ಬೆಂಗಳೂರು: ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಕವಿರಾಜಮಾರ್ಗಕಾರನ ಮತ್ತೆ ಮತ್ತೆ ನೆನೆಯಬೇಕಾದ ಮಾತು ‘ಕಸವರನೆಂಬುದು ನೆರೆ ಸೈರಿಸಲಾರ್ಪೊಡೆ ಪರ ಧರ್ಮಮುಮಂ, ಪರ ವಿಚಾರಮುಮಂ.’ ಚಿನ್ನವೆಂದರೆ ಯಾವುದು? ಪರಧರ್ಮವನ್ನು ಪರರ ವಿಚಾರವನ್ನು ಗೌರವಿಸುವುದು. ಇಂತಹ ಭವ್ಯ ಇತಿಹಾಸವುಳ್ಳ ಕನ್ನಡ ಧರ್ಮಕ್ಕೆ ಅಪಚಾರವಾಗುವಂತೆ ಸಾಹಿತ್ಯ ಪರಿಷತ್ತು ಮುಸಲ್ಮಾನ ಬರಹಗಾರರನ್ನು ಬಹುತೇಕ ಹೊರಗಿಟ್ಟಿರುವುದು, ಕರ್ನಾಟಕದ ಭಾಷೆಗಳಾದ ತುಳು, ಕೊಡವ, ಅರೆಭಾಷೆ, ಕೊಂಕಣಿ ಭಾಷೆಗಳಿಗೆ ಅವಕಾಶ ನೀಡಿ ಬ್ಯಾರಿ ಭಾಷೆಗೆ ನಿರಾಕರಿಸಿರುವುದು ವಿಷಾದನೀಯ ಎಂಬುದಾಗಿ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದ್ದಾರೆ.

ನಗರದ ಕೆ.ಆರ್.‌ ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್‌ ಸಭಾಂಗಣದ ಪ್ರಧಾನ ವೇದಿಕೆಯಾದ ಚಂಪಾ ವೇದಿಕೆಯಲ್ಲಿ ಜನಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇದಿಕೆಯ ಮೇಲಿನ ಗಣ್ಯರ, ಜನಸಾಹಿತ್ಯ ಸಮ್ಮೇಳನದ ಎಲ್ಲಾ ರೂವಾರಿಗಳ, ಹಿರಿಯ ಕಿರಿಯ ಲೇಖಕ ಮಿತ್ತರೆ, ಕನ್ನಡದ ಅಭಿಮಾನಿಗಳ: ಈ ಐತಿಹಾಸಿಕವೆನ್ನಬಹುದಾದ ಸಮ್ಮೇಳನವನ್ನು ಉದ್ಘಾಟಿಸುವ ಅವಕಾಶ ಲಭಿಸಿರುವುದು. ಸಂತೋಷವಾಗಿದೆ. ನಾವು ಇಂದು ಸ್ವಾತಂತ್ರೋತ್ತರ ಭಾರತದಲ್ಲಿ ಹಿಂದೆಂದೂ ಕಾಣದ ಧುರಿತಕಾಲವನ್ನು ಎದುರಿಸುತ್ತಿದ್ದೇವೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಬಿಕ್ಕಟ್ಟುಗಳು ಉಮ್ಮಳಿಸಿ ಏಳುತ್ತಿವೆ. ಇದಕ್ಕೆ ಕಾರಣಗಳು ಸ್ಪಷ್ಟವಾಗಿವೆ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಎಲ್ಲರ ಆಶೋತ್ತರಗಳಿಗೂ ಪೂರ್ವಗ್ರಹಗಳಿಂದ ಮುಕ್ತವಾಗಿ, ಸಮಾನವಾಗಿ ಸ್ಪಂದಿಸಬೇಕಾದ ಸಂಸ್ಥೆ. ದುರದೃಷ್ಟವಶಾತ್ ಪ್ರಸ್ತುತ ಅವಧಿಯ ಅಧ್ಯಕ್ಷರ ಮೊದಲ ಸಮ್ಮೇಳನದಲ್ಲಿಯೆ ಅತೃಪ್ತಿ ಕಾಣಿಸಿಕೊಂಡಿದೆ. ಸಾಹಿತ್ಯವೆಂದರೆ ಜನ- ಜನರ ಬದುಕಿನ ಪ್ರತಿಫಲನ, ಜನರ ಬದುಕಿಗೆ ಸಂಬಂಧಿಸಿದ ಕುಟುಂಬ, ಸಮಾಜ, ದೇಶ, ಭಾಷೆ, ನೆಲ, ಜಲ, ಇತಿಹಾಸ, ಧರ್ಮ, ಪರಂಪರೆ ಇವೆಲ್ಲವೂ ರೂಪುಗೊಳ್ಳುವುದು ಸಾಹಿತ್ಯದ ಮುಖಾಂತರ, ಮಸ್ತಕಗಳೆಂದರೆ ಆಯಾ ಕಾಲಘಟ್ಟದಲ್ಲಿ ಪ್ರಾಜ್ಞರಿಂದ ನಿರ್ಮಿಸಲ್ಪಟ್ಟ ಅಕ್ಷರ ಸೌಧಗಳು, ಸಾರ್ವಜನಿಕ ಮನ್ನಣೆಯೇ ಅವುಗಳಿಗೆ ಅಧಿಕೃತ ಮುದ್ರೆ ಎಂದರು.

ಸಾಹಿತ್ಯ ಪರಿಷತ್ತು ಹಳಿ ತಪ್ಪಿದಾಗಲೆಲ್ಲಾ ಜನರೇ ಎಚ್ಚರಿಸುತ್ತಾ ಬಂದ ಪರಿಪಾಠವಿದೆ. ನನ್ನ ಅನುಭವಕ್ಕೆ ಬಂದ ಹಾಗೆ 1992 ರಲ್ಲಿ ಜಾಗೃತ ಸಮ್ಮೇಳನ ನಡೆದದ್ದು ಹೀಗೆ. ಅಂದು ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಪ್ರಶ್ನಿಸಲಾಗಿತ್ತು. ಅಂದಿನ ತಲೆಮಾರಿನ ದಿಗ್ಗಜರೆನಿಸಿದ ಲಂಕೇಶ್, ಅನಂತಮೂರ್ತಿ, ಕಿ, ರಂ. ನಾಗರಾಜ, ಡಿ. ಆರ್. ನಾಗರಾಜ್, ಗೋವಿಂದರಾವ್‌, ಸಿದ್ದಲಿಂಗಯ್ಯ ಮತ್ತು ಇಲ್ಲಿರುವ ನನ್ನ ತಲೆಮಾರಿನ ಅನೇಕರು ಸೇರಿ ನಡೆಸಿದ ಸಮ್ಮೇಳನ ಆದಾಗಿತ್ತು. ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಗಂಭೀರವಾದ ಲೋಪವೊಂದು ಎಲ್ಲರ ಕಣ್ಣಿಗೆ ರಾಚುವಂತಿದೆ. ಒಂದು ಪಂಥ ತಮ್ಮ ಸ್ವಾರ್ಥ ಸಾಧನೆಗೆ ಧರ್ಮವನ್ನು ಗುರಾಣಿಯಾಗಿಸಿಕೊಂಡು ಮುಗ್ಧ ಬಹುಜನರನ್ನು ಮರುಳುಮಾಡಿ ‘ನಾವು ಮತ್ತು ಅವರು’ ಎಂಬ ಸ್ಪಷ್ಟ ಗೆರೆ ಎಳೆದುಬಿಟ್ಟಿದೆ. ಆ ಪಂಥ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದ. ರಾಜಕೀಯವಾಗಿ ಅವರು  ಮುಸಲ್ಮಾನರ ಪ್ರತ್ಯೇಕೀಕರಣವನ್ನು ಮಾಡುತ್ತಾ ಬಂದಿದ್ದಾರೆ. ಅದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಅಂತಹ ಒಂದು ಅಜೆಂಡಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ನುಸುಳಿರುವುದು ಆಘಾತಕಾರಿಯಾದದ್ದು. ಆದ್ದರಿಂದ ಈ ಪ್ರತಿರೋಧ ನ್ಯಾಯಸಮ್ಮತವಾದದ್ದು ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಹೇಳಿದರು.

ಭಾರತವೆಂದರೆ ವೈವಿಧ್ಯತೆಯ ಗೂಡು. ಧರ್ಮ, ಜಾತಿ, ಭಾಷೆ, ಬಣ್ಣ, ಆಹಾರ, ಉಡುಗೆ ತೊಡುಗೆಗಳು ಇವೆಲ್ಲವೂ ಬೇರೆ ಬೇರೆಯಾಗಿದ್ದು ಒಂದುಗೂಡಿದ ಜನವುಳ್ಳ ಭೂಪ್ರದೇಶ ಭಾರತ. ಸಂವಿಧಾನ ಕರ್ತೃಗಳು ಈ ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಂವಿಧಾನದ ಮೂಲಭೂತ ಆಶಯಗಳನ್ನು ಕಟ್ಟಿಕೊಟ್ಟಿದ್ದಾರೆ. ಜಾತಿಗ್ರಸ್ತ ಸಮಾಜದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳಲು ಏನೆಲ್ಲ ಪರಿಕರಗಳು ಅಗತ್ಯವಿತ್ತೋ ಅವುಗಳನ್ನು ಸಂವಿಧಾನದಲ್ಲಿ ಸ್ಥಾಪಿಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯ ನಮಗೆ ಅಲ್ಲಿಯವರೆಗೂ ಮರೀಚಿಕೆಯಾಗಿದ್ದವು. ಈಗ ಸಂವಿಧಾನವು ಅವೆಲ್ಲವನ್ನೂ ನಮಗೆ ನೀಡಿದೆ. ಆದ್ದರಿಂದ ಆಡಳಿತ ವ್ಯವಹಾರವು ಧರ್ಮನಿರಪೇಕ್ಷವಾಗಿಯೇ ನಡೆಯಬೇಕೆಂಬುದು ಎಲ್ಲರ ನಿರೀಕ್ಷೆ.

ಹಿಂದಿ, ಹಿಂದೂ, ಹಿಂದೂಸ್ಥಾನ್

ಒಂದು ಭಾಷೆ, ಒಂದು ಧರ್ಮ, ಒಂದು ರಾಷ್ಟ್ರದ ಪರಿಕಲ್ಪನೆಯನ್ನು ತೇಲಿಬಿಡಲಾಗಿದೆ. ಇದರ ಮಥಿತಾರ್ಥ ಏನೆಂದರೆ ಹಿಂದಿ, ಹಿಂದೂ, ಹಿಂದೂಸ್ಥಾನ್. ಇವು ಪರ್ಷಿಯನ್ ಪದಗಳು ಎಂಬುದು ಬೇರೆ ಮಾತು. ಇದು ಭಾರತದಂಥ ವೈವಿಧ್ಯತೆ ಇರುವ ದೇಶಕ್ಕೆ ಮಾರಕವಾದ ನಿಲುವು. ಇದನ್ನು ಹಲ್ಲು ಮತ್ತು ಉಗುರುಗಳಿಂದ ನಾವು ವಿರೋಧಿಸಬೇಕಿದೆ. 780 ಭಾಷೆಗಳನ್ನು ಮಾತನಾಡುವ ದೇಶದಲ್ಲಿ 22 ಭಾಷೆಗಳನ್ನು ಸಂವಿಧಾನ ಅಧಿಕೃತಗೊಳಿಸಿದೆ. ಹಿಂದಿ ಭಾಷೆಯ ಬೆಳವಣಿಗೆಯನ್ನು ಅತಿರಂಜಿತವಾಗಿ ಕಲ್ಪಿಸಲಾಗುತ್ತಿದೆ. 2011 ರ ಜನಗಣತಿಯಂತೆ ಒಟ್ಟು ಜನಸಂಖ್ಯೆಯಲ್ಲಿ (121 ಕೋಟಿ) ಶೇ. 43.63% ರಷ್ಟು ಹಿಂದಿ ಭಾಷಿಕರು ಅಂದರೆ 52,83 ಕೋಟಿ ಎಂದು ಬಿಂಬಿಸಲಾಗಿದೆ. ಆದರೆ ಉತ್ತರಭಾರತದಲ್ಲಿ ಮಾತಾಡುವ ಸುಮಾರು 50 ಭಾಷೆಗಳನ್ನು ಹಿಂದಿಯ ಉಪಭಾಷೆಗಳು ಎಂದು ಸೇರಿಸಿಕೊಳ್ಳಲಾಗಿದೆ. ಅವುಗಳನ್ನು ಬಿಟ್ಟರೆ ಹಿಂದಿ ಭಾಷಿಕರ ಸಂಖ್ಯೆ 39 ಕೋಟಿಗೆ ಇಳಿಯುತ್ತದೆ ಎಂದು ಭಾಷಾತಜ್ಞ ಜಿ. ಎನ್. ದೇವಿ ಬರೆಯುತ್ತಾರೆ. ಭೋಜಪುರಿ ಮಾತಾಡುವವರ ಸಂಖ್ಯೆಯೆ 5 ಕೋಟಿಗೂ ಹೆಚ್ಚಿದೆ. ಮತ್ತು ಅದು ಸಾಹಿತ್ಯ, ಸಿನೆಮಾ, ಮಾಧ್ಯಮ, ರಂಗಭೂಮಿ, ಪುಸ್ತಕ ಪ್ರಕಟನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಎದ್ದು ಕಾಣುವ ಪ್ರಗತಿಯನ್ನು ಕಂಡಿದೆ. ಆದರೂ ಅದನ್ನು ಹಿಂದಿ ಭಾಷಾವಲಯದೊಳಗೆ ತುರುಕಲಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್, ಚತ್ತೀಸ್‌ಘರ್, ರಾಜಸ್ಥಾನ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮಾತನಾಡುವ ಸ್ಥಳೀಯ ಭಾಷೆಗಳಿಗೆ ಸ್ಥಾನವೇ ಇಲ್ಲದಾಗಿದೆ. ವಾಸ್ತವವಾಗಿ ತಮಿಳು, ಕನ್ನಡ, ತೆಲುಗು, ಮರಾಠಿ, ಬಾಂಗ್ಲಾ, ಒರಿಯಾ, ಭಾಷೆಗಳು ಹಿಂದಿಗಿಂತಲೂ ಪುರಾತನ ಭಾಷೆಗಳಾಗಿದ್ದು ಸಮೃದ್ಧ ಜ್ಞಾನಶಾಖೆಗಳನ್ನು ಹೊಂದಿವೆ. ತಮಿಳು, ಕನ್ನಡ, ತಲುಗು, ಒರಿಯಾ ಭಾಷೆಗಳು, ಅಭಿಜಾತ ಭಾಷೆಗಳಗಿದ್ದು, ಶಾಸ್ತ್ರೀಯ ಸ್ಥಾನಮಾನದ ಮನ್ನಣೆ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹಿಂದಿಯೇತರ ಭಾಷೆಗಳನ್ನು ಮಾತನಾಡುವವರ ಸಂಖ್ಯೆ 2011 ರ ಜನಗಣತಿಯಂತೆ 69 ಕೋಟಿಯಷ್ಟಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಹೇರಿಕೆ ಅಪ್ರಸ್ತುತ ಮತ್ತು ಅಸಮಂಜಸ ಎನಿಸಿಕೊಳ್ಳುತ್ತದೆ. ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮುನ್ನಡೆ ಸಾಧಿಸಿರುವ ದಕ್ಷಿಣದ ದ್ರಾವಿಡ ಜನಾಂಗ, ದ್ರಾವಿಡ ಸಂಸ್ಕೃತಿ, ದ್ರಾವಿಡ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾರಣಾಂತಿಕ ಹೊಡೆತ ಎಂಬ ಸತ್ಯವನ್ನು ನಾವು ಮನಗಾಣಬೇಕಿದೆ.

ಹಿಂದೂ ಎಂಬ ಪದವನ್ನು ನಾವು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ಅದು ಸ್ವಾಮಿ ವಿವೇವೇಕಾನಂದರು ಅಥವಾ ಗಾಂಧಿ ಗ್ರಹಿಸಿದ ಹಿಂದೂ ಪದ ಅಲ್ಲ. ಸಂಘಪರಿವಾರಕ್ಕೆ ಪ್ರಿಯವಾಗಿರುವುದು ತಥಾಕಥಿ ಜಾತಿವ್ಯವಸ್ಥೆ. ಆದ್ದರಿಂದ ಗಾಂಧಿಯ ತುಚ್ಛೀಕರಣ ಈಗಾಗಲೇ ಪ್ರಾರಂಭವಾಗಿದೆ. ಅವರ ಜಾಗದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಪ್ರತಿಷ್ಠಾಪಿಸುವ ಕೆಲಸವಾಗುತ್ತಿದೆ. ಸುಧಾರಿತ ಹಿಂದೂವನ್ನು ಒಬ್ಬ ಗಾಂಧಿಯಲ್ಲಿ ಕಾಣಬಹುದು. ಗಾಂಧಿಯನ್ನು ತೀವ್ರವಾಗಿ ವಿರೋಧಿಸುವವರು ಕೂಡ ಕೋಮುವಾದ ಮತ್ತು ಅಸ್ಪೃಶ್ಯತೆಯ ವಿರುದ್ಧವಿದ್ದ ಅವರ ನಿಲುವನ್ನು ಯಾರೂ ವಿರೋಧಿಸಲಾರರು. 1947 ರ ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮ ಯುಧಿಷ್ಠರನಿಗೆ ಯುದ್ಧದ ಅರ್ಥಹೀನತೆಯನ್ನು ಹೇಳುವ ಭಾಗವನ್ನು ಉದ್ಧರಿಸುತ್ತಾ ಅವರು ಹೀಗೆ ಹೇಳುತ್ತಾರೆ. ‘ಕೃಷ್ಣ ಪಾಂಡವರನ್ನು ರಕ್ಷಿಸಿದಂತೆ ನಾನು ಮುಸಲ್ಮಾನರನ್ನು ರಕ್ಷಿಸುತ್ತೇನೆ. ಈ ಕಾರಣಕ್ಕಾಗಿ ಗಾಂಧಿಯ ಮೇಲೆ ಅವರಿಗೆ ಬದ್ಧ ದ್ವೇಷ. ಗಾಂಧಿಯನ್ನು ದೂರೀಕರಿಸುವುದು ಭಾರತದ ಬಹುತ್ವಕ್ಕೆ ನಷ್ಟ. ಇದಕ್ಕೆ ಇನ್ನೊಂದು ಆಯಾಮವಿದೆ. ಅಂಬೇಡ್ಕರ್ ನಿರ್ವಚಿಸಿರುವಂತೆ ಹಿಂದೂಧರ್ಮವೆಂದರೆ ಶ್ರೇಣೀಕೃತ ಜಾತಿಗಳ ಒಕ್ಕೂಟ, ಅವರು ದಲಿತರಿಗೆ ಹೇಳಿದ ಮಾತು ಏನೆಂದರೆ ‘ಹಿಂದೂಧರ್ಮದಲ್ಲಿ ಉಳಿದುಕೊಂಡರೆ ಯಾರೂ ಯಾವ ವಿಧದಲ್ಲೂ ಏಳಿಗೆಯಾಗುವುದಿಲ್ಲ. ಸಹಸ್ರಾರು ವರ್ಷಗಳಿಂದ ತುಳಿಯಲ್ಪಟ್ಟ ದಲಿತ ಮತ್ತು ಅದಿವಾಸಿ ಜನರನ್ನು ಹಿಂದೂಕರಣಗೊಳಿಸುವುದೆಂದರೆ ನೀವು ಇದ್ದಲ್ಲೇ ಇರಿ ಎಂದು ಹೇಳಿದಂತಾಗುತ್ತದೆ. ಅಂಬೇಡ್ಕರ್ ಅವರ ಪರಮಾಪ್ತ ಧೈಯವಾದ “ಜಾತಿವಿನಾಶ” ಬಿದ್ದುಹೋಗುತ್ತದೆ. ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣುಗಳನ್ನು ಬೀಳಿಸುವಂತೆ ಹಿಂದುತ್ವ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಅಪ್ರಸ್ತುತಗೊಳಿಸುತ್ತಿದೆ.

ಇನ್ನು ಹಿಂದೂಸ್ಥಾನ ಎಂಬುವುದು ರಾಷ್ಟ್ರೀಯತೆಯನ್ನು ಉದ್ದೀಪಿಸಲು ಚಾಲನೆಗೆ ತಂದಿರುವ ಶಬ್ದ. ಕೆ. ಎಮ್. ಪಣಿಕ್ಕರ್ ಹೇಳುವಂತೆ ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಪಾದಿಸುವ ರಾಷ್ಟ್ರೀಯತೆ ಕೇವಲ ಸಾಂಸ್ಕೃತಿಕ ರಾಷ್ಟ್ರೀಯತೆಯ ಸ್ವರೂಪದ್ದು, ಅದರ ಮುಖ್ಯ ಲಕ್ಷಣ ಅದು “ಹಿಂದೂ’ ಸಂಸ್ಕೃತಿ ಎನ್ನುವುದು. ಆದು ಹೇಳುವ ಹಿಂದೂ ಸಂಸ್ಕೃತಿ ಮೂಲತಃ ಬ್ರಾಹ್ಮಣ್ಯದ, ಕಂದಾಚಾರದ, ಪಿತೃಪ್ರಾಧಾನ್ಯದ, ಪ್ರತಿಗಾಮೀ ಸ್ವರೂಪದ್ದು.’ ಅದಕ್ಕೆ ಅಖಂಡ ಹಿಂದೂಸ್ಥಾನ ಎಂದು ಕರೆದುಕೊಳ್ಳುವ ಇರಾದೆ ಏಕಿದೆಯೆಂದರೆ ತನ್ನೊಳಗಿರುವ ಜಾತಿಪದ್ಧತಿಯ ವಿಷಮಗಳನ್ನು ಪ್ರಯೋಗಿಸಿ ಜನರನ್ನು ಮತ್ತಷ್ಟು ವಿಭಜಿಸುವುದು ಮತ್ತು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವುದು. ತಮಿಳುನಾಡಿನ ವೆಂಗವಯಲ್ ಗ್ರಾಮದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದರು ಎಂಬ ಕಾರಣಕ್ಕೆ ಅವರು ಕುಡಿಯುವ ನೀರಿನ ಟ್ಯಾಂಕಿಗೆ ಮಲ ಸುರಿದರಲ್ಲ! ಆಗ ರಾಷ್ಟ್ರೀಯತೆಯ ವಕ್ತಾರರಾರೂ ಬಾಯಿ ಬಿಡಲಿಲ್ಲ ಇದಕ್ಕಿಂತಲೂ ಹೇಯವಾದ ಕೃತ್ಯವನ್ನು ಕಲ್ಪಿಸಿಕೊಳ್ಳಬಹುದೆಂದು ನನಗನ್ನಿಸುವುದಿಲ್ಲ. ಆದ್ದರಿಂದ ಫಣಿಕ್ಕರ್ ಅವರ ರಾಷ್ಟ್ರೀಯಿಕೆಯ ವ್ಯಾಖ್ಯಾನವನ್ನು ನಾನು ಸಂಪೂರ್ಣ ಒಪ್ಪುತ್ತೇನೆ.

ಇತಿಹಾಸವನ್ನು ತಿರುಚುವುದು

ಕೆಲವು ತಿಂಗಳುಗಳ ಹಿಂದೆ ಶಾಲಾಪಠ್ಯ ಪುಸ್ತಕಗಳ ಮರುಪರಿಷ್ಕರಣೆ ನಡೆಯಿತು. ಹೆಚ್ಚಾಗಿ ಸಾಹಿತ್ಯ ಮತ್ತು ಸಮಾಜವಿಜ್ಞಾನ ಪಠ್ಯಗಳು ಬಲಪಂಥೀಯ ಆಡಳಿತದ ವಿಮರ್ಶೆಗೆ ಒಳಗಾಯಿತು. ಬೌದ್ಧ, ಜೈನ ಧರ್ಮಗಳ ಹುಟ್ಟು ಮತ್ತು ಬೆಳವಣಿಗೆ ಹೇಗಾಯಿತು ಎಂಬುದನ್ನು ಮಕ್ಕಳು ತಿಳಿದುಕೊಳ್ಳಲು ಅಂದಿನ ವೈದಿಕ ಧರ್ಮದ ಕೊರತೆಗಳನ್ನು ಸೂಚ್ಯವಾಗಿಯಾದರೂ ಹೇಳದೇ ಇರಲಾದೀತೆ? ಅಲ್ಲಿ ಜಾತಿವ್ಯವಸ್ಥೆ ಎಂಬ ಪದವೇ ಇರಬಾರದು ಎಂಬ ಧೋರಣೆಯುಳ್ಳವರಾಗಿದ್ದರು ಅದಕ್ಕಾಗಿ ನೇಮಿಸಲ್ಪಟ್ಟ ಸಮಿತಿಯವರು. ಹೇಳಬೇಕಾದ ಮುಖ್ಯ ಸಂಗತಿಗಳನ್ನೇ ಬಿಟ್ಟರು. ಬಸವಣ್ಣನವರು ವೈದಿಕ ಮೂಲದ ಮೌಡ್ಯಾಚರಣೆಗಳನ್ನು ವಿರೋಧಿಸಿದರು, ಜಾತಿಪದ್ಧತಿಯನ್ನು ವಿರೋಧಿಸಿದರು. ದಲಿತರು, ದೇವದಾಸಿ ಮಹಿಳೆಯರಾದಿಯಾಗಿ ಒಂದು ಸಮಾನತೆಯ ಧರ್ಮವನ್ನು ಕಟ್ಟಿದರು ಎಂದು ಹೇಳಬೇಡವೆ? ಅಲ್ಲದಿದ್ದರೆ ಮಕ್ಕಳಿಗೆ ಅರ್ಥಮಾಡಿಸುವುದಾದರೂ ಹೇಗೆ? ಅವರು ಯಜ್ಞೋಪವೀತವನ್ನು ಕಿತ್ತೆಸೆದದ್ದು, ಚಳವಳಿಯನ್ನು ಕಟ್ಟಿದ್ದು, ದೇಹವೇ ದೇಗುಲ ಎಂಬ ಹೊಸ ಪರಿಕಲ್ಪನೆಯನ್ನು ನೀಡಿದ್ದು, ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ ಬರೆದದ್ದು ಎಲ್ಲವನ್ನೂ ಮರುಪರಿಷ್ಕರಣೆಯಲ್ಲಿ ಕೈಬಿಡಲಾಯಿತು. ದಲಿತ, ಹಿಂದುಳಿದ ಲೇಖಕರ ಪಠ್ಯಗಳನ್ನು ಸಾರಾಸಗಟಾಗಿ ಕಿತ್ತುಹಾಕಲಾಯಿತು. ಕವಿ ಕುವೆಂಪು ಅವರ ವೈಚಾರಿಕ ಬರಹಗಳಿಗೆ ಕತ್ತರಿ ಬಿದ್ದಿದೆ. ಹೀಗಾದರೆ ನಮ್ಮ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆಯನ್ನು, ವೈಜ್ಞಾನಿಕ ಮನೋಭಾವವನ್ನು ಬಿತ್ತುವುದು ಹೇಗೆ? ಜಾತಿ ಹಿಂದೂ ಸಮಾಜದ ಆತ್ಮವಾಗಿದೆ. ಜಾತಿಪದ್ಧತಿ ಇಡೀ ದೇಶದ ಜನರನ್ನು ಮೇಲು ಕೀಳು ಎಂದು ವಿಭಜಿಸಿರುವುದು ಸುಳ್ಳೇ? ಅತಿ ಕ್ರೂರವಾದ, ಅನಾಗರಿಕವಾದ ಅಸ್ಪೃಶ್ಯತೆಯನ್ನು ಕುರಿತು ಮಕ್ಕಳಿಗೆ ಸರಿಯಾದ ತಿಳಿವಳಿಕೆ ನೀಡದಿದ್ದರೆ ಅವರು ತಮ್ಮ ಬದುಕಿನ ಮುಂದಿನ ಹಂತಗಳಲ್ಲಿ ಅದನ್ನು ಮುಂದುವರೆಸಿಕೊಂಡು ಹೋಗುವುದಿಲ್ಲವೆ? ದಲಿತರು ಮಾಡಿದ ಅಡುಗೆಯನ್ನು ತಿನ್ನದಿರುವ ಮಕ್ಕಳಿರುವುದು ಏನನ್ನು ಹೇಳುತ್ತದೆ? ಪಠ್ಯಗಳಲ್ಲಿ ಸಮಾನತೆ ಮತ್ತು ಭ್ರಾತೃತ್ವದ ಬಗ್ಗೆ ಪಾಠಗಳೇ ಇಲ್ಲ ಎಂದಲ್ಲವೆ? ಶಾಲೆಗಳಲ್ಲಿಯೇ ಅಸ್ಪೃಶ್ಯತೆ ಆಚರಣೆ ನಡೆಯುತ್ತಿರುವುದು ವಿಪರ್ಯಾಸ.

ಐಐಟಿ, ಕರಗಪರು 2022 ರಲ್ಲಿ ಒಂದು ಕ್ಯಾಲೆಂಡರ್ ಬಿಡುಗಡೆ ಮಾಡಿತು. ಅದರ ಶೀರ್ಷಿಕೆ ‘ಭಾರತೀಯ ಜ್ಞಾನಶಿಸ್ತುಮೂಲಗಳ ಮರುಶೋಧನೆ’ ಎಂದಿದೆ. ಅದರ ಚಿತ್ರಗಳು ಅವೈಜ್ಞಾನಿಕ ಸಂಕಥನಗಳ ಪ್ರಚಾರ ಸಾಮಗ್ರಿಯಂತಿದ್ದವು. ಅದರ ಉದ್ದೇಶವೇನೆಂದರೆ ವೈದಿಕ ಸಂಸ್ಕೃತಿಯ ವಕ್ತಾರರಾದ ಆರ್ಯರು ಸಿಂಧೂ ಕಣಿವೆಯ ಆಸುಪಾಸಿನ ಮೂಲನಿವಾಸಿಗಳು ಎಂದು ಹೇಳುವುದು. ಅವರು ಹರಪ್ಪನ್ – ಮೆಹೆಂಜೊದಾರೋ ನಾಗರಿಕತೆಯ ಮುಂಚೆಯೇ ಅಲ್ಲಿದ್ದರು! ಅವರು ವಲಸಿಗರಲ್ಲ ಎಂದು ಹೇಳುವುದು. ದೇಶದ ಅತ್ಯುತ್ತಮ ಜ್ಞಾನ ಪ್ರಸಾರ ಕೇಂದ್ರವೆನಿಸಿದ, ತಂತ್ರಜ್ಞಾನ ಸಂಸ್ಥೆಯಿಂದ ಇಂತಹ ನಂಬಲನರ್ಹವಾದ ಸಂಗತಿಯನ್ನು ಹೇಳಿಸುವ ಅಗತ್ಯವಿತ್ತೆ? ಪುರಾತತ್ವ ಶಾಸ್ತ್ರದ ಮೂಲಗಳ ಸಾಕ್ಷಿಗಳನ್ನೇನು ಅವರು ಒದಗಿಸುವುದಿಲ್ಲ. ರಾಖ್ಹಿಗರಿ ಉತ್ಖನನ ಮತ್ತು ವಂಶವಾಹಿಸಿ ಪರೀಕ್ಷೆಗಳು, ಸಂಶೋಧನೆಗಳು ದೃಢಪಡಿಸಿರುವಂತೆ ಸಿಂಧೂ ನಾಗರಿಕತೆಯ ಜನರು ಆರ್ಯ ಭಾಷಿಕರಲ್ಲ; ಅವರು ದ್ರಾವಿಡ ಭಾಷಿಕರಾದ ಆದಿಯ ದಕ್ಷಿಣ ಭಾರತೀಯರು. ಸಂಸ್ಕೃತ ಭಾಷೆ ಮತ್ತು ವೈದಿಕ ಧರ್ಮಗಳ ಮೂಲ ಸಿಂಧೂ ನಾಗರಿಕತೆ ಅಲ್ಲ. ಅವೆರಡೂ ಮಧ್ಯ ಏಷಿಯಾದಿಂದ ಭಾರತಕ್ಕೆ ವಲಸೆ ಬಂದ ‘ಸ್ಟೆಪ್ಪಿಯ ಜನರ (ಆರ್ಯ ಭಾಷಿಕರ) ಕೊಡುಗೆ. ಆಧುನಿಕ ಭಾರತೀಯರು ಒಂದು ಮಿಶ್ರತಳಿಯಾಗಿದ್ದು ಅವರಲ್ಲಿ ಗಮನಾರ್ಹ ಪ್ರಮಾಣದಲ್ಲಿರುವುದು ಸಿಂಧೂ ನಾಗರಿಕತೆಯ ಜನರ ಅಂದರೆ ಆದಿಯ ದಕ್ಷಿಣ ಭಾರತೀಯರ ವಂಶವಾಹಿಗಳು. ಆದುದರಿಂದ ಪರಿಶುದ್ಧ ಆರ್ಯ ಜನಾಂಗ ಅಥವಾ ವೈದಿಕ ಜನಾಂಗ ಎಂಬುದು ಬರೀ ಮಿಥ್ಯ (ವಿವರಗಳಿಗೆ ಲಕ್ಷ್ಮೀಪತಿ ಕೋಲಾರ ಮತ್ತು ಸುರೇಶ್ ಭಟ್ ಬಾಕ್ರಬೈಲು ಅವರ ಹರಪ್ಪ: ಡಿ ಎನ್ ಎ ನುಡಿದ ಸತ್ಯ ಎಂಬ ಪುಸ್ತಕವನ್ನು ಗಮನಿಸಬಹುದು).

ಕಳೆದ ವರ್ಷ ನವೆಂಬರ್ 26, 2022 ರ ಸಂವಿಧಾನ ದಿನದಂದು ವೇದಕಾಲದಿಂದಲೂ ಭಾರತ ಪ್ರಜಾತಂತ್ರದ ತೊಟ್ಟಿಲಾಗಿತ್ತು ಎಂದು ಐಸಿಎಚ್‌ ಆರ್ ಒಂದು ಸುತ್ತೋಲೆ ಹೊರಡಿಸಿದೆ. ಈ ಹೊಸ ವ್ಯಾಖ್ಯಾನವನ್ನು ಹೇಗೆ ಅರ್ಥೈಸುವುದು, ತೀರಾ ಇತ್ತೀಚೆಗೆ ಅಂದರೆ 1930-32 ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ಗಾಂಧಿ, ಪಟೇಲರೂ ಸೇರಿದಂತೆ ಅನೇಕ ಘಟಾನುಘಟಿಗಳು ಎಲ್ಲರಿಗೂ ಮತದಾನದ ಹಕ್ಕು ಬೇಡ ಎಂದು ಹಠ ಹಿಡಿದಿದ್ದರು. ಅಂಬೇಡ್ಕ‌ರ್ ಏಕಾಂಗಿಯಾಗಿ ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ ಎಂದು ವಾದಿಸಿ ಗೆದ್ದರು.

ಹೊಸ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಗೊಳಿಸಲು ನೇಮಿಸಲಾಗಿದ್ದ ಸಮಿತಿಯ ಅಧ್ಯಕ್ಷರು ಒಬ್ಬ ನಿವೃತ್ತ ಐಎಎಸ್‌ ಅಧಿಕಾರಿ. ಅವರು ಸಿದ್ದಪಡಿಸಿದ್ದ ‘ಪೊಸಿಷನ್ ಪೇಪರ್ ನಲ್ಲಿ ನ್ಯೂಟನ್ ನ ಗುರುತ್ವಾಕರ್ಷಣ ಸಿದ್ಧಾಂತ ಮತ್ತು ಪೈಥಾಗೊರಸನ ಪ್ರಮೇಯ ಭಾರತೀಯ ಮೂಲದವು ಎಂದು ಬರೆದಿದ್ದಾರೆ. ಪತ್ರಿಕೆಯೊಂದು ಅವುಗಳ ಮೂಲ ಎಲ್ಲಿದೆ ಎಂದು ಕೇಳಿದಾಗ ಗೂಗಲ್ ಮತ್ತು ಕೋರಾ ಎಂದು ಉತ್ತರಿಸಿ ನಗೆಪಾಟಲಿಗೀಡಾಗಿದ್ದರು. ಮುಂದುವರಿದು ಮೊಟ್ಟೆ, ಮಾಂಸ ತಿನ್ನುವುದರಿಂದ ಕೊಬ್ಬಿನಂಶ ಹೆಚ್ಚಾಗುತ್ತದೆ, ಆದರಿಂದ ಜೀವನಶೈಲಿಯ ವ್ಯತ್ಯಯಗಳಾಟುಂಗಾಗುತ್ತವೆ ಎಂದು ಬರೆದಿದ್ದಾರೆ. ಅದು ಯಾರ ಅಜೆಂಡಾ ಎಂದು ಬಿಡಿಸಿ ಹೇಳಬೇಕಾಗಿಲ್ಲವಷ್ಟೆ! ವೇದಗಳಲ್ಲಿ ಎಲ್ಲವೂ ಇದೆ ಅಥವಾ ಭಾರತದಲ್ಲಿ ಎಲ್ಲವೂ ಇತ್ತು ಎಂದು ಹೇಳುವುದು ಕೆಲವರಿಗೆ ಒಂದು ಕಾಯಿಲೆಯಾಗಿಬಿಟ್ಟಿದೆ.

ಇಂದಿನ ಬಲಪಂಥೀಯ ಬೌದ್ಧಿಕರಿಗೆ ಇಸ್ಲಾಂ ಧರ್ಮ, ವ್ಯಕ್ತಿ, ವಿಷಯಗಳು ಅಪಥ್ಯವಾಗಿವೆ. ಎಲ್ಲ ಮುಸಲ್ಮಾನರನ್ನು ಭಯೋತ್ಪಾದಕರಂತೆ ಚಿತ್ರಿಸಲಾಗುತ್ತಿದೆ. ಎಲ್ಲ ಧರ್ಮಗಳಲ್ಲೂ ಉಗ್ರರಿದ್ದಾರೆ. ಪಠ್ಯಗಳಲ್ಲಿ ಅವರ ವಿಷಯಗಳ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಬ್ರಿಟಿಷರು ನಮ್ಮನ್ನು 250 ವರ್ಷಗಳು ಆಳಿದ್ದಾರೆ. ಅದಕ್ಕೂ ಮುಂಚೆ ಮೊಗಲರು ಸುಮಾರು 850 ವರ್ಷಗಳು ಆಳ್ವಿಕೆ ನಡೆಸಿದ ಇತಿಹಾಸವಿದೆ. ಅದನ್ನು ಚರಿತ್ರೆಯಿಂದ ಅಳಿಸಿಹಾಕುವ ಹುನ್ನಾರವಿದೆ. ಒಂದು ಸಾವಿರ ವರ್ಷಗಳ ಬೌದ್ಧರ ಇತಿಹಾಸವನ್ನು ವೈದಿಕಶಾಹಿ ಮುಚ್ಚಿಹಾಕಿತ್ತು ಎನ್ನುವುದನ್ನು ನಾವು ಮರೆಯಬಾರದು. ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಎಂಬ ಪುರಾತತ್ವ ಇಲಾಖೆಯ ಬ್ರಿಟಿಷ್ ಅಧಿಕಾರಿಯೊಬ್ಬ ಸಾರಾನಾಥದಲ್ಲಿ ಬೃಹತ್ ಧಮ್ಮಸ್ಥೂಪವನ್ನು ಗುರುತಿಸದಿದ್ದರೆ ಭಾರತದ ಇತಿಹಾಸ ಇಷ್ಟು ಕರಾರುವಕ್ಕಾಗಿ ನಮಗೆ ಸಿಗುತ್ತಿರಲಿಲ್ಲ. ಮುಸ್ಲಿಮರ ಇತಿಹಾಸವನ್ನು ಹಾಗೆ ತಳ್ಳಬಹುದೆಂದುಕೊಂಡಿದ್ದಾರೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಅದು ಸಾಧ್ಯವಾಗದು.

ಶಿಕ್ಷಣದಲ್ಲಿ ಅವ್ಯವಸ್ಥೆ

ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಅಥವಾ ಎರಡು ಮೂರು ಹಳ್ಳಿಗಳಿಗೆ ಒಂದರಂತೆ ಒಗ್ಗೂಡಿಸುತ್ತಿರುವುದು ವರದಿಯಾಗುತ್ತಲೇ ಇರುತ್ತದೆ. ಇದು ಶಾಲೆಗಳ ಕಳಪೆ ನಿರ್ವಹಣೆಯನ್ನು ಹೇಳುತ್ತದೆಯೇ ವಿನಃ ಬೇರೇನೂ ಅಲ್ಲ, ಕೆಲವು ಶಿಕ್ಷಕರು ತಮ್ಮ ಸ್ವಂತ ಆಸಕ್ತಿಯಿಂದ ಮತ್ತು ಖರ್ಚಿನಿಂದ ಶಾಲೆಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತದೆ. ಒಬ್ಬ ಶಿಕ್ಷಕ ಶಾಲೆಯ ಮೂಲಭೂತ ಅವಶ್ಯಕತೆಗಳಿಗೆ, ಬೋಧಕ ಸಲಕರಣೆಗಳಿಗೆ ಗೋಡೆಗೆ ಸುಣ್ಣ ಬಳಿಯಲು ಇತ್ಯಾದಿ ವೆಚ್ಚಕ್ಕಾಗಿ ಊರೂರು ಅಲೆದು ದಾನ ಕೇಳುವ ಪರಿಸ್ಥಿತಿ ಒದಗಿಬರುತ್ತದೆ ಎಂದರೆ ಅರ್ಥವೇನು? ಸರ್ಕಾರವು ಬಡತನದಲ್ಲಿದೆಯೆ? ಒಂದು ದೇಶದ ಏಳಿಗೆಗೆ ಶಿಕ್ಷಣ ಮತ್ತು ಆರೋಗ್ಯ ಮಹತ್ವದ ಪಾತ್ರವನ್ನು ವಹಿಸುತ್ತವೆ. ಅವುಗಳ ಸಮರ್ಥ ನಿರ್ವಹಣೆಗೆ ಆದ್ಯತೆಯನ್ನು ಕೊಡುವುದು ಸರ್ಕಾರದ ಕರ್ತವ್ಯ. ಜಸ್ಟೀಸ್ ರಾಜೇಂದ್ರ ಸಾಚಾರ್ ವರದಿಯಲ್ಲಿ ಮುಸ್ಲಿಮರ ಸಾಕ್ಷರತೆ ದಲಿತರಿಗಿಂತಲೂ ಹೀನಾಯಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ. ಆಡಳಿತದ ಉನ್ನತ ಹುದ್ದೆಗಳಲ್ಲಿ ಅವರ ಪ್ರಾತಿನಿಧ್ಯ ಕಡಿಮೆಯಿದೆ, ಸರ್ಕಾರ ಅತ್ತ ಗಮನ ಹರಿಸಿದಂತೆ ಕಾಣುವುದಿಲ್ಲ.

ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕೊಡಮಾಡುವ ವಾರ್ಷಿಕ ಸ್ಕಾಲರ್‌ಶಿಪ್‌ಗಳನ್ನು ನಿಲ್ಲಿಸಲಾಗಿದೆ ಎಂಬ ವದಂತಿಯಿದೆ. ಕಾರಣ ಕೇಳಿದರೆ ವಿದ್ಯಾಭ್ಯಾಸದ ಪೂರ್ಣ ವೆಚ್ಚವನ್ನು ಸರ್ಕಾರ ಭರಿಸುವುದರಿಂದ ನಿಲ್ಲಿಸುವ ಆಲೋಚನೆಯಿದೆ ಎಂದು ಹೇಳಿಕೆ ನೀಡಿದ್ದಾರೆ. ನನಗೆ ನೆನಪಿರುವ ಹಾಗೆ 70-80 ರ ದಶಕದಲ್ಲಿ ದಲಿತರ ಮನೆಗಳಲ್ಲಿ ಆ ಮಕ್ಕಳಿಗೆ ಬರುವ ಸ್ಕಾಲರ್‌ಶಿಪ್‌ಗಾಗಿ ಪೋಷಕರು ಕಾಯುತ್ತಿದ್ದರು. ಮಕ್ಕಳ ಜೊತೆಗೆ ತಾವು ಸಹ ಬಟ್ಟೆ ಹೊಲಿಸಿಕೊಳ್ಳುವುದು, ಮನೆಗೆ ಸಣ್ಣ ಪಟ್ಟು ಪಾತ್ರೆ ಪಗಡೆ ಕೊಳ್ಳುವುದನ್ನು ಮಾಡುತ್ತಿದ್ದರು. ಭೂಮಿಯಿಲ್ಲದೆ, ಯಾವುದೇ ಆರ್ಥಿಕ ಮೂಲವಿಲ್ಲದ ಕೂಲಿ ಮಾಡುವ ಗ್ರಾಮೀಣ ಜನರ ಬವಣೆ ಆಳುವ ವರ್ಗಕ್ಕೆ ತಿಳಿದಿದ್ದರೆ ಇಂತಹ ಕ್ರೂರ ತೀರ್ಮಾನಗಳಿಗೆ ಆಸ್ಪದವಿರುತ್ತಿರಲಿಲ್ಲ.

ಅದೇ ರೀತಿ ಯುಜಿಸಿಯು ಸಹ ಕಾಲೇಜುಗಳಿಗೆ, ವಿಶ್ವವಿದ್ಯಾಲಯಗಳಿಗೆ ಇದುವರೆಗೂ ಸುಮಾರು ನೂರಕ್ಕೂ ಹೆಚ್ಚು ಇದ್ದ ಯೋಜನೆಗಳನ್ನು, ಫೆಲೋಷಿಪ್ ಗಳನ್ನು, ಅನುದಾನಗಳನ್ನು ನಿಲ್ಲಿಸಿಬಿಟ್ಟಿದೆಯೆಂದು ತಿಳಿದುಬಂದಿದೆ. ಅದರಿಂದ ಹೆಚ್ಚು ದುಷ್ಪರಿಣಾಮ ಬೀರುತ್ತಿರುವುದು ದಲಿತ ಮತ್ತು ಹಿಂದುಳಿದ ಬಡ ವಿದ್ಯಾರ್ಥಿಗಳ ಮೇಲೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಮಾಸಿಕ ವಿದ್ಯಾರ್ಥಿ ವೇತನಕ್ಕೆ ಕಡಿತ ಬಿದ್ದಿದೆ. ಕಾರಣಗಳನ್ನು ಹೀಗೆ ಊಹಿಸಬಹುದು. ಒಂದು, ಸಂಶೋಧನೆಗೆ ಈ ವರ್ಗದ ಯುವಕ/ ಯುವತಿಯರು ಬಂದುಬಿಟ್ಟರೆ ಮುಂದಿನ ಸ್ನಾತಕೊತ್ತರ ಪದವಿಗಳಿಗೆ, ಉನ್ನತ ಹುದ್ದೆಗಳಿಗೆ ಅರ್ಹರಾಗಿಬಿಡುತ್ತಾರೆ. ಮತ್ತೆ ಅಲ್ಲಿಯೂ ಅವರ ಸಂಖ್ಯೆ ಹೆಚ್ಚಳವಾಗುತ್ತದೆ ಎಂಬುದು. ಎರಡನೆಯದು ಅವರು ಆರ್ಥಿಕವಾಗಿ ಕೊಂಚ ಸಬಲವಾಗುತ್ತಿರುವುದನ್ನು ಸಹಿಸಿಕೊಳ್ಳಲಾರದೆ ಇರುವುದು. ಹೀಗೆ ಹೇಳದೆ ಬೇರೆ ಮಾರ್ಗವಿಲ್ಲವಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯದ ಅಧ್ಯಾಪಕರೂ ಸಹ ಸಂಶೋಧನೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಮೊದಲೇ, ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಜಾತಿಭೇದದಿಂದ ಮಾನಸಿಕವಾಗಿ ಕುಸಿಯುತ್ತಿರುವ ವಿದ್ಯಾರ್ಥಿ/ ಅದ್ಯಾಪಕರುಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತಿದೆ.

ಇಂತಹ ವಸ್ತುಸ್ಥಿತಿಗಳನ್ನು ಮರೆತು ಮತ್ತೆ ಮತ್ತೆ ಮೆಖಾಲೆಯನ್ನು ತೆಗಳುತ್ತಾ ಅಂದಿನ ಕಾಲದ ಗುರುಕುಲ ಪದ್ಧತಿಯೇ ಶ್ರೇಷ್ಠವಾದ ಶಿಕ್ಷಣ ವ್ಯವಸ್ಥೆ ಎಂದು ಪ್ರಚಾರಕ್ಕಿಳಿದಿದ್ದಾರೆ. ಆದರೆ ಅಲ್ಲಿ ದ್ವಿಜರಲ್ಲದವರಿಗೆ ಪ್ರವೇಶವಿರಲಿಲ್ಲ ಎಂಬುದನ್ನು ಹೇಳುವುದಿಲ್ಲ. ಶೂದ್ರಾತಿಶೂದ್ರರನ್ನು ಎಲ್ಲ ಕಾಲದಲ್ಲಿಯೂ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ ಎಂಬುದನ್ನು ಅವರು ಅರಿಯಬೇಕಾಗಿದೆ. ಅನ್ಯಧರ್ಮೀಯರನ್ನು ಕೆಣಕಲೆಂದೇ ಈಗ ಶಾಲೆಗಳಲ್ಲಿ ಯೋಗ ತರಗತಿಗಳನ್ನು ನಡೆಸುವ, ಸೂರ್ಯ ನಮಸ್ಕಾರ ಮಾಡಿಸುವ, ಭಗವದ್ಗೀತೆಯನ್ನು ಬೋಧಿಸುವ ಪ್ರಸ್ತಾವನೆಗಳನ್ನು ಮುಂದೆಮಾಡುತ್ತಿದ್ದಾರೆ. ಇವೆಲ್ಲವೂ ಹಿಂದುತ್ವ ಹೇರಿಕೆಯ ಪೂರ್ವಾಭ್ಯಾಸಗಳು ಎಂದು ತಿಳಿಯಬೇಕು.

ಧರ್ಮ ಮುಖ್ಯವಲ್ಲ, ಧಾರ್ಮಿಕತೆ ಮುಖ್ಯ

ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿರುವ ಬಹು ಮುಖ್ಯ ಆರೋಪ ಮುಸಲ್ಮಾನ ಲೇಖಕ/ ಲೇಖಕಿಯರನ್ನು ಆಹ್ವಾನಿಸಿಲ್ಲ ಎನ್ನುವುದು. ಕಳೆದ ಎಂಟು ವರ್ಷಗಳಿಂದ ಮುಸ್ಲಿಮರೆಂದರೆ ಎಲ್ಲ ರಂಗಗಳಲ್ಲೂ ಒಂದು ರೀತಿಯ ಅವಜ್ಞೆ ಬೆಳೆದಿರುವುದನ್ನು ಕಾಣುತ್ತಿದ್ದೇವೆ. ಒಂದು ಪಕ್ಷವು ಒಂದು ಪಂಚಾಯಿತಿ ಚುನಾವಣೆಗೂ ಒಬ್ಬ ಮುಸಲ್ಮಾನನಿಗೆ ಟಿಕೇಟು ಕೊಡುವುದಿಲ್ಲ ಎಂದರೆ, ಅವರ ಮತಗಳ ಅಗತ್ಯ ನಮಗಿಲ್ಲ ಎಂದು ತೀರ್ಮಾನ ಮಾಡುತ್ತದೆಂದರೆ, ಸಮಾಜದಲ್ಲಿ ಒಳಗೊಳುವಿಕೆ ಇಲ್ಲ ಎಂದೇ ಅರ್ಥ. ಆದರೂ ‘ಎಲ್ಲರ ಜೊತೆ, ಎಲ್ಲರ ವಿಕಾಸ’ ಎಂಬ ಘೋಷಣೆ ನೀಡುತ್ತದೆ ಎಂದರೆ ಅದು ಎಂಥ ಹಿಪಾಕ್ರಸಿ ಇರಬಹುದು. ಪ್ರಾಯಶಃ ಸಂವಿಧಾನಾತ್ಮಕ ರಾಜಕೀಯ ಮೀಸಲಾತಿ ಇಲ್ಲದಿದ್ದರೆ ದಲಿತರಿಗೂ ಇದೇ ಪರಿಸ್ಥಿತಿ ಉಂಟಾಗುತ್ತಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ದಲಿತರಿಗೆ ಅಪವಿತ್ರ ಅಥವಾ ಮೈಲಿಗೆ ಎಂಬ ಸ್ಟಿಗ್ಮ ಬೇರೆ ಇರುವುದರಿಂದ ಅವರನ್ನು ಹತ್ತಿರ ಬಿಟ್ಟುಕೊಳ್ಳುವ, ಒಳಗೊಳ್ಳುವ ಸಾಧ್ಯತೆಯೇ ಇರಲಿಲ್ಲ ಎಂಬುದು ನನ್ನ ನಂಬುಗೆ, ಇದು ಇಂದು ಮುಸಲ್ಮಾನರು ಅನುಭವಿಸುತ್ತಿರುವ ರಾಜಕೀಯ ಅಸ್ಪೃಶ್ಯತೆ.

ಇನ್ನು ಸಮಾಜದೊಳಗಡೆ ಜೀವನ ಮಾರ್ಗದಿಂದಲೂ ಅವರನ್ನು ಹೊರಗಿಡುವ ಪ್ರಯತ್ನಗಳು ನಡೆಯುತ್ತಿದೆ. ಆದರಲ್ಲೂ ಕೆಳವರ್ಗದ ಮುಸ್ಲಿಮರ ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿದೆ. ವಿಶೇಷವಾಗಿ ಹಿಜಾಬ್ ಮತ್ತು ಹಲಾಲ್ ಘಟನೆಗಳ ನಂತರ ನಡೆಯುತ್ತಿರುವ ವಿದ್ಯಮಾನ ಇದು. ದೇವಸ್ಥಾನಗಳ ಮುಂದೆ ನೀವು ಹೂವು ಹಣ್ಣು ಮಾರಬಾರದು. ಊದುಬತ್ತಿ ಮಾರಬಾರದು, ಅಂಗಡಿ ಇಡಬೇಡಿ ಎಂಬುದು ಯಾವ ನ್ಯಾಯ? ಅದು ಎಲ್ಲಿಯವರೆಗೆ ಹೋಯಿತೆಂದರೆ ಅವರು ಓಡಿಸುವ ಆಟೋಗಳನ್ನು ಹತ್ತಬೇಡಿ, ಅವರ ಅಂಗಡಿಯಲ್ಲಿ ಮಾಂಸ ಖರೀದಿಸಬೇಡಿ ಎನ್ನುವವರೆಗೆ. ಇಲ್ಲಿ ಯಾವ ಧಾರ್ಮಿಕತೆ ಇದೆ. ಇವರಿಗೆ ಧರ್ಮ ಕಲಿಸಿರುವುದಾದರೂ ಏನನ್ನು ಎಂದು ನಾವು ಕೇಳಬೇಕಲ್ಲವೆ? ಮೇಲಾಗಿ ಇಲ್ಲಿನ ಮುಸಲ್ಮಾನರು ಮತ್ತು ಕ್ರೈಸ್ತರು ಮೂಲ ಭಾರತೀಯರು. ಅವರೇನು ಹೊರಗಿನಿಂದ ಬಂದವರಲ್ಲ, ಇಲ್ಲಿಯ ಮಣ್ಣಿನವರೆ. ಇಸ್ಲಾಂ ಭಾರತದಲ್ಲಿ ಶುರುವಾದುದ್ದೆ ಗುಲಾಮ ಸಂತತಿಯಿಂದ ಎಂದು ಇತಿಹಾಸ ಹೇಳುತ್ತದೆ. ಕೊಳ್ಳೆ ಹೊಡೆದ ಲೂಟಿಯನ್ನು ಹೊತ್ತು ಕೊಂಡೊಯ್ಯಲಾರದ ನೋಡಿಕೊಳ್ಳಲು ಬಿಟ್ಟವನೇ ಆ ಗುಲಾಮ. ಅವರೆಲ್ಲರೂ ಖಡ್ಗದ ತುದಿಯಲ್ಲಿ ಮತಾಂತರವಾದವರಲ್ಲ. ಹೆಚ್ಚಿನವರು ಜಾತಿವ್ಯವಸ್ಥೆಯ ಕರಾಳ ಶೋಷಣೆಯಿಂದ ವಿಮುಕ್ತಿಯನ್ನು ಬಯಸಿದವರು.

ಧರ್ಮ ಯಾವುದಾದರೂ ಇರಲಿ, ಧಾರ್ಮಿಕ ಎಂದರೆ ಇನ್ನೊಬ್ಬರಿಗೆ ಅನುಕಂಪ ತೋರುವುದು, ಸಹಮಾನವರೊಂದಿಗೆ ಹೊಂದಿಕೊಂಡು ಬಾಳುವುದು. ಈಗ ಏನಾಗಿದೆ ಅಂದರೆ ಪರರ ವಿಚಾರ, ಧರ್ಮಗಳ ಬಗ್ಗೆ ಅಸಹಿಷ್ಣುತೆ ಇದೆ. ಅವರ ಉಡುಗೆ, ಭಾಷೆ, ಜೀವನ ಕ್ರಮ ಯಾವುದೂ ಇಷ್ಟವಾಗುವುದಿಲ್ಲ. ಕೊರೊನಾ ಸಮಯದಲ್ಲಿ ಮುಸಲ್ಮಾನರು ತೋರಿದ ಔದಾರ್ಯ, ದಾನಶೀಲತೆ ಹೆಚ್ಚು ಪ್ರಶಂಸೆಗೆ ಪಾತ್ರವಾಯಿತು. ದೇಶದಾದ್ಯಂತ ಜೀವದ ಹಂಗನ್ನು ತೊರೆದು ಕೋವಿಡ್ ಹೆಣಗಳನ್ನು ದಫನು ಮಾಡುತ್ತಿದ್ದ ಮುಸ್ಲಿಮ್ ಯುವ ಸಂಘಟನೆಗಳು ನಿಜಕ್ಕೂ ಧಾರ್ಮಿಕತೆಯನ್ನು ಮೆರೆದವು. ಆ ಹಣಗಳು ಯಾವ ಧರ್ಮಕ್ಕೆ ಸೇರಿದವೆಂದು ಕೇಳಲಿಲ್ಲ. ಹಿಂದೂ ಧರ್ಮದ ಕೆಲ ಜಾತಿಗಳಲ್ಲಿ ಹೆಣವನ್ನು ಮುಟ್ಟುವುದಿರಲಿ, ನೋಡುವುದೂ ಇಲ್ಲ. ಅಂತಹ ಸಂದರ್ಭದಲ್ಲಿ ಜೀವದ ಹಂಗು ತೊರೆದು ಆ ಯುವಕರು ಸ್ಮಶಾನದಲ್ಲಿ ಹಗಲು ರಾತ್ರಿಗಳನ್ನು ಕಳೆದರು. ಕೋಲಾರದಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿ ತನ್ನ ಜಮೀನು ಮಾರಿ ಅನ್ನ ದಾಸೋಹವನ್ನು ಏರ್ಪಡಿಸಿದ್ದನು. ಸೌಹಾರ್ದತೆಗೆ ಒಂದು ಮಾದರಿ ಆತ. ಜಾತಿನಿಷ್ಟ ಸಮಾಜದಲ್ಲಿ ಅನೇಕ ಕೊರತೆಗಳಿವೆ. ಮಾನವೀಯತೆಯನ್ನು ಕಳೆದುಕೊಳ್ಳುವುದು ಧರ್ಮಕ್ಕೆ ಎಸಗುವ ಅತಿದೊಡ್ಡ ಅಪಮಾನ. ಇತ್ತೀಚೆಗೆ ಯಾವ ಸಂಕೋಚವೂ ಇಲ್ಲದ ಕೌರ್ಯವನ್ನು ಅಬ್ಬರಿಸಿ ಮಾತನಾಡುವವರನ್ನು ನೋಡುತ್ತಿದ್ದೇವೆ, ಟಿವಿ ಸಂದರ್ಶಕರಿಗೆ ಒಬ್ಬ ಮಹಿಳೆ “ನಾವು ಆರ್ಥಿಕತೆಯಿಂದ ಅವರ ಬೆನ್ನುಮೂಳೆಯನ್ನು ಮುರಿಯಬೇಕು” ಎಂದು ಹೇಳಿದ್ದರು. ಎಂಥ ಆಸಹನೆ! ಜಗತ್ತಿನ ಎದುರು ನಾವು ಬೆತ್ತಲಾಗುತ್ತಿದ್ದೇವೆ ಅನ್ನಿಸುತ್ತಿದೆ ನನಗೆ, ಬಾಬಾಸಾಹೇಬರು ಹೇಳಿದಂತೆ ಸಾಮಾಜಿಕ ಪ್ರಜಾಪ್ರಭುತ್ವ ನಮಗೆ ಇನ್ನೂ ಸಿಕ್ಕಿಲ್ಲ.

ಈ ಮೇಲಿನ ಮಾತುಗಳಿಂದ ತಿಳಿದುಬರುವುದೇನೆಂದರೆ ಸುಳ್ಳು ಮತ್ತು ದ್ವೇಷಗಳಿಂದ ಹಿಂಸೆಯನ್ನು ಪ್ರಚೋದಿಸುತ್ತಾ ಸಾಂಸ್ಕೃತಿಕ ರಾಷ್ಟ್ರೀಯತೆ ಎಂಬ ಹೊಸ ಸಂಕಥನವನ್ನು ಕಟ್ಟಲು ಹೊರಟಿರುವ ಹುಚ್ಚು ಯಜ್ಞಕುದುರೆಯನ್ನು ಪ್ರಜ್ಞಾವಂತ ಪ್ರಜೆಗಳು ಹಿಡಿದು ಕಟ್ಟಿಹಾಕಬೇಕಾಗಿದೆ. ಆನಂದ ಕೆ. ಕುಮಾರಸ್ವಾಮಿಯವರು ಹೇಳುವಂತೆ “ರಾಷ್ಟ್ರಗಳನ್ನು ನಿರ್ಮಿಸುವವರು ವ್ಯಾಪಾರಿಗಳಲ್ಲ ಅಥವಾ ರಾಜಕಾರಣಿಗಳಲ್ಲ. ಅದನ್ನು ಮಾಡುವವರು ಕಲಾವಿದರು ಮತ್ತು ಕವಿಗಳು” ಎಂಬ ಮಾತಿನೊಂದಿಗೆ ತಮ್ಮ ಭಾಷಣವನ್ನು ಮುಗಿಸಿದರು.

Share.
Exit mobile version