ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ ಸಿಕ್ಕಿದ್ದು, ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಗಿದೆ. ಬಳಿಕ ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ. ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದೆ. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಗಿದೆ. ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್ ಪೇಟೆ ಮೂಲಕ ಬುಧವಾರ ಬೆಳಗ್ಗೆ 7 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಲಿದೆ. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.

Share.
Exit mobile version