ರಾಜ್ಯ ಸರ್ಕಾರದಿಂದ ಪರಿಸರ ಪ್ರೇಮಿಗಳಿಗೆ ಸಂತಸದ ಸುದ್ದಿ : ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ಜೀವವೈವಿದ್ಯದ ಸೊಬಗು ಕಣ್ತುಂಬಿಕೊಳ್ಳಲು ಅವಕಾಶ!

ಬೆಂಗಳೂರು : ಪರಿಸರಪ್ರೇಮಿಗಳಿಗೊಂದು ಸಂತಸದ ಸುದ್ದಿ. ಕಲಬುರಗಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ಚಾರಣದ ಜೊತೆಗೆ ಪ್ರಕೃತಿ ಸೌಂದರ್ಯ, ಜೀವವೈವಿದ್ಯದ ಸೊಬಗನ್ನು ಕಣ್ತುಂಬಿಕೊಳ್ಳುವ ಅವಕಾಶವೊಂದನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಗಿರಿ, ತೊರೆ, ದಟ್ಟ ಕಾನನದಿಂದ ಕೂಡಿರುವ ಸುಮಾರು 134 ಚ.ಕಿ.ಮೀ ವಿಸ್ತೀರ್ಣದ ಈ ಅಭಯಾರಣ್ಯವು ತನ್ನತ್ತ ಬರುವ ಪ್ರವಾಸಿಗರ ಮನಸೂರೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ನೀವು ಚಾರಣಪ್ರಿಯರಾಗಿದ್ದು, ವಾರಾಂತ್ಯದಲ್ಲಿ ಹೊಸ ಜಗತ್ತಿಗೆ ನಿಮ್ಮನ್ನು ನೀವು ತೆರೆದುಕೊಳ್ಳುವ ಪ್ರವೃತ್ತಿ ನಿಮ್ಮದಾಗಿದ್ದರೆ ಒಮ್ಮೆ ಚಂದ್ರಂಪಳ್ಳಿ ಪ್ರಕೃತಿ ಚಾರಣಕ್ಕೆ ಭೇಟಿ ನೀಡಿ.