ನವದೆಹಲಿ:ಭಾರತದ ಶ್ರೀಮಂತ ಮತ್ತು ಮಹತ್ವಾಕಾಂಕ್ಷೆಯ ಮಧ್ಯಮ ವರ್ಗದ ಜನರು ವಿದೇಶಿ ಪ್ರವಾಸಗಳಿಗೆ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿರುವುದು ಇತ್ತೀಚಿನ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ, ಕಳೆದ ಮಾರ್ಚ್ ತಿಂಗಳೊಂದರಲ್ಲೇ ಭಾರತೀಯರು ವಿದೇಶಿ ಪ್ರವಾಸಗಳು ಮತ್ತು ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಗಾಗಿ ಭಾರಿ ಮೊತ್ತದ ಹಣವನ್ನು ವ್ಯಯಿಸಿದ್ದಾರೆ.
ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (LRS) ಅಡಿಯಲ್ಲಿ ವಿದೇಶಿ ಪ್ರವಾಸದ ವಿಭಾಗದಲ್ಲಿ ಕೇವಲ ಮಾರ್ಚ್ ತಿಂಗಳಲ್ಲೇ ಬರೋಬ್ಬರಿ 623 ಮಿಲಿಯನ್ ಡಾಲರ್ (ಅಂದಾಜು 5,900 ಕೋಟಿ ರೂಪಾಯಿಗೂ ಹೆಚ್ಚು) ಹಣ ಹೊರದೇಶಗಳಿಗೆ ಹರಿದುಹೋಗಿದೆ.
ವಿಮಾನ ದರ ಏರಿಕೆಯಿದ್ದರೂ ಕುಗ್ಗದ ಪ್ರವಾಸದ ಕ್ರೇಜ್
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಸಂಘರ್ಷಗಳು ಹಾಗೂ ಗಗನಕ್ಕೇರಿರುವ ವಿಮಾನ ಪ್ರಯಾಣದ ದರಗಳ ನಡುವೆಯೂ ಭಾರತೀಯರಲ್ಲಿ ವಿದೇಶಿ ಪ್ರವಾಸದ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಾರ್ಚ್ ತಿಂಗಳಲ್ಲಿ ಭಾರತೀಯರು ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಮಾಡಿದ ಒಟ್ಟು ವೆಚ್ಚದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಪಾಲು ಕೇವಲ ರಜೆ ದಿನಗಳ ಮೋಜು-ಮಸ್ತಿ (Holidays) ಮತ್ತು ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಸೆಟಲ್‌ಮೆಂಟ್‌ಗಳಿಗಾಗಿಯೇ ಬಳಕೆಯಾಗಿದೆ.
ವಿದೇಶಿ ಪ್ರವಾಸ ವಿಭಾಗದ ಹೊರತಾಗಿ, ವಿದೇಶದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಬೋಧನಾ ಶುಲ್ಕ ಮತ್ತು ವಸತಿ ವೆಚ್ಚಗಳಿಗಾಗಿ ಮಾರ್ಚ್ ತಿಂಗಳೊಂದರಲ್ಲೇ 450.16 ಮಿಲಿಯನ್ ಡಾಲರ್ ಹರಿದುಹೋಗಿದೆ.
ಉದ್ಯಮ ನಿಮಿತ್ತದ (Business Travel) ಪ್ರವಾಸಕ್ಕಾಗಿ 16.05 ಮಿಲಿಯನ್ ಡಾಲರ್, ವಿದೇಶಿ ವೈದ್ಯಕೀಯ ಚಿಕಿತ್ಸೆಗಾಗಿ 2.79 ಮಿಲಿಯನ್ ಡಾಲರ್ ಮತ್ತು ಧಾರ್ಮಿಕ ಯಾತ್ರೆಗಳಿಗಾಗಿ 2.55 ಮಿಲಿಯನ್ ಡಾಲರ್ ವೆಚ್ಚ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (FY26) ಒಟ್ಟು ಪ್ರವಾಸ ಸಂಬಂಧಿತ ವಿದೇಶಿ ವೆಚ್ಚಗಳು 16.4 ಬಿಲಿಯನ್ ಡಾಲರ್ ತಲುಪಿದೆ.








