ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಂದಿಸಿದ ಆರೋಪದ ಮೇಲೆ ಹಿಂದುತ್ವವಾದಿ ಕೋಮು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಲಬುರಗಿಯಲ್ಲಿ ದೂರು ದಾಖಲಾಗಿದೆ. ಕಲಬುರಗಿ ಪೊಲೀಸ್‌ ಆಯುಕ್ತ ಆರ್‌ ಚೇತನ್ ಅವರಿಗೆ ಕಲಬುರಗಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ್ ಗುತ್ತಿದಾರ ದೂರು ಸಲ್ಲಿಸಿದ್ದಾರೆ.

ರಾಯಚೂರಿನ ಶಿರವಾದಲ್ಲಿ ‘ನಮೋ ಭಾರತ’ ಹೆಸರಿನಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ಮಾತನಾಡಿದ್ದ ಚಕ್ರವರ್ತಿ ಸೂಲಿಬೆಲೆ, “ಕಲಬುರಗಿಯಲ್ಲಿ ಖರ್ಗೆ ಸಾಹೇಬರ ಕಾಲದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ‌ ಮಾಡಲಾಗಿದೆ. ಆಸ್ಪತ್ರೆ ಮೇಲ್ಭಾಗವನ್ನು ಡ್ರೋನ್ ಕ್ಯಾಮರಾ ಮೂಲಕ ನೋಡಿದರೆ ಕಟ್ಟಡಗಳ ಆಕಾರದಲ್ಲಿ ‘ಮೊದಲ ಅಕ್ಷರ ಖ, ಎರಡನೇ ಅಕ್ಷರ ಗೆ, ಮೂರನೆಯದು ಅರ್ಕವತ್ತು’ ಕಾಣಿಸುತ್ತದೆ. ಆ ಕಟ್ಟಡ ಖರ್ಗೆ ಅಂತಾ ಇದೆ. ಕಟ್ಟಡ ಇರೋವರೆಗೆ ಅವರ ಹೆಸರು ಉಳಿಯಬೇಕೆಂದು ಹೀಗೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅವರ ಸ್ವಂತ ದುಡ್ಡಿಂದ, ಪಕ್ಷ ದುಡ್ಡಿಂದ ಕಟ್ಟಿಲ್ಲ. ಜನರ ತೆರಿಗೆ ದುಡ್ಡಲ್ಲಿ ತಮ್ಮ ಹೆಸರು ಶಾಶ್ವತಗೊಳಿಸುವಂತ ಅಯೋಗ್ಯರಿದ್ದಾರೆ” ಎಂದಿದ್ದರು. ಅವರ ಹೇಳಿಕೆಯ ವಿರುದ್ಧ ಜಗದೇವ್ ಗುತ್ತಿದಾರ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಚಕ್ರವರ್ತಿ ಸೂಲಿಬೆಲೆಯನ್ನು ಗಡಿಪಾರು ಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌, “ಅಯೋಗ್ಯ ಚಕ್ರವರ್ತಿ ಸೂಲಿಬೆಲೆ ಎನ್ನುವ ಸಮಾಜದ ಕೊಳಕು ಕ್ರಿಮಿಯೊಂದು ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಬಾಡಿಗೆ ಭಾಷಣ ಮಾಡಿಕೊಂಡು ಬದುಕುವ ಪರಾವಲಂಬಿ ಜೀವಿಗಳಿಗೆ ಶೋಷಿತ ಸಮುದಾಯದ ನಾಯಕರೊಬ್ಬರು ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಸುಳ್ಳುಗಳನ್ನು ಹಬ್ಬಿಸುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂತಹ ಕ್ರಿಮಿಗಳನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಗೃಹಸಚಿವರಿಗೆ ಮನವಿ ಮಾಡುತ್ತೇವೆ” ಎಂದು ಪೋಸ್ಟ್‌ ಮಾಡಿದೆಯಾಗಿದೆ.

Share.
Exit mobile version