ಬೆಂಗಳೂರು : ಬಿದಿರು ಕೃಷಿ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ಸರ್ಕಾರ ಬದ್ದವಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.

ಇಂದು ಕೃಷಿ ಇಲಾಖೆ ಆವರಣದ ಸಂಗಮ ಸಭಾಂಗಣದಲ್ಲಿ ಕೃಷಿ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯ ಇಲಾಖೆಗಳು, ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ, ಬಿದಿರು ಸೊಸೈಟಿ ಆಫ್ ಇಂಡಿಯಾ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರ ಹಾಗೂ ಬಿದಿರು ಕೃಷಿ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಬಿದಿರು ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಬಿದಿರು ಕೃಷಿ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಬಿದಿರು ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನವು ಉತ್ತಮವಾಗಿದೆ. ಇದು ರಾಜ್ಯ ಮಟ್ಟದಲ್ಲಿ ಬೆಳಕು ಚೆಲ್ಲುವ ಕಾರ್ಯಕ್ರಮವಾಗಿದೆ. ಬಿಡಿರಿನ ಉಪಯೋಗಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಬಿದಿರನ್ನು ಸಂಸ್ಕರಣೆ ಮಾಡಿ ಉಪಯೋಗಿಸಬಹುದು. ಕಡಿಮೆ ನೀರು, ಕಡಿಮೆ ವೆಚ್ಚದಲ್ಲಿ ಬಿದಿರನ್ನು ಬೆಳೆಯಬಹುದು. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ದಿನ ನಿತ್ಯವು ಬಿದಿರಿನಿಂದ ತಯಾರಿಸಿದ ವಸ್ತುಗಳ ಪ್ರಯೋಜನ ಪಡೆಯುತ್ತೇವೆ. ಬಿದಿರಿನಿಂದ ಮಾಡಿದ ಪೀಠೋಪಕರಣಗಳು ಗಟ್ಟಿ ಇರುವುದರಿಂದ ದೀರ್ಘಕಾಲ ನಾವು ಬಳಸಬಹುದು. ಬಿದಿರು ಕೇವಲ ಸಣ್ಣ ಪುಟ್ಟ ಪೀಠೋಪಕರಣ, ಆಟಿಕೆ ತಯಾರಿಸಲು ಸೀಮಿತವಾಗಿಲ್ಲ. ಬದಲಿಗೆ ದೊಡ್ಡ ಪಿಠೋಪಕರಣ, ನಿರ್ಮಾಣ ಕ್ಷೇತ್ರದಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ ಎಂದರು.

ಕೆಂಪೇಗೌಡ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಟರ್ಮಿನಲ್ 2 ನಲ್ಲಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಿದಿರನ್ನು ಉಪಯೋಗಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಕೃಷಿ ಅರಣ್ಯ-ರೈತರಿಗೊಂದು ಆಶಾಕಿರಣ ವಿಶೇಚ ಸಂಚಿಕೆ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸಿ.ಎನ್. ನಂದಿನಿಕುಮಾರಿ, ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ್, ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಅಜಯ್ ಮಿಶ್ರಾ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಕಮತರ, ಬಿದಿರು ಸೊಸೈಟಿ ಆಪ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಕೆ.ಎನ್. ಮೂರ್ತಿ, ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿಗಳಾದ ಹೆಚ್.ಜಿ.ಶಿವಾನಂದ ಮೂರ್ತಿ ಸೇರಿದಂತೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share.
Exit mobile version