ಚಿತ್ರದುರ್ಗ : ಹುಬ್ಬಳ್ಳಿಯಲ್ಲಿ ಕೈ ಕಾರ್ಪೊರೇಟರ್ ಪುತ್ರಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ HD ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಕಾರ್ಪೊರೇಟರ್ ಪುತ್ರಿ ನೇಹ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು CBI ಗೆ ವಹಿಸಬೇಕು ಪ್ರಕರಣದ ಸತ್ಯಂಶ ಏನಿದೆ ತನಿಖೆಯ ನಂತರ ಅದು ಹೊರಗೆ ಬರಲಿ ಎಂದು ಪರಶುರಾಮಪುರದಲ್ಲಿ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಗದಗದಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿದೆ. ರಾಜಾರೋಷವಾಗಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೆ ಸರ್ಕಾರ ಅಂತ ಕರೆಯುತ್ತೀರಾ? ಎಂತಹ ಆಡಳಿತ ನಡೆಯುತ್ತಿದೆ? ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಆರೋಪಿಗಳಿಗೆ ಭಯ ಭಕ್ತಿ ಇಲ್ಲದ ವಾತಾವರಣ ಇದೆ. ನೇಹಾ ಕೊಲೆ ಪ್ರಕರಣದ ಬಗ್ಗೆ ಸರ್ಕಾರ ಲಘುವಾಗಿ ಉತ್ತರಿಸುತ್ತಿದೆ.ರಾಜ್ಯವನ್ನ ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೆಂದು ಜನ ಚಿಂತಿಸುತ್ತಿದ್ದಾರೆ ಕಾಂಗ್ರೆಸ್ ಸರ್ಕಾರ ಒಂದು ವರ್ಗವನ್ನು ಓಲೈಸಿಕೊಳ್ಳಲು ಯತ್ನಿಸುತ್ತಿದೆ ಎಂದರು.

Share.
Exit mobile version