ಬೆಂಗಳೂರು: ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ತಾತ್ಕಾಲಿಕವಾಗಿ ಶೇ. 17 ರಿಂದ ಶೇ. 15ಕ್ಕೆ ಸೀಮಿತಗೊಳಿಸಿ, ಒಳಮೀಸಲಾತಿಯನ್ನು ಜಾರಿಗೊಳಿಸುವ ಸಂಬಂಧ ಮಹತ್ವದ ಆದೇಶ ಹೊರಡಿಸಿದೆ. ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನೇರ ನೇಮಕಾತಿಗಾಗಿ ಹೊಸದಾಗಿ 400 ಬಿಂದುಗಳ ರೋಸ್ಟರ್ ಅನ್ನು ಅಳವಡಿಸಲಾಗಿದೆ.
ಒಳಮೀಸಲಾತಿ ಹಂಚಿಕೆ ಪ್ರಮಾಣ
ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಒಟ್ಟು ಶೇ. 15 ಮೀಸಲಾತಿಯಲ್ಲಿ ಮೂರು ಪ್ರವರ್ಗಗಳಿಗೆ ಈ ಕೆಳಕಂಡಂತೆ ಒಳಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ:
-
ಪ್ರವರ್ಗ-ಎ: ಶೇ. 5.25
-
ಪ್ರವರ್ಗ-ಬಿ: ಶೇ. 5.25
-
ಪ್ರವರ್ಗ-ಸಿ: ಶೇ. 4.5
59 ಅತ್ಯಂತ ಹಿಂದುಳಿದ ಜಾತಿಗಳಿಗೆ ವಿಶೇಷ ಅವಕಾಶ
ಪರಿಶಿಷ್ಟ ಜಾತಿಯ ಪ್ರವರ್ಗ-ಸಿ ಅಡಿಯಲ್ಲಿ ಲಭ್ಯವಾಗುವ ಹುದ್ದೆಗಳಲ್ಲಿ ಶೇ. 20 ರಷ್ಟು ಸ್ಥಾನಗಳನ್ನು ಆ ವರ್ಗದಲ್ಲಿನ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಲಾಗಿದೆ. ಒಂದು ವೇಳೆ ಈ ಜಾತಿಗಳ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು ಪ್ರವರ್ಗ-ಸಿ ನಲ್ಲಿನ ಇತರೆ ಜಾತಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ನೇಮಕಾತಿ ಪ್ರಾಧಿಕಾರಗಳಿಗೆ ಪ್ರಮುಖ ಸೂಚನೆಗಳು
ನೇಮಕಾತಿ ಸಂದರ್ಭದಲ್ಲಿ ರೋಸ್ಟರ್ ಪಾಲನೆಯ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ:
-
3ಕ್ಕಿಂತ ಕಡಿಮೆ ಹುದ್ದೆಗಳಿದ್ದಾಗ: ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ 3ಕ್ಕಿಂತ ಕಡಿಮೆ ಹುದ್ದೆಗಳಿದ್ದರೆ, ಒಳಮೀಸಲಾತಿ ಅನ್ವಯಿಸದೆ ಎಲ್ಲಾ 101 ಪರಿಶಿಷ್ಟ ಜಾತಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು.
-
3ಕ್ಕಿಂತ ಹೆಚ್ಚು ಹುದ್ದೆಗಳಿದ್ದಾಗ: ಪರಿಶಿಷ್ಟ ಜಾತಿಗೆ 3ಕ್ಕಿಂತ ಹೆಚ್ಚು ಹುದ್ದೆಗಳಿದ್ದಲ್ಲಿ ಕಡ್ಡಾಯವಾಗಿ ಒಳಮೀಸಲಾತಿ ಅನುಸರಿಸಿ ಪ್ರತ್ಯೇಕ ರೋಸ್ಟರ್ ನಿರ್ವಹಿಸಬೇಕು.
-
ಅಧಿಸೂಚನೆಗಳ ಹಿಂಪಡೆಯುವಿಕೆ: ಈಗಾಗಲೇ ಒಳಮೀಸಲಾತಿ ಅಳವಡಿಸದೆ ಹೊರಡಿಸಲಾಗಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ಒಳಮೀಸಲಾತಿ ನಿಯಮದಂತೆ ಪರಿಷ್ಕೃತ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿದೆ.
56,432 ಹುದ್ದೆಗಳ ನೇಮಕಾತಿಗೆ ಚಾಲನೆ
ಆರ್ಥಿಕ ಇಲಾಖೆಯು ಈಗಾಗಲೇ ಅನುಮೋದನೆ ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳಲು ಸಚಿವ ಸಂಪುಟವು ನಿರ್ಧರಿಸಿದೆ. ನ್ಯಾಯಾಲಯವು ಮುಂದೆ ಮೀಸಲಾತಿ ಪ್ರಮಾಣವನ್ನು ಶೇ. 24ಕ್ಕೆ ಹೆಚ್ಚಿಸಲು ಒಪ್ಪಿಗೆ ನೀಡಿದಲ್ಲಿ, ಹೆಚ್ಚುವರಿ ಶೇ. 6 ರಷ್ಟು ಹುದ್ದೆಗಳನ್ನು ಬ್ಯಾಕ್‌ಲಾಗ್ ಹುದ್ದೆಗಳೆಂದು ಪರಿಗಣಿಸಿ ಭರ್ತಿ ಮಾಡಲಾಗುವುದು.
ಸಮತಳ ಮೀಸಲಾತಿ ಮತ್ತು ರೋಸ್ಟರ್ ಬಿಂದುಗಳು
ಹೊಸದಾಗಿ ಬಿಡುಗಡೆ ಮಾಡಲಾದ 400 ಬಿಂದುಗಳ ರೋಸ್ಟರ್‌ನಲ್ಲಿ ಮೊದಲ ಬಿಂದುವಿನಿಂದ ನೇಮಕಾತಿ ಆರಂಭವಾಗಲಿದೆ. ಸಮತಳ ಮೀಸಲಾತಿಯನ್ನು (Horizontal Reservation) ದಿನಾಂಕ 08.03.2023ರ ಸರ್ಕಾರಿ ಆದೇಶದಂತೆ ಪ್ರತಿ ಪ್ರವರ್ಗಕ್ಕೂ ಪ್ರತ್ಯೇಕವಾಗಿ ಅನ್ವಯಿಸತಕ್ಕದ್ದು ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.









