ನವೆಹಲಿ : ಎರಡು ತಿಂಗಳ ಕಾಲ ಐಪಿಎಲ್ 2022(IPL 2022) ಕಾರ್ಯನಿರತವಾಗಿದ್ದ ಭಾರತೀಯ ಆಟಗಾರರು ಸ್ವಲ್ಪ ವಿರಾಮದ ನಂತ್ರ ಅಂತರಾಷ್ಟ್ರೀಯ ಟಿ20 ಆಡಲು ಸಿದ್ಧರಾಗಿದ್ದಾರೆ. ಅದ್ರಂತೆ, ದಕ್ಷಿಣ ಆಫ್ರಿಕಾದೊಂದಿಗೆ ಟೀಂ ಇಂಡಿಯಾ ಐದು ಪಂದ್ಯಗಳ T20 ಸರಣಿಯನ್ನ (IND vs SA) ಆಡಲಿದೆ. ಜೂನ್ 9 ರಿಂದ 19 ರವರೆಗೆ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯ ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದಾಗ್ಯೂ, ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ದೊಡ್ಡ ಆಘಾತವಾಗಿದೆ. ಹೌದು, ಐಪಿಎಲ್ 2022ರ ಋತುವಿನಲ್ಲಿ ತಮ್ಮ ಛಾಪು ಮೂಡಿಸಿದ ಇಬ್ಬರು ಪ್ರಮುಖ ಆಟಗಾರರನ್ನ ಸರಣಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಕೂಡ ಸೇರಿದ್ದಾರೆ. ರಾಹುಲ್ ಜೊತೆಗೆ ಕುಲದೀಪ್ ಯಾದವ್ ಕೂಡ ಗಾಯದ ಸಮಸ್ಯೆಯಿಂದ ಇಡೀ ಸರಣಿಯನ್ನ ಕಳೆದುಕೊಂಡಿದ್ದರು.
ಅಭ್ಯಾಸದ ವೇಳೆ ಕೆಎಲ್ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದರಿಂದ ವಿಶ್ರಾಂತಿ ಪಡೆಯಬೇಕಾಗಬಹುದು ಎಂದು ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಸಂಪೂರ್ಣ ಟಿ20 ಸರಣಿಯನ್ನು ಕಳೆದುಕೊಳ್ಳಲಿದ್ದಾರೆ. ಇನ್ನು ಕುಲದೀಪ್ ಯಾದವ್ ಕೂಡ ಅದೇ ಪರಿಸ್ಥಿತಿ. ಮುಂದಿನ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಕೆಎಲ್ ರಾಹುಲ್ ಲಭ್ಯರಾಗುತ್ತಾರೆಯೇ? ಅಥವಾ ಇಲ್ಲವೇ? ಎಂಬ ಅನುಮಾನವೂ ಮೂಡಿದೆ.
ಟೀಂ ಇಂಡಿಯಾ ಅಂತಿಮ ತಂಡ : ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ / ದೀಪಕ್ ಹೂಡಾ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್