ಲಕ್ಷ ಸಾಲ ಮಾಡಿ ಓಡಿಹೋಗುತ್ತಾರೆ. ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದು ಎಲ್ಲರನ್ನೂ ಹಳ್ಳಕ್ಕೆ ತಳ್ಳುತ್ತಾರೆ ಎಂದರು.

ಇವರು ಹೇಳುವ ಅನ್ನಭಾಗ್ಯ ವಾಸ್ತವದಲ್ಲಿ ಮೋದಿ ಭಾಗ್ಯವಾಗಿದೆ. ಒಂದು ಕಾಳು ಅಕ್ಕಿಯನ್ನೂ ಇವರು ನೀಡಿಲ್ಲ. ಮನೆಮನೆಗೆ ಕೊಳಾಯಿ ನೀರು ನೀಡುತ್ತೇವೆಂದು ಹೇಳಿದರೂ ಅದನ್ನು ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ನಡಿ ನೀಡಲಾಗುತ್ತಿದೆ. ಕೋವಿಡ್‌ ಸಮಯದಲ್ಲಿ ಎಲ್ಲರಿಗೂ ಲಸಿಕಾಕರಣ ಮಾಡಿಸಲಾಯಿತು ಎಂದರು.

ದಲಿತರಿಗೆ ಮೀಸಲಿಟ್ಟ ಹಣ ನುಂಗಿದ್ದಾರೆ

ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಮನೆಹಾಳು ಕಾಂಗ್ರೆಸ್‌ ಸರ್ಕಾರ ನುಂಗಿದೆ. ಒಟ್ಟು 11,000 ಕೋಟಿ ರೂಪಾಯಿಯನ್ನು ಗ್ಯಾರಂಟಿಗೆ ಬಳಸಿ ನುಂಗಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನವನ್ನು ಗೌರವಿಸಿದ್ದೇವೆ ಎಂದು ಹೇಳುವ ಕಾಂಗ್ರೆಸ್‌, ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ಆಗ ಮತ್ತೆ ಬಿಜೆಪಿ ನಾಯಕರು ಅವರನ್ನು ಬೆಂಬಲಿಸಿದರು. ಅಂಬೇಡ್ಕರ್‌ ಮೃತಪಟ್ಟಾಗ ಅವರಿಗೆ ಮಣ್ಣು ಮಾಡಲು ಕಾಂಗ್ರೆಸ್ ಜಾಗ ನೀಡಲಿಲ್ಲ. ಇದು ದಲಿತರ ವಿರೋಧಿ ಸರ್ಕಾರ. ಪ್ರಧಾನಿ ಮೋದಿ ಅಂಬೇಡ್ಕರ್‌ಗೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಮೋಸದ ಗಿರಾಕಿ. ಬಡಜನರು ಹಗಲಿಡೀ ಕಷ್ಟಪಟ್ಟು ದುಡಿದು ಸಂಜೆ ಎಣ್ಣೆ ಹಾಕಲು ಹೋದರೆ ಅದರ ದರವನ್ನೂ ಹೆಚ್ಚಿಸಿದ್ದಾರೆ. ಹಾಲಿನ ಬೆಲೆಯನ್ನೂ ಜಾಸ್ತಿ ಮಾಡಿದ್ದಾರೆ. ಉಚಿತ ವಿದ್ಯುತ್‌ ಎಂದು ಹೇಳಿ ಅದರ ದರವನ್ನೂ ಹೆಚ್ಚಿಸಿದರು. ಗಂಡನ ಜೇಬಿಗೆ ಕತ್ತರಿ ಹಾಕಿ ಅದನ್ನು ಹೆಂಡತಿಗೆ ನೀಡುವ ಕೆಲಸ ಮಾಡಿದ್ದಾರೆ. ಮಾರ್ಗಸೂಚಿ ದರ ಹೆಚ್ಚು ಮಾಡಿದ್ದಾರೆ. ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡರೂ ಸರ್ಕಾರಕ್ಕೆ ಹಣ ಕೊಡಬೇಕಾಗಿದೆ. ನಾನು ಕಂದಾಯ ಸಚಿವನಾಗಿದ್ದಾಗ ಮಾರ್ಗಸೂಚಿ ದರ ಕಡಿಮೆ ಮಾಡಿದ್ದೆ. ನಾವು ಕಡಿಮೆ ಮಾಡಿದ್ದನ್ನು ಈಗಿನ ಸರ್ಕಾರ ಹೆಚ್ಚಳ ಮಾಡಿದೆ ಎಂದರು.

ದಾವಣಗೆರೆಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಸಂಸದೆಯಾಗಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ನನ್ನ ಶ್ರೀಮತಿ ಪ್ರಚಾರ ಮಾಡಿದ್ದರು. ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತರಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಗೆದ್ದು ಅಭಿವೃದ್ಧಿ ತರಬೇಕು. ಅವರಿಗಾಗಿ ಎಲ್ಲ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.

ಕೇಂದ್ರದ ‘ಅನುದಾನ’ ತಾರತಮ್ಯದಿಂದ ರಾಜ್ಯಕ್ಕೆ ‘ಆರ್ಥಿಕ ಸವಾಲು’ಗಳು ಎದುರಾಗಿವೆ : ಕೃಷ್ಣ ಭೈರೇಗೌಡ ಆಕ್ರೋಶ

ಬೆಂಗಳೂರಲ್ಲಿ ‘ಕಿಲ್ಲರ್ BMTC’ಗೆ ಮತ್ತೊಂದು ಬಲಿ: ರಸ್ತೆದಾಟುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

Share.
Exit mobile version