ಬೆಂಗಳೂರು: ಆಧುನಿಕ ಜಗತ್ತಿನ ಈ ದುನಿಯಾದಲ್ಲಿ ನೀವು 18, 20, 22 ವರ್ಷಕ್ಕೇ ಪ್ರೀತಿಸಿ/ಅರೇಂಜ್ ಮದುವೆಯಾದ, ಕೆಲ ವರ್ಷಗಳಲ್ಲೇ ನಿಮಗೂ ಹೀಗೆ ಕಾಡಿರುತ್ತೆ. ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಮನಃಶಾಸ್ತ್ರಜ್ಞೆ ಡಾ.ರೂಪಾ ರಾವ್ ಹೇಳಿದ್ದಾರೆ. ಆ ಬಗ್ಗೆ ಮುಂದೆ ಓದಿ.

18 ,20 , 22 ವರ್ಷಕ್ಕೇ ಪ್ರೀತಿಸಿ/ ಅರೇಂಜ್ ಮದುವೆಯಾಗುವ ಹುಡುಗಿಯರಲ್ಲಿ ಹಲವಾರು ಜನ 26 ವರ್ಷಗಳಾದ ನಂತರ ತಮ್ಮ‌ ಬದುಕಿನತ್ತ ಅವಲೋಕನ ಮಾಡುತ್ತಾರೆ, ಅವರು ಒಂದಷ್ಟು ನೋಡಲು ಚೆನ್ನಾಗಿದ್ದು ಅಥವಾ ಒಂದಷ್ಟು ಪ್ರತಿಭೆ ಅಥವಾ ಕನಸುಗಳಿದ್ದರಂತೂ ತಮ್ಮ‌ ಆಯ್ಕೆ ಸರಿ ಇರಲಿಲ್ಲವಾ ಎಂಬ ಯೋಚನೆ ಬರಲಾರಂಬಿಸುತ್ತದೆ.

ಈ ಯೋಚನೆಯ ನಡುವಲ್ಲಿಯೇ ಸಂಸಾರದ ಒಂದಷ್ಟು ಬಿರುಕುಗಳು ಮುನಿಸುಗಳು ಹುಟ್ಟುವ ಸಮಯದಲ್ಲಿಯೇ ಯಾವನೋ ಒಬ್ಬ ಅವಳ‌ ಮನಸಿಗೆ ಹುಳ‌ ಬಿಡುತ್ತಾನೆ, ” ರೀ ದೇವತೇ ರೀ ನೀವು , ನಿಮ್ಮ ಕಣ್ಣಲ್ಲೀ ನೀರು ತರಿಸಿರೋ ಅವನು ನಿಮಗೆ ಸರಿಯಾದ ಜೋಡಿ ಅಲ್ಲ” ಅಂತಲೋ ಅಥವಾ ” ರೀ ನೀವು ಎಲ್ಲೋ ಇರಬೇಕಾದ ಮುತ್ತು ರೀ , ಇಲ್ಲಿ ನಿಮ್ಮ ಫ್ಯೂಚರ್ ಹಾಳು ಮಾಡಿಕೊಳ್ತಿದೀರಿ” ಅಂತಲೋ ಹೇಳುತ್ತಾನೆ‌.

ಅಸಲಿಗೆ ಆ ವ್ಯಕ್ತಿ ಕೂಡ ತನ್ನ ಪ್ರೇಯಸಿಗೋ ಅಥವಾ ಹೆಂಡತಿಗೋ ಇದೆ ರೀತಿ ಕಣ್ಣೀರು ತರಿಸಿರುತ್ತಾನೆ. ಇದು ಇವಳಿಗೆ ಗೊತ್ತಾಗುವುದಿಲ್ಲ. ಆ ಹೊಗಳಿಕೆ ಎಂಬ ಹುಳವನ್ನ ತಲೆಗೆ ತುಂಬಿಕೊಂಡು ಆ ಮನೆ ಇಂದ ಹೊರಗೆ ಬರುತ್ತಾಳೆ ಇಲ್ಲವಾದರೆ ಮನೆಯಲ್ಲಿಯೇ ಇದ್ದು ಹೊರಕಾಲು ಚಾಚುತ್ತಾಳೆ.

ಎರಡೂ‌ ನಡೆ ಅಪಾಯಕಾರಿಯಾದದ್ದು. ಇಂದು ಇವಳ‌ ತಲೆಗೆ‌ಹುಳ‌ಬಿಟ್ಟವ ನಾಳೆ ಇನ್ಯಾರಿಗೋ ಹುಳಿ ಬಿಡುತ್ತಾನೆ. ಇವಳು ಇನ್ನೆಲ್ಲೋ ಅಳುತ್ತಾಳೆ.

ಮದುವೆಯಾದ ಮಾತ್ರಕ್ಕೆ ಕನಸುಗಳನ್ನು ಅಡಗಿಸಿಡಬೇಕಾ? ಪ್ರೀತಿಸಿ ಮುದುವೆಯಾದ ತಕ್ಷಣ ಎಲ್ಲಕ್ಕೂ ಹೊಂದಿಕೊಳ್ಳಬೇಕಾ ? ಇಲ್ಲಿ ಹೆಣ್ಣನ್ನೇ ಏಕೆ ಆರೋಪಿಸಬೇಕು? ಮದುವೆಯಾಗಿಯೂ ಕನಸುಗಳನ್ನು ಈಡೇರಿಸಿಕೊಂಡ ಹಲವಾರು ಜನರಿದ್ದಾರೆ‌.

ಆದರೆ ಮದುವೆಯ ಆಲೋಚನೆ ಮಾಡುವಾಗ ಈ ಎಲ್ಲಾ ವಿಷಯಗಳೂ ಕಟ್ಟುನಿಟ್ಟಾಗಿ ಮಾತುಕತೆ ಆಗುವುದೇ ಇಲ್ಲ. ಅದರಲ್ಲಿಯೂ ನಮ್ಮ‌ಮಗಳು ಮುಂದೆ ಓದಬೇಕಂತಿದ್ದಾಳೆ/ ಹಾಡುಗಾರ್ತಿ ಆಗಬೇಕು ಅಂದುಕೊಂಡಿದ್ದಾಳೇ‌ ಅಥವಾ ನಾನು ಮುಂದೆ ಓದಬೇಕು/ ಸಿನಿಮಾ ನಟನೆ ಮಾಡಬೇಕು ಎಂಬ ಮಾತು ಕಥೆ ನಡೆಯುತ್ತದೆ‌, ಮದುವೆಯ ಅವಸರದಲ್ಲಿದ್ದವರು ಸರಿ ಅದಕ್ಕೇನು ಎಂದು ಹೇಳುತ್ತಾರೆ, ಮುಂದೆ ಸಂಸಾರ, ಮಗು ಇತ್ಯಾದಿಗಳಲ್ಲಿ ಇಚ್ಛೆ ಕನಸುಗಳು‌ ಕಳೆದುಹೋಗುತ್ತದೆ.‌ ಅದು ಬರುವ ಸಮಯವೇ‌ ಮೇಲಿನ ಸಮಯ.

ಇದರ ಬದಲಿಗೆ ಮದುವೆಯ ಸಮಯದಲ್ಲಿಯೇ‌ ಮೊದಲು ತನ್ನ ಗುರಿಯ ಬಗ್ಗೆ ಖಡಾಖಂಡಿತವಾಗಿ ಮಾತಾಡಬೇಕು. ಅದಕ್ಕಾಗಿ ಮಗು ಮಾಡಿಕೊಳ್ಳುವ ಸಮಯವನ್ನು ತಡ ಮಾಡಿಕೊಂಡರೂ ನಡೆಯುತ್ತದೇ.‌ ಹೇಗಿದ್ದರೂ ಹುಡುಗಿಯ ವಯಸು ಇನ್ನೂ ಚಿಕ್ಕದಾಗಿರುವುದರಿಂದ ಇದೇನೂ ತೊಂದರೆ ಆಗಲ್ಲ. ಕೆಲವರು ಮಕ್ಕಳನ್ನೂ ಸಂಭಾಳಿಸಿಕೊಂಡು ಗುರಿಯನ್ನೂ ತಲುಪುತ್ತಾರೆ. ನಿಜ ಆದರೆ ಇದು ಅವರನ್ನು ಹೊರತುಪಡಿಸಿ.

ನನ್ನ ಪ್ರಕಾರ ಮಾನಸಿಕವಾಗಿ ಮದುವೆಗೆ ಸೂಕ್ತವಾದ ವಯಸು ಹೆಣ್ಣಿಗೆ 25‌ವರ್ಷ ಅಥವಾ ಅದಕ್ಕೂ‌ ಮೇಲೆ . ಇಲ್ಲಿ ಹೆಣ್ಣಿಗೆ ಮೆಚ್ಯೂರಿಟಿ ತನ್ನ ಗುರಿ, ತನ್ನ ಅಗತ್ಯ, ತನ್ನ ಪ್ರಯಾರಿಟಿ ಇವುಗಳ ಸ್ಪಷ್ಟ ಅರಿವು ಬಂದಿರುತ್ತದೆ. ಆ ಸಮಯದಲ್ಲಿ ಇವುಗಳನ್ನು ಸ್ಪಷ್ಟವಾಗಿ ಗುರುತಿಸಿ ಹೇಳಬಲ್ಲಳು. ತೀರಾ ಹದಿನೆಂಟು, ಇಪ್ಪತ್ತರಲ್ಲಿ ಪ್ರೀತಿಸಿ ಅಥವಾ ಅರೇಂಜ್ಡ್ ಮದುವೆಯಾದಾಗ

ಕೆಲವರನ್ನು ಹೊರತುಪಡಿಸಿ ಒಂದಷ್ಟು ಹೆಣ್ಣುಗಳು ಒಂದೋ ಹೊಂದಾಣಿಕೆಯಾಗದ ಬದುಕಿಗೆ‌‌ ತಮ್ಮ ಆಸೆ ಆಕಾಂಕ್ಷೆಗಳನ್ನು ಬಲಿಕೊಟ್ಟು ಶರಣಾಗಿ ಹೊಂದಿಕೊಂಡು ಹೋಗುತ್ತಾರೆ ಇಲ್ಲವಾದಲ್ಲಿ ಒಂದಷ್ಟು ಜನ ಹೊಗಳಿಕೆಗೆ ಉಬ್ಬಿ ಬೇರೊಬ್ಬರೆಡೆಗೆ ಸೆಳೆಯಲ್ಪಟ್ಟು ಅಲ್ಲಿಯೂ ಮೋಸ ಹೋಗುತ್ತಾರೆ ಅಥವಾ ಕೆಲವರು ಡೈವೋರ್ಸಿನೆಡೆಗೆ ನಡೆಯುತ್ತಾರೆ.

ಈ ಮೇಲಿನ ಮೂರೂ ಅತಂತ್ರ ಬದುಕೇ. ಆದ್ದರಿಂದ ಮದುವೆಗೆ(ಹೆಚ್ಚಾಗಿ ಚಿಕ್ಕ ವಯಸಿನ ) ಮುಂಚೆ‌ ಹತ್ತಾರು ಕೋನಗಳಿಂದ ಯೋಚಿಸಿ ನಂತರ ಮುಂದುವರೆಯುವುದು ಒಳ್ಳೆಯದು.

ಹಾಗಂತಾ ಸರಿಯಾದ ವಯಸಿನಲ್ಲಿ ಮದುವೆ ಆದವರಿಗೆ ಈ ತೊಂದರೆಗಳಿಲ್ಲ ಅಂತಲ್ಲ , ಆದರೆ ಹಾಗೊಮ್ಮೆ ಬಂದರೂ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಪ್ರಬುದ್ಧತೆ ಬಂದಿರುತ್ತದೆ.

( ಇದು ಡಾ.ರೂಪಾ ರಾವ್ ಅವರು ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.)

‘ಶಿವಮೊಗ್ಗ ಮಹಾನಗರ ಪಾಲಿಕೆ’ ಆಯುಕ್ತರಾಗಿ ‘ಡಾ.ಕವಿತಾ ಯೋಗಪ್ಪನವರ್’ ನೇಮಕ

‘ಶಿವಮೊಗ್ಗ ಮಹಾನಗರ ಪಾಲಿಕೆ’ ಆಯುಕ್ತರಾಗಿ ‘ಡಾ.ಕವಿತಾ ಯೋಗಪ್ಪನವರ್’ ನೇಮಕ

Share.
Exit mobile version