ಜಿನೀವಾ : ಮಂಕಿಪಾಕ್ಸ್​ ಪ್ರಕರಣಗಳು ಸದ್ದಿಲ್ಲದೆ ಏರಿಕೆಯಾಗುತ್ತಿವೆ. ಸುಮಾರು 53 ದೇಶಗಳಲ್ಲಿ 5,322 ಕೇಸ್​ಗಳು ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ನೀಡಿದೆ.

ಈ ವರ್ಷದ ಜನವರಿ 1 ರಿಂದ ಜೂನ್ 30 ರವರೆಗೆ ಸುಮಾರು 5,322 ಪ್ರಕರಣಗಳು ವರದಿಯಾಗಿದ್ದು, ಒಂದು ಸಾವು ಸಂಭವಿಸಿದೆ. ಯುರೋಪಿನಲ್ಲಿ ಶೇ.85 ರಷ್ಟು ಕೇಸ್​ಗಳಿದ್ದು ಉಳಿದಂತೆ ಆಫ್ರಿಕನ್ ಪ್ರದೇಶ, ಅಮೇರಿಕಾ, ಪೂರ್ವ ಮೆಡಿಟರೇನಿಯನ್ ಮತ್ತು ಪೆಸಿಫಿಕ್​ನಲ್ಲಿ ಪ್ರಕರಣಗಳು ವರದಿಯಾಗಿವೆ.

ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ವೈರಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿಲ್ಲ. ಆದರೆ ಸೋಂಕು ಹರಡದಂತೆ ನಿಯಂತ್ರಿಸಲು ನಿರ್ಧಿಷ್ಟವಾಗಿ ಗಮನ ಹರಿಸುವಂತೆ ದೇಶಗಳಿಗೆ ವಿಶ್ವ ಸಂಸ್ಥೆ ಆದೇಶಿಸಿದೆ ಎನ್ನಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಂಕಿಪಾಕ್ಸ್ ಪ್ರಕರಣಗಳು ಹರಡುತ್ತಿರುವ ಬಗ್ಗೆ ಗಮನ ಹರಿಸಲಾಗತ್ತಿದೆ. ಪರಿಸ್ಥಿತಿಯು ಮತ್ತಷ್ಟು ವಿಕಸನಗೊಂಡರೆ ಶೀಘ್ರ ಜಾಗತಿಕ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆದಾಗ್ಯೂ, ಜಾಗತಿಕ ಆರೋಗ್ಯ ಸಂಸ್ಥೆ ಇನ್ನೂ ಎರಡನೇ ಸಭೆಯನ್ನು ಕರೆಯಬೇಕಿದೆ.

ಮಂಕಿಪಾಕ್ಸ್‌ನ ದೃಢಪಡಿಸಿದ ಪ್ರಕರಣಗಳಲ್ಲಿ ಹೆಚ್ಚಿನವು ಸಲಿಂಗಕಾಮಿಗಳು, ದ್ವಿಲಿಂಗಿಗಳು ಮತ್ತು ನಗರ ಪ್ರದೇಶಗಳಲ್ಲಿ ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಮತ್ತು ಸಾಮಾಜಿಕ ಮತ್ತು ಲೈಂಗಿಕ ಜಾಲಗಳನ್ನು ಹೊಂದಿರುವ ಇತರ ಪುರುಷರಲ್ಲಿ ದೃಢಪಟ್ಟಿವೆ. ಇಲ್ಲಿಯವರೆಗೆ ಕೆಲವು ಆಸ್ಪತ್ರೆಗೆ ದಾಖಲಾಗಿವೆ. ಇಮ್ಯುನೊಕೊಂಪ್ರೊಮೈಸ್ಡ್ ವ್ಯಕ್ತಿಯಲ್ಲಿ ಒಂದು ಸಾವು ವರದಿಯಾಗಿದೆ ಎನ್ನಲಾಗುತ್ತಿದೆ.

ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವವರು ಸೇರಿದಂತೆ ದುರ್ಬಲ ಜನರಿಗೆ ಏಕಾಏಕಿ ವೈರಸ್​ ಹರಡಿರುವುದರಿಂದ ವಿಶ್ವ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವರದಿಗಳು ಸ್ಪೇನ್ ಮತ್ತು ಫ್ರಾನ್ಸ್‌ನಲ್ಲಿ 18 ವರ್ಷದೊಳಗಿನ ಮಕ್ಕಳಲ್ಲಿ ಸೋಂಕಿಗೆ ಒಳಗಾಗಿದ್ದು, ಮೇ ತಿಂಗಳಿನಿಂದ ಯುಕೆಯಲ್ಲಿ ಎರಡು ಪ್ರಕರಣಗಳು ಕಂಡುಬಂದಿವೆ.

ಹೆಚ್ಚುತ್ತಿರುವ ಸೋಂಕಿನ ಪ್ರವೃತ್ತಿ, ಮುಖ್ಯವಾಗಿ ಪುರುಷರೊಂದಿಗೆ ಲೈಂಗಿಕತೆಯನ್ನು ಹೊಂದಿರುವ ಪುರುಷರಲ್ಲಿ ಕಂಡುಬರುತ್ತದೆ. ಇದು ಮುಂದುವರಿಯುವ ಸಾಧ್ಯತೆಯಿದೆ ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.

Share.
Exit mobile version