ಮೈಸೂರು : ಇತ್ತೀಚಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ. ಗಳ ಹಗರಣ ನಡೆದಿತ್ತು. ಅದಾದ ಬಳಿಕ ಕಳೆದ ಎರಡು ದಿನಗಳ ಹಿಂದೆ ಬಿಬಿಎಂಪಿಯಲ್ಲಿ ಕೂಡ ಅಕ್ರಮ ಹಣ ವರ್ಗಾವಣೆ ಪ್ರಕರಣ ನಡೆದಿತ್ತು. ಇದೀಗ ಎಂಎಲ್​ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ತಂಡದ ಸಹಕಾರದಿಂದ ಮುಡಾ ಅಧಿಕಾರಿಗಳು ಸುಮಾರು 5 ಸಾವಿರ ಕೋಟಿ ರೂ. ಗಳ ಅವ್ಯವಹಾರ ನಡೆಸಿದ್ದಾರೆ ಎಂದು ಎಂ.ಎಲ್.ಸಿ ಎಚ್ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ನಗರದ ಜಲದರ್ಶಿನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು, ಅಧಿಕಾರಿಗಳು ಸಿಂಡಿಕೇಟ್‌ವೊಂದನ್ನು ರಚಿಸಿಕೊಂಡಿದ್ದಾರೆ. ಇದರ ಮೂಲಕ ಅವ್ಯವಹಾರ ನಡೆಸಿದ್ದಾರೆ. ಅವ್ಯವಹಾರದ ವಿಚಾರ ಹೊರಗೆ ಬರುತ್ತಿದ್ದಂತೆ, ಭಾನುವಾರವಾದರೂ ಅಧಿಕಾರಿಗಳು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಣತಿ ಮೇರೆಗೆ ಮುಡಾದ ಕಡತಗಳನ್ನು ದೊಡ್ಡ- ದೊಡ್ಡ ಸೂಟ್‌ಕೇಸ್‌ಗಳಿಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದರು.

ಈ ಒಂದು ಹಗರಣದಲ್ಲಿ ಮುಡಾ ಆಯುಕ್ತ ದಿನೇಶ್ ಕುಮಾರ್, ಶಾಸಕ ಕೆ. ಹರೀಶ್‌ಗೌಡ, ರಾಕೇಶ್ ಪಾಪಣ್ಣ, ಮುಡಾ ಅಧ್ಯಕ್ಷ ಕೆ. ಮರೀಗೌಡ, ಹಿಂದಿನ ಅಧ್ಯಕ್ಷ ರಾಜೀವ್, ಆಯುಕ್ತ ನಟೇಶ್, ಮರಿತಿಬ್ಬೇಗೌಡರ ಸಂಬಂಧಿ ಸುದೀಪ್, ದಲ್ಲಾಳಿಗಳಾದ ಉತ್ತಮಗೌಡ, ಮೋಹನ್, ಮುಡಾ ಕಮೀಷನರ್ ಬಾಮೈದ ತೇಜಸ್‌ಗೌಡ, ರೆಕಾರ್ಡ್ ರೂಂ ಅಧಿಕಾರಿ ತ್ರಿಶೂಲ್ ಮತ್ತಿತರರು ಭಾಗಿಯಾಗಿದ್ದಾರೆ. ಮುಡಾ ಅವ್ಯವಹಾರ ವಿಚಾರವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು. ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಸಲು ಆಗುವುದಿಲ್ಲ. ಏಕೆಂದರೆ ಅದು ರಾಜ್ಯ ಸರಕಾರದ ಮಾರ್ಗದರ್ಶನದಲ್ಲಿ ನಡೆಯುತ್ತದೆ ಎಂದರು.

Share.
Exit mobile version