ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು ಕರ್ನಾಟಕದ 6 ವಿಧಾನ ಪರಿಷತ್ ಸ್ಥಾನಗಳಿಗೆ ಗುರುವಾರ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಹಾಲಿ ಸದಸ್ಯರ ನಿವೃತ್ತಿಯ ನಂತರ ತೆರವಾಗಲಿರುವ ರಾಜ್ಯದ ಮೂರು ಶಿಕ್ಷಕರ ಕ್ಷೇತ್ರಗಳಿಗೆ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ಜೂನ್​ 3ರಂದು ಚುನಾವಣೆ ನಡೆಯಲಿದೆ.

ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಜೂ.3 ರಂದು ನಡೆಯಲಿರುವ ಚುನಾವಣೆಗೆ ಮತದಾರರ ದಾಖಲಾತಿಗೆ ಮೇ 6 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಆಯಾ ಚುನಾವಣಾಧಿಕಾರಿ ಕಚೇರಿಯಲ್ಲಿ ನಿಗದಿತ ದಿನಾಂಕದ ಒಳಗೆ ಸಲ್ಲಿಸಬಹುದು.

ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ 1,50,184, ನೈಋತ್ಯ ಪದವೀಧರರ ಕ್ಷೇತ್ರ -74,218, ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 1,00,100 ಮತದಾರರಿದ್ದಾರೆ. ಆನ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 23,514, ನೈಋತ್ಯ ಶಿಕ್ಷಕರ ಕ್ಷೇತ್ರ -19,380, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 18,379 ಮತದಾರರು ನೋಂದಾಯಿಸಿಕೊಂಡಿದ್ದಾರೆ.

ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಜೂನ್ 6 ರಂದು ಮತ ಎಣಿಕೆ ನಡೆಯಲಿದೆ. ಈ ಸಂಬಂಧ ಮೇ 9ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ನಾಮಪಾತ್ರ ಹಿಂಪಡೆಯಲು ಮೇ 20 ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Share.
Exit mobile version