ಮಂಡ್ಯ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದಲ್ಲಿ ಜಾರಿಯಲ್ಲಿದ್ದ ಮನುಧರ್ಮದ ಕಾನೂನನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಜಾರಿಗೆ ತರಲು ಶ್ರಮಿಸಿದ ಫಲವಾಗಿ ಇಂದು ದೇಶ ಅನೇಕ ಸುಧಾರಣೆಗಳನ್ನು ಕಾಣಲು ಸಾಧ್ಯವಾಗಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಶುಕ್ರವಾರ ಹೇಳಿದರು.
ಮದ್ದೂರು ಪಟ್ಟಣದ ಪುರಸಭೆ ಆವರಣದಲ್ಲಿ ಶಾಸಕ ಡಿ.ಸಿ. ತಮ್ಮಣ್ಣ ವೈಯಕ್ತಿಕವಾಗಿ 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 8 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ, ಈ ದೇಶದಲ್ಲಿ ಕಟ್ಟ ಕಡೆಯ ವ್ಯಕ್ತಿಯೂ ನಿರ್ಭೀತಿಯಿಂದ ಬದುಕುತ್ತಿದ್ದರೇ ಅದಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಕಾರಣರಾಗಿದ್ದಾರೆ. ಈ ದೇಶದಲ್ಲಿ ಸಂವಿಧಾನ ರಚನೆಯಾಗುವ ಮೊದಲು ಮನುಧರ್ಮದ ಕಾನೂನು ಜಾರಿಯಲ್ಲಿತ್ತು. ಒಂದೊಂದು ಸಮುದಾಯಕ್ಕೂ ಒಂದೊಂದು ವೃತ್ತಿಯನ್ನು ಘೋಷಣೆ ಮಾಡಲಾಗಿತ್ತು. ಆ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿ ಮಾಡಿದವರ ಹತ್ಯೆ ನಡೆಯುತ್ತಿತ್ತು. ದೇಶದಲ್ಲಿರುವ ಶೂದ್ರ ವರ್ಗದ ಜನರು ಮೇಲ್ಮಟ್ಟಕ್ಕೆ ಹೋಗಬಾರದು ಎನ್ನುವುದೇ ಮನುಧರ್ಮದ ಕಾನೂನಾಗಿತ್ತು ಎಂದು ವಿಷಾದಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ ನಂತರ ಆರ್ಟಿಕಲ್ 13 ರಲ್ಲಿ ಮನುವಾದದ ಕಾನೂನುಗಳನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವದ ಸಂವಿಧಾನವನ್ನು ಜಾರಿಗೆ ತಂದ ಫಲವಾಗಿ ಇಂದು ಶೋಷಿತ ವರ್ಗದ ಎಲ್ಲಾ ಸಮುದಾಯದ ಮಕ್ಕಳು ಐಎಎಸ್, ಐಪಿಎಸ್, ವೈದ್ಯಕೀಯ, ಇಂಜಿನಿಯರಿಂಗ್, ಸೇರಿದಂತೆ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಚುನಾವಣೆ ಸಮಯದಲ್ಲಿ ಹಣ ಪಡೆದು ಮತ ಚಲಾಯಿಸುವ ವ್ಯಕ್ತಿಗಳಿಗೆ ಅಂಬೇಡ್ಕರ್ ಅವರ ಹೆಸರೇಳುವ ಯೋಗ್ಯತೆ ಇಲ್ಲ ಎಂದು ಉರಿಲಿಂಗಿ ಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.
ಚುನಾವಣೆಯಲ್ಲಿ ಸೀರೆ, ಹಣ, ಹೆಂಡದ ಆಮಿಷ ಒಡ್ಡುವಂತ ರಾಜಕಾರಣಿಗಳನ್ನು ಮತದಾರರು ತಿರಸ್ಕರಿಸಬೇಕು. ರಾಜಕಾರಣಿಗಳು ಬೇರೆಯವರ ಹೆಂಗಸರಿಗೆ ಸೀರೆ ಉಡುಗೊರೆ ನೀಡುವ ಕೀಳುಮಟ್ಟದ ರಾಜಕಾರಣ ಈ ದೇಶದಲ್ಲಿ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕುವ ಕೆಲಸ ಮತದಾರರಿಂದ ಮಾತ್ರ ಆಗಬೇಕು ಎಂದು ಕಿವಿಮಾತು ಹೇಳಿದರು.
ಚುನಾವಣೆಗಳಲ್ಲಿ ಹೆಂಗಸರಿಗೆ ಕುಕ್ಕರ್, ಗಂಡಸರಿಗೆ ಲಿಕ್ಕರ್ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ತಮ್ಮ ಮಕ್ಕಳಿಗೆ ನಿಕ್ಕರ್ ಇಲ್ಲವಾಗುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಜನರು ಚುನಾವಣೆಯಲ್ಲಿ ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸಬೇಕು. ಪ್ರಜಾ ಪ್ರಭುತ್ವದ ವ್ಯವಸ್ಥೆಯನ್ನು ಕಾಪಾಡುವ ಶಕ್ತಿ ಹೊಂದಿರುವ ಈ ದೇಶದ ಜನರು ರಾಜಕಾರಣಿಗಳ ಆಮಿಷಕ್ಕೆ ಬಲಿಯಾಗಬಾರದು ಇದರಿಂದ ಮುಂದೊಂದು ದಿನ ಪಶ್ಚಾತ್ತಾಪ ಪಡುವ ಪರಿಸ್ಥಿತಿಯೂ ಎದುರಾಗಬಹುದೆಂದು ಸ್ವಾಮೀಜಿ ಎಚ್ಚರಿಸಿದರು.
ಚುನಾವಣೆಯಲ್ಲಿ ಜನರು ಮತಗಳನ್ನು ಮಾರಾಟ ಮಾಡುವ ಪ್ರವೃತ್ತಿ ಬಿಟ್ಟು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮತದಾನದ ಹಕ್ಕನ್ನು ನೀಡಲು ಅಂಬೇಡ್ಕರ್ ಅವರು ನಿರಂತರವಾಗಿ ಶ್ರಮ ಪಟ್ಟಿದ್ದಾರೆ. ಅವರ ಶ್ರಮ ಸಾರ್ಥಕವಾಗಬೇಕಾದರೇ. ಜನರು ಯಾವುದೇ ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೇ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಪಟ್ಟಣದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡುವಂತೆ ದಲಿತ ಸಂಘಟನೆಗಳ ಮುಖಂಡರು ಹಲವು ಬಾರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನನ್ನ ವೈಯಕ್ತಿಕ ಹಣದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೋಲೀಸ್ ವರಿಷ್ಠಾಧಿಕಾರಿ ಎಸ್.ಸಿದ್ದರಾಜು ಅಂಬೇಡ್ಕರ್ ಕುರಿತು ಪ್ರಧಾನ ಭಾಷಣ ಮಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಉಗ್ರ ನರಸಿಂಹ ದೇವಾಲಯದಿಂದ ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಬೆಳ್ಳಿ ರಥದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಚಾಮರಾಜನಗರ ನಳಂದ ಬೌದ್ದ ವಿಶ್ವ ವಿದ್ಯಾನಿಲಯದ ಪ್ರಧಾನ ಕಾರ್ಯದರ್ಶಿ ಭಂತೇ ಬೋದಿದತ್ತ ಮಹಾತ್ರೇಯ, ಟಿ.ನರಸೀಪುರ ನಳಂದ ಬುದ್ದ ವಿಹಾರದ ಬೋದಿರತ್ನ ಬಂತೇಜಿ, ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ.ಆನ್ನದಾನಿ, ಕೊಮ್ಮೆರಹಳ್ಳಿ ಆದಿ ಚುಂಚನಗಿರಿ ಮಠದ ಬಸವನಂದ ಸ್ವಾಮೀಜಿ, ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖ್ಯಾಧಿಕಾರಿ ಅಶೋಕ್, ವೈಚಾರಿಕ ಲೇಖಕ ಕೆ.ಮಾಯೀಗೌಡ, ಮಳವಳ್ಳಿ ಆದರ್ಶ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಮೂರ್ತಿ, ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ದಲಿತ ಮುಖಂಡರಾದ ಬೋರಯ್ಯ, ವೆಂಕಟಚಲುವಯ್ಯ, ವೆಂಕಟಗಿರಿಯಯ್ಯ, ಅಂದಾನಿ, ಕುಮಾರ್ ಕೊಪ್ಪ, ಕಾಳಯ್ಯ, ರವಿಕೀರ್ತಿ, ಮಹೇಂದ್ರ, ಪುರಸಭಾ ಸದಸ್ಯರು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BIGG NEWS : ಮಾ.31 ರಿಂದ ‘SSLC’ ಪರೀಕ್ಷೆ ಆರಂಭ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಮಹತ್ವದ ಸೂಚನೆ