ಬೆಂಗಳೂರು : ಇಂದು ಮಧ್ಯಾಹ್ನ 02 ರಿಂದ ಸಂಜೆ 05.20 ರವರೆಗೆ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ರ ಅಡಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕದ 29 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿ ಸೇರಿ 13 ಭಾಷೆಗಳಲ್ಲಿ ‘ನೀಟ್‌’ ಬರೆಯಲು ಅವಕಾಶವಿದೆ.

ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದಾರೆ. ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ನಿಷೇಧಿಸಿದೆ ಹಾಗೂ ಆ ದಿನದಂದು ಮಧ್ಯಾಹ್ನ 01 ರಿಂದ ಸಂಜೆ 05.30 ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಝೆರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ. ಈ ಆದೇಶವು ಪರೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ

ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಕೇಂದ್ರಗಳನ್ನು ತಲುಪಬೇಕು.
ಯಾವುದೇ ಆಭರಣಗಳನ್ನು ಧರಿಸಬಾರದು.
ಬಾಲಕರು ಅರ್ಧ ತೋಳಿನ ಅಂಗಿ, ಸರಳವಾದ ಪ್ಯಾಂಟ್ ಧರಿಸಬೇಕು.
ಸರಳವಾದ ತಿಳಿ ಬಣ್ಣದ ಡೆನಿಮ್‌ ಪ್ಯಾಂಟ್ ಮತ್ತು ಅರ್ಧ ತೋಳಿನ ಬಟ್ಟೆಯನ್ನು ಧರಿಸಲು ಬಾಲಕಿಯರಿಗೆ ಅನುಮತಿಸಲಾಗಿದೆ.
ಬಟ್ಟೆಗಳ ಮೇಲಿನ ಗುಂಡಿಗಳು ಮಧ್ಯಮ ಗಾತ್ರದಲ್ಲಿರಬೇಕು ಎಂದು ಸೂಚಿಸಲಾಗಿದೆ.
ಪರೀಕ್ಷಾ ಕೊಠಡಿಯೊಳಗೆ ಯಾವುದೇ ಡಿಜಿಟಲ್‌ ಸಾಧನಗಳು, ಕ್ಯಾಲ್ಕ್ಯುಕೇಟರ್, ಕೈಗಡಿಯಾರ, ಹ್ಯಾಂಡ್‌ಬ್ಯಾಗ್, ಬೆಲ್ಟ್, ಕ್ಯಾಪ್, ಜ್ಯಾಮಿತಿ, ಪೆನ್ಸಿಲ್ ಬಾಕ್ಸ್, ಇಯರ್‌ಫೋನ್, ಬ್ಲೂಟೂತ್, ಮೈಕ್ರೊಫೋನ್‌ಗಳನ್ನು ತರುವುದನ್ನು ನಿಷೇಧಿಸಲಾಗಿದೆ.

Share.
Exit mobile version