13 ವರ್ಷಗಳಿಗೂ ಹೆಚ್ಚು ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು (Permanent Vegetative State), ಭಾರತದಲ್ಲಿ ‘ಪ್ಯಾಸಿವ್ ಯುಥನೇಷಿಯಾ’ (ನಿಷ್ಕ್ರಿಯ ಇಚ್ಛಾಮರಣ) ಅನುಮತಿ ಪಡೆದ ಮೊದಲ ವ್ಯಕ್ತಿಯಾದ ಹರೀಶ್ ರಾಣಾ ಅವರ ಸಾವು, ಜೀವನದಲ್ಲಿ ಮಾತ್ರವಲ್ಲದೆ ಮರಣದಲ್ಲೂ ಘನತೆಯನ್ನು ಸಂಕೇತಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ. ಏಮ್ಸ್ (AIIMS) ಆಸ್ಪತ್ರೆಯು ಸಲ್ಲಿಸಿದ ರಾಣಾ ಅವರ ಕೊನೆಯ ದಿನಗಳ ಆರೈಕೆಯ ವರದಿಯನ್ನು ಸ್ವೀಕರಿಸುವಾಗ ನ್ಯಾಯಾಲಯ ಈ ಮಾತುಗಳನ್ನು ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ರಾಣಾ ಅವರ ನಿಧನವು ವೈದ್ಯಕೀಯ ವಿಜ್ಞಾನದ ಮಿತಿಗಳನ್ನು ಮತ್ತು ಜೀವನದ ಅಂತ್ಯಕಾಲದಲ್ಲಿ ರೋಗಿಯ ಸ್ವಾಯತ್ತತೆಯನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ.
“ವೈದ್ಯಕೀಯಕ್ಕೆ ತನ್ನದೇ ಆದ ಮಿತಿಗಳಿವೆ ಎಂಬದಕ್ಕೆ ಇದು ಒಂದು ನೆನಪೋಲೆ. ಒಬ್ಬ ವ್ಯಕ್ತಿಯು ಇಚ್ಛಿಸದ ರೀತಿಯಲ್ಲಿ ಆತನ ಜೀವನವನ್ನು ಸುದೀರ್ಘಗೊಳಿಸುವುದು ನಿಜವಾದ ಆರೈಕೆಯಲ್ಲ. ಅವರ ಇಚ್ಛೆಯಂತೆ ಮರಣ ಹೊಂದಲು ಬಿಡುವುದು ಮತ್ತು ಅವರ ನೋವನ್ನು ಕಡಿಮೆ ಮಾಡುವುದು ಅವರ ಘನತೆಯನ್ನು ಗೌರವಿಸಿದಂತೆ,” ಎಂದು ಪೀಠವು ತಿಳಿಸಿದೆ.
ವೈಯಕ್ತಿಕ ನಷ್ಟದ ನಡುವೆಯೂ ರಾಣಾ ಅವರ ಕುಟುಂಬವು ಅವರ ಕಣ್ಣಿನ ಪಾಪೆ (Corneas) ಮತ್ತು ಹೃದಯದ ಕವಾಟವನ್ನು (Heart Valve) ದಾನ ಮಾಡಲು ನಿರ್ಧರಿಸಿದ್ದನ್ನು ನ್ಯಾಯಾಲಯ ಶ್ಲಾಘಿಸಿದೆ. “ಈ ಕಾರ್ಯದ ಮೂಲಕ ಅವರು ಇತರರಲ್ಲಿ ಜೀವಂತವಾಗಿದ್ದಾರೆ,” ಎಂದು ನ್ಯಾಯಾಲಯ ಹೇಳಿದೆ.
ರಾಣಾ ಅವರ ಕೊನೆಯ ದಿನಗಳಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ಮತ್ತು ಆರೈಕೆ ನೀಡಿದ ಏಮ್ಸ್ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನ್ಯಾಯಾಲಯ ಅಭಿನಂದಿಸಿದೆ.
ಪಂಜಾಬ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ, 2013ರಲ್ಲಿ ಚಂಡೀಗಢದಲ್ಲಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ಅಂದಿನಿಂದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಶೇಕ್ಸ್‌ಪಿಯರ್‌ನ ಪ್ರಸಿದ್ಧ “ಇರಬೇಕೇ ಅಥವಾ ಬೇಡವೇ” (To be or not to be) ಎಂಬ ಸಾಲುಗಳನ್ನು ಉಲ್ಲೇಖಿಸಿ, ರಾಣಾ ಅವರಿಗೆ ನೀಡಲಾಗುತ್ತಿದ್ದ ಕೃತಕ ಆಹಾರ ಮತ್ತು ದ್ರವ ಪದಾರ್ಥಗಳನ್ನು (CANH) ನಿಲ್ಲಿಸಲು ಅನುಮತಿ ನೀಡಿತ್ತು.








