ಬೆಂಗಳೂರು: ಭಾರತ ಜೋಡೋ ಯಾತ್ರೆ ಅಥವಾ ಯಾವ ಯಾತ್ರೆಯನ್ನಾದರೂ ಮಾಡಿಕೊಳ್ಳಲಿ. ಗಾಂಧಿ ಕುಟುಂಬದ ಎಲ್ಲಾ ಸದಸ್ಯರು ಬಂದರೂ ಆ ಭಾಗದಲ್ಲಿ ಏನೂ ಆಗಲ್ಲ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಇವೆ. ನಾವು ಇವರೆಲ್ಲರ ಕಾರ್ಯಕ್ರಮಗಳು ಮುಗಿದ ನಂತರ ನಮ್ಮ ಕಾರ್ಯಕ್ರಮಗಳನ್ನು ಆರಂಭ ಮಾಡುತ್ತೇವೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದಿಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚನ್ನಪಟ್ಟಣದ ವಿಧಾನ ಪರಿಷತ್ ಸದಸ್ಯರಿಗೆ ಕೋರಿಕೆ ಮೇರೆಗೆ 50 ಕೋಟಿ ರೂಪಾಯಿ ಅನುದಾನ ನೀಡಿದಂತೆ ನಮ್ಮ ಪಕ್ಷದ ಎಲ್ಲ ವಿಧಾನ ಪರಿಷತ್ ಸದಸ್ಯರಿಗೂ 50 ಕೋಟಿ ರೂ. ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.

ಶೀಘ್ರವೇ ಪಕ್ಷದ ಎಲ್ಲ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗಿ ಒತ್ತಾಯ ಮಾಡಲಾಗುವುದು ಎಂದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಒಬ್ಬರಿಗೆ 50 ಕೋಟಿ ಅನುದಾನ ಕೊಟ್ಟ ಬಗ್ಗೆ ತಕರಾರಿಲ್ಲ. ಅದೇ ಉದಾರತೆಯನ್ನು ಮುಖ್ಯಮಂತ್ರಿಗಳು ನಮ್ಮ ಪಕ್ಷದ ಎಲ್ಲ ವಿಧಾನ ಪರಿಷತ್ ಸದಸ್ಯರ ಬಗ್ಗೆಯೂ ತೋರಬೇಕು ಎಂದು ಹೇಳಿದರು.

ಕಲಾವಿದರ ಕೋಟಾದಲ್ಲಿ ಮೇಲ್ಮನೆಗೆ ನಾಮಕರಣಗೊಂಡ ಸದಸ್ಯರಿಗೆ ಒಬ್ಬರಿಗೆ ಅನುದಾನ ನೀಡಿದ್ದಾರೆ ಮುಖ್ಯಮಂತ್ರಿಗಳು. ಅದೇ ಮೇಲ್ಮನೆಗೆ ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ವಿವಿಧ ಕ್ಷೇತ್ರಗಳಿಂದ ನಾಮಕರಣಗೊಂಡ ಇತರೆ ಸದಸ್ಯರೂ ಇದ್ದಾರೆ. ಅವರಿಗೂ ತಲಾ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಚನ್ನಪಟ್ಟಣ ಘಟನೆಗೆ ಯಾರ ಚಿತಾವಣೆ, ಅದರ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನನ್ನ ಬಳಿ ದಾಖಲೆಗಳೂ ಇವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುತ್ತೇನೆ. ಶಿಷ್ಟಾಚಾರದ ಲೋಪ ಎಸಗಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಹಾಗೂ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ಶಿಷ್ಟಾಚಾರದ ಲೋಪ ಆಗಿದ್ದರೂ ಆ ಕಾರ್ಯಕ್ರಮ ನಡೆಯಲು ಯಾಕೆ ಬಿಟ್ಟರು ಅನ್ನುವುದೇ ಪ್ರಶ್ನೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲು ಪೊಲೀಸರಿಗೆ ಕುಮಕ್ಕು ಕೊಟ್ಟವರು ಯಾರು? ಈ ಬಗ್ಗೆ ಪೂರ್ಣವಾದ ತನಿಖೆ ಆಗಬೇಕು ಎಂದು ಕುಮಾರಸ್ವಾಮಿ ಅವರು ಸರಕಾರವನ್ನು ಆಗ್ರಹಪಡಿಸಿದರು.

ಶಿಷ್ಟಾಚಾರದಲ್ಲಿ ಲೋಪವಾಗಿದೆ ಸ್ವತಃ ಜಿಲ್ಲಾಧಿಕಾರಿಗಳೇ ಹೇಳಿದ್ದಾರೆ. ಹಾಗಿದ್ದ ಮೇಲೆ ಈ ಕಾರ್ಯಕ್ರಮವನ್ನು ನಡೆಸಲು ಅವಕಾಶ ಕೊಟ್ಟಿದ್ದು ಏಕೆ? ಜನರ ನಡುವೆ ನಡೆಯಬೇಕಿದ್ದ ಕಾರ್ಯಕ್ರಮವನ್ನು ಶಾಸಕರನ್ನು ದೂರವಿಟ್ಟು ಪೊಲೀಸರ ರಕ್ಷಣೆಯಲ್ಲಿ ನಡೆಸಬೇಕಾದ ಪರಿಸ್ಥಿತಿಗೆ ಕಾರಣವೇನು? ಇವೆಲ್ಲ ಅಂಶಗಳು ತನಿಖೆಯಿಂದ ಹೊರಬರಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಬಿಎಂಎಸ್ ಟ್ರಸ್ಟ್ ಅಕ್ರಮವನ್ನು ಸದನದಲ್ಲಿ ಬಯಲು ಮಾಡಿದ್ದಕ್ಕೆ ಸೇಡಿನಿಂದ ಚನ್ನಪಟ್ಟಣ ಘಟನೆಯನ್ನ ರೂಪಿಸಲಾಯಿತ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು; ಬಿಎಂಎಸ್ ಟ್ರಸ್ಟ್ ಅಕ್ರಮದ ಪ್ರಸ್ತಾಪಕ್ಕೂ ಚನ್ನಪಟ್ಟಣ ಘಟನೆಗೂ ಸಂಬಂಧ ಇಲ್ಲ ಎನ್ನುವುದು ನನ್ನ ಭಾವನೆ. ನನ್ನ ವಿರುದ್ಧ ಚುನಾವಣೆಯಲ್ಲಿ ಪೈಪೋಟಿ ನಡೆಸುವ ಒಂದು ಭಾಗವಾಗಿ ಇದೆಲ್ಲವನ್ನು ಮಾಡುತ್ತಿದ್ದಾರೆ ಎಂದರು.

ತಪ್ಪು ಎಂದು ಗೊತ್ತಿದ್ದರೂ ಸಚಿವ ಡಾ.ಅಶ್ವತ್ಥನಾರಾಯಣ ಇದನ್ನೆಲ್ಲಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆಗಿರುವುದು 420 ಕೆಲಸ ಎಂದು ಗೊತ್ತಿದ್ದರೂ ಸಚಿವರು ಡಿಫೈನ್ ಮಾಡಿಕೊಳ್ತಾರೆ, ಇನ್ಯಾವುದಕ್ಕೆ ಅವರು ಡಿಫೈನ್ ಮಾಡ್ತಾರೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.

ಭಾರತ್ ಜೋಡೋದಿಂದ ಏನೂ ಆಗಲ್ಲ

ಭಾರತ ಜೋಡೋ ಯಾತ್ರೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿಗಳು; ಯಾವ ಯಾತ್ರೆಯನ್ನಾದರೂ ಮಾಡಿಕೊಳ್ಳಲಿ. ಗಾಂಧಿ ಕುಟುಂಬದ ಎಲ್ಲಾ ಸದಸ್ಯರು ಬಂದರೂ ಆ ಭಾಗದಲ್ಲಿ ಏನೂ ಆಗಲ್ಲ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಇವೆ. ನಾವು ಇವರೆಲ್ಲರ ಕಾರ್ಯಕ್ರಮಗಳು ಮುಗಿದ ನಂತರ ನಮ್ಮ ಕಾರ್ಯಕ್ರಮಗಳನ್ನು ಆರಂಭ ಮಾಡುತ್ತೇವೆ ಎಂದರು.

ಶ್ರೀಗಳ ಜತೆ ಸೌಜನ್ಯದ ಭೇಟಿ

ತರಳಬಾಳು ಸಿರಿಗೆರೆ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ. ಬಹಳ ದಿನಗಳ ನಂತರ ಭೇಟಿಯಾಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಅಕ್ಟೋಬರ್ 8ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜನತಾಮಿತ್ರ ಕಾರ್ಯಕ್ರಮ ಮಾಡಾಗುತ್ತಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಗರವಾಸಿಗಳು ಅಂದು ಸಭೆಯಲ್ಲಿ ಸೇರಲಿದ್ದಾರೆ.

ದತ್ತಾತ್ರೇಯ ಹೊಸಬಾಳೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ

ಇವತ್ತು ಮಾಧ್ಯಮಗಳಲ್ಲಿ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆಯನ್ನು ಗಮನಿಸಿದೆ. ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆ ಸತ್ಯ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಯಾವುದೇ ರೀತಿಯ ಸಂಘರ್ಷದ ವಿಚಾರಗಳನ್ನು ಪ್ರಸ್ತಾಪ ಮಾಡದೆಯೇ ಸಂಘದ ಮುಖ್ಯಸ್ಥರಾಗಿ ಅವರು ದೇಶದ ಈಗಿನ ನಿಜವಾದ ಚಿತ್ರಣ ಮುಂದೆ ಇಟ್ಟಿದ್ದಾರೆ. ಆದಾಯವನ್ನು ಕೇವಲ ಕಾರ್ಪೊರೇಟ್ ಕಂಪನಿಗಳಲ್ಲಿ ಶೇಖರಣೆ ಆಗುತ್ತಿದೆ. ಕುಡಿಯುವ ನೀರು, ಪೌಷ್ಟಿಕಾಹಾರ ಸಮಸ್ಯೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಸಮಾನತೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇದರ ಬಗ್ಗೆ ಕೇಂದ್ರ ಗಮನ ಹರಿಸಬೇಕು. ಅವರು ಇಟ್ಟ ಸತ್ಯಾಂಶದ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಕುಮಾರಸ್ವಾಮಿ ಅವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಶಾಸಕರಾದ ಹೆಚ್.ಎಂ.ರಮೇಶ್ ಗೌಡ, ಕೆ. ಪಿ. ಬಚ್ಚೇಗೌಡ ಮುಂತಾದವರು ಹಾಜರಿದ್ದರು.

Share.
Exit mobile version