ಮಂಡ್ಯ:  ಮೈಶುಗರ್ ಸಕ್ಕರೆ ಕಾರ್ಖಾನೆ ಸೆಪ್ಟೆಂಬರ್‌  30 ರೊಳಗಾಗಿ ಸಂಪೂರ್ಣವಾಗಿ ಚಾಲನೆಗೊಳ್ಳಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಅವರು ತಿಳಿಸಿದರು. 

ಅವರ ಇತ್ತೀಚಿಗೆ ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಖಾನೆಯ ಕೆಲಸ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಕಾರ್ಖಾನೆಯ ಎರಡನೇ ಬಯ್ಲರ್ ನ   ಕಾರ್ಯ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಬೇಕು ಎಂದರು. ಮೈ ಶುಗರ್ ಕಾರ್ಯವ್ಯಾಪ್ತಿಗೆ ಬರುವ ಕಬ್ಬನ್ನು‌ ಬೇರೆ ಕಾರ್ಖಾನೆಯವರು ಕಟಾವು ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಮೈಶುಗರ್ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೇರೆ ಕಡೆಗೆ ಸಾಗಾಣಿಕೆಯಾಗುತ್ತಿದ್ದಲ್ಲಿ ವಶ ಪಡಿಸಿಕೊಳ್ಳಲು ಕ್ರಮ ವಹಿಸಿ ಎಂದರು.

ರೈತರಲ್ಲಿ ವಿಶ್ವಾಸ ಮೂಡಿಸಿ:  ರೈತರಿಂದ ಕಬ್ಬು ಖರೀದಿಸಿ ನಿಗದಿತ ಅವಧಿಯೊಳಗೆ ಪಾವತಿ ಮಾಡಿ. ಇದರಿಂದ ರೈತರಲ್ಲಿ ಕಾರ್ಖಾನೆಯ ಬಗ್ಗೆ ವಿಶ್ವಾಸ ಹೆಚ್ಚಳವಾಗಿ, ಮೈ ಶುಗರ್ ವ್ಯಾಪ್ತಿಯ ಕಬ್ಬನ್ನು ಮೈಶುಗರ್ ಸಕ್ಕರೆ ಕಾರ್ಖಾನೆಗೆ ನೀಡುತ್ತಾರೆ ಎಂದರು.

ಸೆ.30 ರ ನಂತರ ಮುಖ್ಯಮಂತ್ರಿಗಳನ್ನು ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಆಹ್ವಾನಿಸಿ, ಇಲ್ಲಿಯ ಎಲ್ಲಾ ಘಟಕಗಳ ಕಾರ್ಯನಿರ್ವಾಹಣೆಯನ್ನು  ಪರಿಚಯಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಖುದ್ದು ಸೆ.30 ರೊಳಗಾಗಿ ಸಕ್ಕರೆ ಕಾರ್ಖಾನೆಗೆ ಭೇಟಿ‌ ನೀಡಿ ಪರಿಶೀಲಿಸುತ್ತೇನೆ ಎಂದರು. ಸಕ್ಕರೆ ಕಾರ್ಖಾನೆ ಪುನರರಾಂಭಗೊಂಡಿರುವುದರಿಂದ ಸಣ್ಣ ಪುಟ್ಟ ತೊಂದರೆಗಳು ಉಂಟಾಗಬಹುದು. ಅವುಗಳನ್ನು ಸರಿಪಡಿಸಿಕೊಂಡು‌ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಬೇಕು‌  ಎಂದು‌ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ: ನಾರಾಯಣ ಗೌಡ ಕೆ.ಸಿ ಅವರು ತಿಳಿಸಿದರು.

ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಅವರು ಸಕ್ಕರೆ ಕಾರ್ಖಾನೆಯ‌ ಕಾರ್ಯನಿರ್ವಹಣೆಯ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಸಚಿವರಿಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಜಯರಾಮ್ ರಾಯಪುರ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಾಂತಾ ಎಲ್.ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಉಪವಿಭಾಗಾಧಿಕಾರಿ ಆರ್.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share.
Exit mobile version