ಬೆಳಗಾವಿ : ಹುಬ್ಬಳ್ಳಿಯ ಬಿ ವಿ ಕಾಲೇಜು ಆವರಣದಲ್ಲಿ ನಡೆದ ನೇಹಾ ಹಿರೇಮಠ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಫಯಾಜ್ ತಂದೆ ಬಾಬಾ ಸಾಹೇಬ್ ಸುಭಾನಿ ಪ್ರತಿಕ್ರಿಯೆ ನೀಡಿದ್ದು ನನ್ನ ಮಗನನ್ನು ಸೈನಿಕನನ್ನಾಗಿ ಮಾಡಬೇಕೆಂಬ ಆಸೆ ಇತ್ತು ಆದರೆ ಅವನು ಕ್ಷಮಿಸಲಾರದಂತ ತಪ್ಪು ಮಾಡಿದ್ದಾನೆ. ಆದ್ದರಿಂದ ಅವನಿಗೆ ಯಾವ ಶಿಕ್ಷೆ ಕೊಟ್ಟರೂ ಅದನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ತಿಂಗಳ ಹಿಂದೆ ನೇಹಾ ಅವರ ತಂದೆ ಕರೆ ಮಾಡಿ, ಸರ್‌ ನಿಮ್ಮ ಮಗನಿಂದ ನಮ್ಮ ಮಗಳಿಗೆ ತೊಂದರೆ ಇದೆ. ದಯವಿಟ್ಟು ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದಿದ್ದರು. ಈ ಕಾರಣಕ್ಕಾಗಿ ನಾನು ಅವನನ್ನು ಬೆಳಗಾವಿಗೆ ಕರೆದುಕೊಂಡು ಬಂದು ಇಲ್ಲಿ ಇಟ್ಟುಕೊಂಡಿದ್ದೆ. ಆದರೆ ಕಳೆದ 2 ವರ್ಷದಿಂದ ಆತ ನನ್ನ ಜೊತೆಗೆ ಇರಲಿಲ್ಲ. ಬದಲಾಗಿ ತಾಯಿ ಜೊತೆ ಇದ್ದ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಳ್ಳುತ್ತಾ ಇದ್ದೆ. ಈ ಘಟನೆ ನಡೆದು 6 ಗಂಟೆಗೆ ನನಗೆ ಗೊತ್ತಾಯಿತು. ಅಲ್ಲಿವರೆಗೆ ನನನಗೆ ಏನೂ ಗೊತ್ತಿಲ್ಲ ಎಂದರು.

ಅವರಿಬ್ಬರ ನಡುವೆ ಅಫೇರ್ ಇತ್ತು. ಮಗ ಅವಳನ್ನು ಮದುವೆ ಆಗುತ್ತೇನೆ ಎಂದಿದ್ದ. ಆಗ ನಾನು ಬೇಡಪ್ಪ, ಅವರು ಗುರುಗಳು ಅಂಥವರ ಮಗಳನ್ನು ಮದುವೆ ಆಗುವುದು ನಮಗೆ ಗೌರವ ಅಲ್ಲ. ಮೊದಲೇ ದೇಶ ಹಾಗೂ ರಾಜ್ಯದಲ್ಲಿ ಲವ್‌ ಜಿಹಾದ್‌ ಅನ್ನೋದು ಹುಟ್ಟಿಕೊಂಡಿದೆ. ಇದಕ್ಕೆ ಬಣ್ಣ ಕಟ್ಟಿ ನಿನಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಬೇಡ ಅಂತಾ ಅವನ ಮುಂದೆಯೇ ಕೈಮುಗಿದು ಕೇಳಿಕೊಂಡಿದ್ದೆ.

6 ವರ್ಷದಿಂದ ನಾವಿಬ್ಬರು ಗಂಡ-ಹೆಂಡತಿ ಕೌಟುಂಬಿಕ ಕಲಹದಿಂದ ಬೇರೆಯಾಗಿದ್ದೇವೆ.2 ವರ್ಷದಿಂದ ಅವನು ನನ್ನ ಜೊತೆ ಮಾತಾಡ್ತಿರಲಿಲ್ಲ. ಶಿಕ್ಷಣಕ್ಕಾಗಿ ಹಣ ಕೊಡುತ್ತಿದ್ದೆ ಅಷ್ಟೇ. ಮಗ ಹಾಗೂ ಮಗಳು ನನ್ನ ಪತ್ನಿಯ ಜೊತೆ ವಾಸವಾಗಿದ್ದಾರೆ. ನಾನು ಒಬ್ಬನೇ ಬೇರೆ ಇದ್ದೀನಿ. ಮಗ ನನ್ನ ಜೊತೆ ಮಾತಾಡದೇ 3 ತಿಂಗಳು ಆಯ್ತು. ಹಣ ಬೇಕಾದರೆ ಮಾತ್ರ ಆತ ನನಗೆ ಫೋನ್‌ ಮಾಡುತ್ತಾನೆ. ಇಲ್ಲವೆಂದರಲ್ಲಿ ಫೋನ್‌ ಮಾಡಲ್ಲ ಎಂದು ತಿಳಿಸಿದರು.

ಇವತ್ತು ಇಂತಹ ಘಟನೆ ನಡೆದರೂ ನಾನು ಅವನ ಪರವಾಗಿಲ್ಲ. ಯಾಕೆಂದರೆ ಯಾರ ಮಕ್ಕಳಾದರೂ ನಮ್ಮ ಮಕ್ಕಳ ಥರನೇ. ಹೆಣ್ಮಕ್ಕಳು ಕಣ್ಣೀರು ಹಾಕಿದರೆ ಯಾರಿಗೂ ಇನ್ನೊಂದು ಸಲ ಯಾವ ಹೆಣ್ಮಕ್ಕಳಿಗೂ ತೊಂದರೆ ಕೊಡಬಾರದು ಅಂಥ ಶಿಕ್ಷೆ ಅವನಿಗೆ ಕೊಡಬೇಕು. ನೇಹಾ ತಂದೆಯ ಬಳಿ ಕ್ಷಮೆಯಾಚಿಸುತ್ತೇನೆ. ಯಾಕೆಂದರೆ ನೇಹಾ ಕೂಡ ನನಗೆ ಮಗಳಿದ್ದಂತೆ. ಇವತ್ತು ಅವರ ಮಗಳಿಗೆ ಆದ ಕಷ್ಟನೇ ನಾಳೆ ನನ್ನ ಮಗಳಿಗೂ ಆದರೂ ಕಷ್ಟನೇ ಎಂದು ಕಣ್ಣೀರು ಹಾಕಿದ್ದಾರೆ.

Share.
Exit mobile version