ಶಿವಮೊಗ್ಗ : ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮೊದಲ ಬಾರಿಗೆ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಕೋಚಿಂಗ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ),ಶಿವಮೊಗ್ಗ ಇವರ ಸಹಯೋಗದಲ್ಲಿ ಜೂ.29 ರಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಶಿಕ್ಷಣ ಸುಗ್ಗಿ_-2024 ಕಾರ್ಯ ಕ್ರಮ ಉದ್ಘಾಟಿಸಿ ಅವರಿ ಮಾತನಾಡಿದರು. ಅನೇಕ ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ಪಡೆಯುವುದು ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಮೊದಲ ಬಾರಿಗೆ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಕೋಚಿಂಗ್ ನೀಡಲಾಗುವುದು. ಮೊದಲ ಹಂತದಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವ ಉದ್ದೇಶ ಹೊಂದಲಾಗಿದೆ.

ವಿದ್ಯಾರ್ಥಿಗಳೇ ದೇಶದ ಸಂಪನ್ಮೂಲ. ಯಾವುದೇ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅನುತ್ತೀರ್ಣರಾಗಬಾರದು ಹಾಗೂ ಉತ್ತಮ ಅಂಕ ಗಳಿಕೆಯ ಉದ್ದೇಶದಿಂದ ಮೂರು ಪರೀಕ್ಷೆಗಳನ್ನು ಮಾಡಿ ಅದರಲ್ಲಿ ಉತ್ತಮವಾಗಿ ಗಳಿಸಿದ ಅಂಕಗಳನ್ನು ಉಳಿಸಿಕೊಳ್ಳುವ ವ್ಯವಸ್ಥೆ ಪರಿಚಯಿಸಲಾಗಿದೆ. ಈ ವ್ಯವಸ್ಥೆ ರಾಷ್ಟ್ರದಲ್ಲೇ ಮೊದಲನೆ ಪ್ರಯತ್ನವಾಗಿದೆ. ಇದರಿಂದ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಂಭವ ಕಡಿಮೆ ಇದ್ದು ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ.

ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಕೃಷಿಗೆ ಎಂದಿಗೂ ಪ್ರಾಮುಖ್ಯತೆ ಇದೆ. ಕೃಷಿ ಮತ್ತು ತೋಟಗಾರಿಕೆ ಕೋರ್ಸ್‍ಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಅದರ ಸದುಪಯೋಗ ಪಡೆಯಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೃಷಿ ಭವಿಷ್ಯದಲ್ಲಿ ಬೇಡಿಕೆ ಇರುವ ವಲಯ ಆಗಲಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಶೇ.60 ರಷ್ಟು ರೈತರು ಇದ್ದು, ಕೃಷಿ ಕ್ಷೇತ್ರದಿಂದ ಜಿಡಿಪಿಗೆ ಶೇ.17 ಕೊಡುಗೆ ಇದೆ. ದೇಶಕ್ಕೆ ಕೃಷಿಕರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು, ವಿಶೇಷವಾಗಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯದಂತಹ ಪದವಿ-ಕೋರ್ಸ್‍ಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ವೇದಿಕೆಯಲ್ಲಿ ಹಲವಾರು ಸಾಧಕರು, ಕೃಷಿ ತಜ್ಞರು ಕೃಷಿ ಕೋರ್ಸುಗಳು, ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದು, ವಿದ್ಯಾರ್ಥಿಗಳು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಬೆಳೆಯುತ್ತದೆ.

ಕೃಷಿ ಉತ್ಪನ್ನಗಳು ಸಾಕಷ್ಟಿದ್ದು ಈ ಬಗ್ಗೆ ಜನರಿಗೆ ತಿಳಿಸುವಲ್ಲಿ ಹಿಂದೆ ಉಳಿದಿದ್ದೇವೆ. ಈ ಕೆಲಸವನ್ನು ನಾವು ಮಾಡಬೇಕಿದೆ. ಹಾಗೂ ಕೃಷಿ ಕೋರ್ಸ್‍ಗಳಿಗೆ ಸಾಕಷ್ಟು ಬೇಡಿಕೆ ಇದ್ದು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

Share.
Exit mobile version