ಬೆಂಗಳೂರು : ನಟಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಜೈಲಿನಲ್ಲಿದ್ದಾರೆ. ಇದಾದ ಬಳಿಕವೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಲವು ನಟಿಯರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಕಿರುಕುಳ ನೀಡುತ್ತಿದ್ದು ಈ ಕುರಿತಾಗಿ ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಕೂಡ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಒಂದರಲ್ಲಿ, ರೇಣುಕಾ ಸ್ವಾಮಿಯದ್ದು ಎನ್ನಲಾಗುತ್ತಿರುವ ಖಾತೆಯಿಂದ ನನಗೂ ಕೆಟ್ಟ ಸಂದೇಶ ಬಂದಿದೆ ಎಂದು ಸೋನು ಗೌಡ ಹೇಳಿದ್ದರು. ಇದೀಗ ಹೊಸ ವಿಡಿಯೋ ಒಂದನ್ನು ಹರಿಬಿಟ್ಟಿರುವ ನಟಿ, ತಮಗೆ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಸಂದೇಶಗಳು, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಸಂದೇಶಗಳು ಬಂದಿವೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಸೋನು ಗೌಡ ಯೂಟ್ಯೂಬ್ ಆಗಲಿ ಫೇಸ್ಬುಕ್ ಆಗಲಿ ಇನ್ಸ್ಟಾಗ್ರಾಮ್ ನಲ್ಲಿ ಆಗಲಿ ನನಗೆ ತುಂಬಾ ಕೆಟ್ಟದಾಗಿ ಬ್ಯಾಡ್ ಕಮೆಂಟ್ಸ್ ಬರುತ್ತಿವೆ. ದರ್ಶನ್ ಅವರ ಅಭಿಮಾನಿಗಳು ಬಾಸ್ ಬಗ್ಗೆ ಯಾಕೆ ಮಾತನಾಡಿಲ್ಲ ಅವರ ಪರವಾಗಿ ಯಾಕೆ ಮಾತನಾಡಿಲ್ಲ ಎಂದು ಆವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.

ನಾವು ಇನ್ನೂ ಚಿಕ್ಕೋರು, ಅವರ ಬಗ್ಗೆ ಮಾತನಾಡುವಷ್ಟು ನಾವಿನ್ನೂ ಬೆಳೆದಿಲ್ಲ. ನಾವು ಯಾರಿಗಾದರೂ ಒಮ್ಮೆ ಅಭಿಮಾನಿಯಾದರೆ ಸಾಯುವವರೆಗೆ ಅಭಿಮಾನಿಯಾಗಿಯೇ ಇರುತ್ತೇವೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಿಯೇ ಆಗುತ್ತೆ. ಒಳ್ಳೆಯರಾಗಿರಬಹುದು, ಕೆಟ್ಟವರಾಗಿರಬಹುದು, ತೀರ್ಪು ಅಂತ ಬರುತ್ತದೆ. ಅಲ್ಲಿಯವರೆಗೆ ಕಾಯೋಣ. ಅಲ್ಲಿಯವರೆಗೆ ದಯವಿಟ್ಟು ಕಾಯಿರಿ, ನಮಗೆ ಯಾವುದೇ ಥರ ಕೆಟ್ಟ ಸಂದೇಶಗಳನ್ನು, ಕಮೆಂಟ್ಸ್​ಗಳನ್ನು ಮಾಡಬೇಡಿ.

ಆದಷ್ಟು ಬೇಗ ದರ್ಶನ್ ಅವರು ನಿರಪರಾಧಿ ಎಂದಾಗಿ ಜೈಲಿನಿಂದ ಹೊರಗೆ ಬರಲಿ. ಅವರು ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಕಷ್ಟ ಎಂದವರಿಗೆ ಸಹಾಯ ಮಾಡಿದ್ದಾರೆ. ಅವರು ಇಂಥಹಾ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬುದು ನನ್ನ ವೈಯಕ್ತಿಕ ನಂಬಿಕೆ. ನನ್ನ ನಂಬಿಕೆ ನಿಜವಾಗಲಿ ಎಂದು ಬಯಸುತ್ತೇನೆ.ಅದೇ ರೀತಿ ಆ ಎರಡು ಕುಟುಂಬಗಳಿಗೂ ಸಹ ನ್ಯಾಯ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದಿದ್ದಾರೆ.

Share.
Exit mobile version