ಶಿವಮೊಗ್ಗ: ಶ್ರಾವಣ ಮಾಸದ ಕೊಡುಗೆಯಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆ.ಜಿ ಗೆ ರೂ.1 ಹೆಚ್ಚಿಸಲಾಗುವುದು ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದರಾವ್ ತಿಳಿಸಿದರು.

ಮಾಚೇನಹಳ್ಳಿ ಹಾಲಿನ ಡೇರಿಯಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲ ಕಾಲಕ್ಕೆ ಪರಿಷ್ಕರಿಸುತ್ತಾ ಬಂದಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಪ್ರಗತಿಯಾಗಿದ್ದು, ದಿನಾಂಕ : 11-08-2022 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಕೆ.ಜಿ. ಗೆ ರೂ.1 ಹೆಚ್ಚಿಸಲಾಗುವುದು.

ಈ ದರ ಹೆಚ್ಚಳ ಕುರಿತು ದಿನಾಂಕ: 02-08-2022 ರಂದು ನಡೆದ ಒಕ್ಕೂಟದ 421 ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ ಪ್ರತಿ ಕೆ.ಜಿ ಹಾಲಿಗೆ (ಶೇ. 4.0 ಎಸ್‍ಎನ್‍ಎಫ್ 8.50%) 29.02 ಆಗಿದ್ದು ಆಗಸ್ಟ್ 11 ರಿಂದ ನೀಡುವ ದರ ರೂ.30.06/- ಆಗಲಿದೆ. ಸಂಘದಿಂದ ಉತ್ಪಾದರಿಗೆ ಹಾಲಿ ನೀಡುತ್ತಿರುವ ದರ (ಶೇ. 4.0 ಎಸ್‍ಎನ್‍ಎಫ್ 8.50%) ಪ್ರತಿ ಲೀಟರ್ ಹಾಲಿಗೆ ರೂ. 27.16 ಆಗಿದ್ದು ಆಗಸ್ಟ್ 11 ರಿಂದ ನೀಡುವ ದರ ರೂ.28.20 ಆಗಿರುತ್ತದೆ ಎಂದರು.

ಹಾಲಿನ ಮಾರಾಟವನ್ನು ಅಂತರ ರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಯೋಜನೆಯಿದ್ದು ದೆಹಲಿ ಮತ್ತು ಮಹಾರಾಷ್ಟ್ರಗಳಿಗೆ 1 ಲಕ್ಷ ಲೀ. ಹಾಲು ಸರಬರಾಜು ಮಾಡುವ ಕುರಿತು ಇದೇ ಆ.12 ರಂದು ಸಭೆ ನಡೆಸಲಿದ್ದೇವೆ. ಹಾಗೂ ಒಕ್ಕೂಟದ ಅಭಿವೃದ್ದಿ ಉದ್ದೇಶದಿಂದ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ.

ಪ್ರಸ್ತುತ ಒಕ್ಕೂಟದ ವ್ಯಾಪ್ತಿಯಲ್ಲಿ 1347 ಸಹಕಾರ ಸಂಘಗಳು ಇದ್ದು ಪ್ರತಿ ದಿನ 7 ಲಕ್ಷ ಲೀಟಲ್ ಹಾಲು ಉತ್ಪಾದನೆಯಾಗುತ್ತಿದೆ. 60 ಸಾವಿರ ಹಸುಗಳ ವಿಮೆ ಗುರಿ ಹೊಂದಲಾಗಿದೆ. ಶಿವಮೊಗ್ಗ ಹಾಲಿನ ಡೇರಿ ಆವರಣದಲ್ಲಿ ಆಧುನಿಕ ಪ್ಯಾಕಿಂಗ್ ಯಂತ್ರೋಪಕರಣ ಅಳವಡಿಸುವ ಹಾಗೂ ಕಚ್ಚಾ ಹಾಲಿನ ಪ್ರಯೋಗಾಲಯ ಆಧುನೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ.

ದಾವಣಗೆರೆ ಡೇರಿಯಲ್ಲಿ ದಿನವಹಿ 1.50 ಲಕ್ಷ ಲೀ. ಹಾಲು ಮತ್ತು 0.50 ಲಕ್ಷ ಕೆ.ಜಿ ಮೊಸರು ಉತ್ಪಾದನೆಗೆ ಅನುಕೂಲವಾಗುವಂತೆ ರೂ.15.00 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದೆ. ತಡಗಣಿ ಶೀತಲೀಕರಣ ಕೇಂದ್ರದಲ್ಲಿ ಹಾಲಿನ ತಣಿಸುವಿಕೆ ಸಾಮಥ್ರ್ಯವನ್ನು ಹೆಚ್ಚಿಸಲು ನೂತನ 20.0 ಕೆ.ಎ.ಪಿ.ಹೆಚ್ ಸಾಮಥ್ರ್ಯದ ಚಿಲ್ಲರ್ ಹಾಗೂ ಸ್ಟೋರೇಜ್ ಟ್ಯಾಂಕ್‍ಗಳನ್ನು ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಹೊನ್ನಾಳಿ ಶೀತಲೀಕರಣ ಕೇಂದ್ರದಲ್ಲಿ ನೂತನ 20.0 ಕೆ.ಎಲ್.ಪಿ.ಹೆಚ್ ಸಾಮಥ್ರ್ಯದ ಚಿಲ್ಲರ್ ಅಳವಡಿಸುವ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ ಹಾಗೂ ಹೊಸದುರ್ಗ ಪಟ್ಟಣದಲ್ಲಿ ನೂತನ ನಿವೇಶನ ಖರೀದಿಸಿ 60 ಕೆ.ಎಲ್ ಸಾಮಥ್ರ್ಯದ ಚಿಲ್ಲರ್ ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಆಜಾದಿ ಕ ಅಮೃತ ಮಹೋತ್ಸವ ಅಂಗವಾಗಿ ಎಲ್ಲ ಸಂಘಗಳಲ್ಲಿ ಮತ್ತು ಉತ್ಪಾದರ ಮನೆಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ಇದೇ ಸಂದರ್ಭದಲ್ಲಿ ಅಧ್ಯಕ್ಷರು ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಶಿಮುಲ್ ನಿರ್ದೇಶಕರು, ಪಶಪಾಲನಾ ಇಲಾಖೆಯ ಉಪನಿರ್ದೇಶಕ ಎಸ್.ವಿ.ಯಲಿ, ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್ ಇದ್ದರು.

Share.
Exit mobile version