ಬೆಂಗಳೂರು : 2024-25 ನೇ ಸಾಲಿನಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಹ ಸಂಬಂಧ ಕಲ್ಪಿಸುವುದು ಸೇತುಬಂಧ ಶಿಕ್ಷಣದ ಮೂಲ ಉದ್ದೇಶವಾಗಿದೆ.

2024-25ನೇ ಸಾಲಿಗೆ ಸೇತುಬಂಧ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು 1 ರಿಂದ 3 ನೇ ತರಗತಿಗಳಿಗೆ (ಕಲಿ-ನಲಿ) ಶಾಲಾ ಪ್ರಾರಂಭದ ಮೊದಲ 30 ದಿನಗಳು ಹಾಗೂ 4 ರಿಂದ 10 ನೇ ತರಗತಿಗಳಿಗೆ ಮೊದಲ 15 ದಿನಗಳನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ 1 ರಿಂದ 10 ನೇ ತರಗತಿವರೆಗೆ ತರಗತಿವಾರು ಮತ್ತು ವಿಷಯವಾರು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಹಾಗೂ ಪ್ರಥಮ ಭಾಷೆಗಳಾದ ಉರ್ದು, ಮರಾಠಿ, ತೆಲುಗು ಮತ್ತು ತಮಿಳಿಗೆ ಸಂಬಂಧಿಸಿದ ಕಲಿಕಾ ಸಾಮಗ್ರಿಯು DSERT website ನಲ್ಲಿ ಲಭ್ಯವಿದ್ದು, ಇವುಗಳನ್ನು ಬಳಸಿಕೊಂಡು ಈ ಕೆಳಸೂಚಿಸಿದ ಕಾರ್ಯತಂತ್ರಗಳನ್ನು ಅನುಸರಿಸಿ ಸೇತುಬಂಧ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು.

ಸೇತುಬಂಧ ಕಾರ್ಯಕ್ರಮದ ಅನುಷ್ಠಾನ ಕಾರ್ಯತಂತ್ರಗಳು.
2024 25ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿ ತರಗತಿಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ವಿದ್ಯಾ ಪ್ರವೇಶ ಹಾಗೂ ಸೇತುಬಂಧ ಚಟುವಟಿಕೆಗಳನ್ನು ಸಿದ್ಧಪಡಿಸಿ ನೂತನ ಅಭ್ಯಾಸ ಸಹಿತ ಪಠ್ಯಪಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಗಿದೆ.

ಕಲಿ-ನಲಿ ಪಠ್ಯಕ್ರಮ ಅನುಸರಿಸುತ್ತಿರುವ 01 ರಿಂದ 03 ನೇ ತರಗತಿವರೆಗೆ ಕನ್ನಡ & ಆಂಗ್ಲ ಮಾಧ್ಯಮ ಹಾಗೂ ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಭಾಷೆಗಳ ಸೇತುಬಂಧ ಸಾಹಿತ್ಯ DSERT website ನಲ್ಲಿ ಲಭ್ಯವಿರುವ ಸಾಹಿತ್ಯವನ್ನು ಬಳಸಿಕೊಳ್ಳುವುದು.

04 ರಿಂದ 10 ನೇ ತರಗತಿವರೆಗೆ ಕನ್ನಡ & ಅಂಗ್ಲ ಮಾಧ್ಯಮದ ಹಾಗೂ ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಪ್ರಥಮ ಭಾಷೆಗಳ ಸೇತುಬಂಧ ಸಾಹಿತ್ಯ DSERT website ನಲ್ಲಿ ಲಭ್ಯವಿರುವ ಸಾಹಿತ್ಯವನ್ನು ಬಳಸಿಕೊಳ್ಳುವುದು.

2024 25 ನೇ ಸಾಲಿನಲ್ಲಿ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಆಂಗ್ಲ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಮರು ಸಿಂಚನ ಕಾರ್ಯಕ್ರಮದಡಿ ಸಿದ್ದಪಡಿಸಿರುವ ವಿದ್ಯಾರ್ಥಿ ಕೈಪಿಡಿಗಳನ್ನು DSERT website ನಲ್ಲಿ upload ಮಾಡಲಾಗಿದ್ದು, ಸದರಿ ಸಾಹಿತ್ಯದ ಬುನಾದಿ ಹಂತದ ಚಟುವಟಿಕೆಗಳನ್ನು ಈ ಸುತ್ತೋಲೆಗೆ ಲಗತ್ತಿಸಿರುವ ಅನುಬಂಧದಂತೆ ಅಗತ್ಯಾನುಸಾರ ಸೇತುಬಂಧ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವುದು.
ಆಯಾ ತರಗತಿ ಬುನಾದಿ ಸಾಮರ್ಥ್ಯಗಳಿಗೆ ಅನುಗುಣವಾಗಿ ತರಗತಿ ಪ್ರಕ್ರಿಯೆಯನ್ನು ಅನುಕೂಲಿಸಲು ಚಟುವಟಿಕೆ ಆಧಾರಿತವಾಗಿ ಕಲಿಕಾ ತಂತ್ರಗಳನ್ನು ರೂಪಿಸಲಾಗಿದೆ ಮತ್ತು ಈ ಚಟುವಟಿಕೆಗಳ ನಿರ್ವಹಣೆಗೆ ಮಾರ್ಗಸೂಚಿಯನ್ನು ನೀಡಲಾಗಿದ್ದು, ಶಿಕ್ಷಕರು ಸದರಿ ಸಾಹಿತ್ಯವನ್ನು ಬಳಸಿ ತಮ್ಮ ತರಗತಿಯ ಪರಿಸರಕ್ಕೆ ಅನುಗುಣವಾಗಿ ಸೇತುಬಂಧವನ್ನು ಆಯೋಜಿಸುವುದು.

ಸಾಹಿತ್ಯದಲ್ಲಿ ನೀಡಿರುವ ಅಥವಾ ತಮ್ಮ ಹಂತದಲ್ಲಿ ಸ್ಥಳೀಯ ಸನ್ನಿವೇಶಕ್ಕೆ ಮತ್ತು ಅಪೇಕ್ಷಿತ ಕಲಿಕಾ ಫಲಗಳಿಗೆ ಅನುಗುಣವಾಗಿ ಚಟುವಟಿಕೆ ರೂಪಿಸಿಕೊಂಡು ಅನುಷ್ಠಾನಿಸಲು ಕ್ರಮ ವಹಿಸುವುದು.

ಚಟುವಟಿಕೆಗಳನ್ನು ರೂಪಿಸುವಾಗ ತರಗತಿ ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯಮಾಪನವನ್ನು ಅಂತರ್ಗತಗೊಳಿಸಲಾಗಿದ್ದು, ಶಿಕ್ಷಕರು ಮಕ್ಕಳ ಕಲಿಕಾ ಪ್ರಗತಿಯನ್ನು ನಿಯಮಿತವಾಗಿ ವಿದ್ಯಾರ್ಥಿಗಳ ಕೃತಿ ಸಂಪುಟದಲ್ಲಿ ದಾಖಲಿಸುವುದು.

ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಕಲಿಕಾ ತಂತ್ರಗಳನ್ನು ರೂಪಿಸಿ ನಿರಂತರ ಕಲಿಕೆಯನ್ನು ಅನುಕೂಲಿಸಲು ಕ್ರಿಯಾ ಯೋಜನೆಯನ್ನು ರೂಪಿಸುವುದು ಅತ್ಯವಶ್ಯಕ.

ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಲು ಸದರಿ ಸಾಹಿತ್ಯದಲ್ಲಿ ಮಾದರಿ ಪ್ರಶ್ನೆಗಳನ್ನು ನೀಡಲಾಗಿದ್ದು ತಮ್ಮ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಮೌಲ್ಯಮಾಪನ ಕೈಗೊಳ್ಳುವುದು ಮತ್ತು ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯ ಫಲಗಳ ಕಲಿಕೆಯಾಗಿದೆ ಎಂಬುದನ್ನು ಒಟ್ಟಾರೆಯಾಗಿ ಕೃತಿ ಸಂಪುಟದಲ್ಲಿ ದಾಖಲಿಸುವುದು.

ವಿದ್ಯಾರ್ಥಿಗಳ ಪುಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು (SAP) ಸಿದ್ಧಪಡಿಸಿ ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ಮಾಡುವುದು.

ಮಕ್ಕಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ ಲಿಖಿತ ಅಥವಾ ಮೌಖಿಕ ಪ್ರಶೋತ್ತರ, ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು ಹಾಗೂ ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿರುವುದು ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವುದು.

ಸೇತುಬಂಧ ಶಿಕ್ಷಣದ ಅವಧಿ ಮುಗಿದ ನಂತರವು ವಿದ್ಯಾರ್ಥಿಗಳಲ್ಲಿ ಇನ್ನೂ ಕೆಲ ಸಾಮರ್ಥ್ಯಗಳು ಗಳಿಕೆ ಆಗಿರದಿದ್ದಲ್ಲಿ ಅಂತಹವರನ್ನು ಗಮನಿಸಿ ಆಯಾ ತರಗತಿಯಲ್ಲಿ ಪೂರ್ವ ಸಿದ್ದತಾ ಚಟುವಟಿಕೆಗಳನ್ನು ನೀಡುವಾಗ ವಿಶೇಷ ಆದ್ಯತೆ ನೀಡಿ ಕಲಿಕೆಯನ್ನು ಅನುಕೂಲಿಸುವುದು.

Share.
Exit mobile version