ಕೆಎನ್‌ಎನ್‌ಸಿನಿಮಾಡೆಸ್ಕ್: ಹರಿಕಥೆಯಲ್ಲ ಗಿರಿಕಥೆ ಸಿನಿಮಾ ಸದ್ಯ ಗಾಂಧಿನಗರದಲ್ಲಿ ಎಲ್ಲರ ಮೆದುಳಿಗೂ ಕೆಲಸ ಕೊಟ್ಟಿರುವಂತ ಸಿನಿಮಾ ಎಂದೇ ಹೇಳಬಹುದು. ಆ ಕುತೂಹಲಕ್ಕೆ ಬ್ರೇಕ್ ಬೀಳುವ ಸಮಯವೇನು ಬಹಳ ದೂರವಿಲ್ಲ. ಜೂನ್ 23 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಆದರೆ ಅದಕ್ಕೂ ಮುನ್ನ ಸಿನಿಮಾದ ಬಗ್ಗೆ ಟ್ರೇಲರ್ ಮೂಲಕ ಹೊಸ ಸುಳಿವೊಂದನ್ನು ಬಿಟ್ಟುಕೊಟ್ಟಿದೆ. ಇಂದು ಆನಂದ್ ಆಡಿಯೋದಲ್ಲಿ ಹರಿಕಥೆಯಲ್ಲ ಗಿರಿಕಥೆ ಸಿನಿಮಾದ ಟ್ರೇಲರ್ ಔಟ್ ಆಗಿದ್ದು, ಪ್ರತಿಯೊಬ್ಬ ಡೈರೆಕ್ಟರ್ ಗಳ ಕನಸು ನನಸಾಗುವ ಸುಸಮ. ಇದು ಪಕ್ಕಾ ಹಿಟ್ ಎಂಬ ಕಮೆಂಟ್ ಗಳನ್ನು ಪಡೆಯುತ್ತಿದೆ. ಈ ಚಿತ್ರ ಇದೇ ತಿಂಗಳ 23ರಂದು ತೆರೆ ಕಾಣಲಿದೆ.
.ಈ ಹಿಂದೆ ಚಿತ್ರತಂಡ ಮಾಧ್ಯಮದವರನ್ನು ಕರೆದು, ಸಿನಿಮಾದ ಬಗ್ಗೆ ಒಂದಷ್ಟು ಸ್ಪೆಷಲ್ ವಿಚಾರಗಳನ್ನು ಹೇಳಿಕೊಂಡಿತ್ತು. ಅಲ್ಲಿ ತನಕ ಇದೊಂದು ಕಾಮಿಡಿ ಜಾನರ್ ಸಿನಿಮಾವೆಂದಷ್ಟೇ ತಿಳಿದಿತ್ತು. ಆದರೆ ಸುದ್ದಿಗೋಷ್ಟಿಯಲ್ಲಿ ಈ ಸಿನಿಮಾ ಮೂವರು ಗಿರಿಗಳ ಸುತ್ತ ಸುತ್ತುವ ಭಯನಾಕ ಕಥೆ ಎಂಬ ಗುಟ್ಟು ರಟ್ಟುಮಾಡಿತ್ತು. ಇದೀಗ ಟ್ರೇಲರ್ ನಲ್ಲಿ ಆ ಮೂವರು ಗಿರಿಗಳ ಪರಿಚಯವೇನೋ ಆಗಿದೆ. ಆದರೆ ಇವರಿಂದ ಇವರಿಗೆ ಹೇಗಪ್ಪ ಲಿಂಕು ಎಂಬ ಪ್ರಶ್ನೆಯನ್ನು ತಲೆಯೊಳಗೆ ಬಿಟ್ಟುಕೊಳ್ಳುವಂತೆ ಮಾಡುತ್ತೆ.
ಡೈರೆಕ್ಟರ್ ಆಗಬೇಕೆಂಬ ಕನಸು ಹೊತ್ತವನಿಗೆ ನಿರ್ಮಾಪಕನನ್ನು ಹುಡುಕುವುದು ಎಷ್ಟು ಕಷ್ಟ ಎಂಬ ಸತ್ಯದಿಂದ ಟ್ರೇಲರ್ ಶುರುವಾಗುತ್ತೆ. ಈ ಕಥೆಯಲ್ಲಿ ಪೊಲೀಸ್ ಸ್ಡೇಷನ್, ನಾಟಕರಂಗ, ಆ ನಾಟಕದ ಮಧ್ಯೆ ಸಿಗುವ ಮನದರಸಿ, ಅಪ್ಪನ ಜೊತೆಗಿನ ಗುಂಡು ಪಾರ್ಟಿ ಎಲ್ಲವೂ ಗಮನ ಸೆಳೆಯುತ್ತದೆ. ಹಾಗೆ ಆ ಮೂವರು ಗಿರಿಗಳೆಂದರೆ ಒಂದು ಡೈರೆಕ್ಟರ್ ಗಿರಿ, ಇನ್ನೊಂದು ವಿಲನ್ ಗಿರಿ, ಮತ್ತೊಂದು ಹೀರೋಹಿನ್ ಗಿರಿಜಾ. ಈ ಮೂವರ ಕಥೆ ಸಾಗುವ ಬಗ್ಗೆ ಒಂದಷ್ಟು ಕುತೂಹಲ ಬೆಳೆದಿದೆ. ಕಾಮಿಡಿಯಂತು ಪಕ್ಕಾ ಇರುತ್ತೆ ಎಂಬುದು ಕನ್ಫರ್ಮ್ ಆಗಿದೆ. ಪ್ರಮೋದ್ ಶೆಟ್ಟಿ, ಹೊನ್ನವಳ್ಳಿ ಅವರಿರುವಾಗ ನಗುವಿನ ಟಾನಿಕ್ ಗ್ಯಾರಂಟಿ. ಜೊತೆಗೆ ರಿಷಬ್ ಶೆಟ್ಟಿ ಪಾತ್ರ, ವಿಲನ್ ಹಾಗೂ ರಚನಾ ಪಾತ್ರಗಳು ನಗಿಸುವುದರಲ್ಲಿ ನೋ ಡೌಟ್. ಈ ಎಲ್ಲಾ ನಗೆಪಾಟಲಿನೊಂದಿಗೆ ಅಲ್ಲೊಂದು ಎಮೋಷನಲ್ ಕಥೆ ಕೂಡ ಇದೆ. ಡೈರೆಕ್ಟರ್ ಆಗಬೇಕೆಂಬ ಕನಸಿನೊಂದಿಗೆ ತಂದೆಯ ಜೊತೆ ಕುಳಿತು ಸಿನಿಮಾ ನೋಡುವಂತೆ ಬೀಳುವ ಕನಸು ತಂದೆ ಮಗನ ಬಾಂಧವ್ಯವನ್ನು ತೋರಿಸುತ್ತಿದೆ.
ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾವನ್ನು ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶಿಸಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಗಿರಿ ಕೃಷ್ಣ ಅವರು ಕಥೆ ಕೊಟ್ಟಿದ್ದಾರೆ. ಟ್ರೈಲರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಕರ ಗಮನ ಸೆಳೆದಿದೆ. ತಪಶ್ವಿನಿ ಮತ್ತು ಲವ್ ಮಾಕ್ಟೈಲ್ ಖ್ಯಾತಿಯ ರಚನಾ ಇಂದರ್, ಯೋಗರಾಜ್ ಭಟ್, ಹೊನ್ನವಳ್ಳಿ ಕೃಷ್ಣ ನಟಸಿದ್ದಾರೆ.