ಬೆಂಗಳೂರು : ಸಾಗುವಳಿ ಭೂ ಮಂಜೂರಾತಿಗಾಗಿ ಬಗರ್ ಹುಕುಂ (ಅಕ್ರಮ ಸಕ್ರಮ) ಯೋಜನೆಯ ಅಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಭರವಸೆ ನೀಡಿದರು.

ಸೋಮವಾರ ಪ್ರಶ್ನೋತ್ತರ ಅವಧಿಯ ವೇಳೆ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬಗರ್ ಹುಕುಂ ಯೋಜನೆ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅನರ್ಹಗೊಂಡ ಅರ್ಜಿಗಳ ಸಂಖ್ಯೆ ಎಷ್ಟು? ಮತ್ತು ಅನರ್ಹಗೊಳಿಸಲು ಕಾರಣವೇನು? ಎಂದು ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಬಗರ್ ಹುಕುಂ ಕಾನೂನನ್ನು ಜಾರಿಗೆ ತಂದಿರುವುದೇ ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ. ಅರ್ಹ ಫಲಾನುಭವಿಗಳಿಗೆ ಭೂ ಮಂಜೂರು ಮಾಡುವುದು ಸರ್ಕಾರದ ಕರ್ತವ್ಯವೂ ಹೌದು. ಹೀಗಾಗಿ ತಿರಸ್ಕೃತ ಅಥವಾ ಅನರ್ಹಗೊಂಡ ಬಗರ್ ಹುಕುಂ ಅರ್ಜಿಗಳಲ್ಲಿ ತಪ್ಪಾಗಿದ್ದರೆ, ನಿಯಮ ಮೀರಿ ಅನರ್ಹಗೊಂಡಿದ್ದರೆ ಮತ್ತೊಮ್ಮೆ ಪುನರ್ ಪರಿಶೀಲನೆಗೆ ಸೂಚಿಸಲಾಗುವುದು” ಎಂದು ಭರವಸೆ ನೀಡಿದರು.

ಬಗರ್ ಹುಕುಂ ಅರ್ಜಿಗಳನ್ನು ಅನರ್ಹಗೊಳಿಸಲು ಕಾರಣವೇನು? ಎಂಬ ಬಗ್ಗೆಯೂ ಮಾಹಿತಿ ನೀಡಿದ ಸಚಿವರು,”ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದ ಅರ್ಜಿಗಳನ್ನು ಮಾತ್ರ ಅನರ್ಹಗೊಳಿಸಿಲ್ಲ. ಬದಲಾಗಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಬರುವ ಭೂಮಿಗೂ ಅರ್ಜಿ ಸಲ್ಲಿಸಲಾಗಿದೆ. ಆದರೆ, ಕಾನೂನಿನ ಪ್ರಕಾರ ಸದರಿ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಮುಂದುವರೆದು, “ಗೋಮಾಳ ಜಮೀನಿನ ಮಂಜೂರಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಕಟ್ಟುನಿಟ್ಟಿನ ಸೂಚನೆಗಳಿವೆ. ಗೋಮಾಳದಲ್ಲಿ ಹೆಚ್ಚುವರಿ ಜಮೀನಿನ ಲಭ್ಯತೆ ಇದ್ದಲ್ಲಿ ಮಾತ್ರ ಬಗರ್ ಹುಕುಂ ಅರ್ಜಿದಾರರಿಗೆ ಭೂ ಮಂಜೂರು ಮಾಡಬಹುದು. ಜಿಲ್ಲಾಧಿಕಾರಿಗಳ ಘೋಷಣೆಯ ನಂತರ ಮುಂದಿನ ಪ್ರಕ್ರಿಯೆಗಳು ಚಾಲನೆಗೊಳ್ಳುತ್ತವೆ. ಆದರೆ, ಹೆಚ್ಚುವರಿ ಭೂಮಿ ಇಲ್ಲದಿದ್ದರೆ ಗೋಮಾಳ ಜಮೀನಿನ ಮಂಜೂರಾತಿ ಸಾಧ್ಯವಿಲ್ಲ. ಒಂದು ವೇಳೆ ಮಂಜೂರುಗೊಳಿಸಿದರೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ಎದುರು ನಾವು ತಪ್ಪಿತಸ್ಥರಾಗಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆ” ಎಂದು ಮಾಹಿತಿ ನೀಡಿದರು.

ಟಾಟಾ ಸಮೂಹದ ಮಾರುಕಟ್ಟೆ ಮೌಲ್ಯವು ಈಗ ಪಾಕಿಸ್ತಾನದ ‘ಸಂಪೂರ್ಣ ಆರ್ಥಿಕತೆಗಿಂತ’ ಹೆಚ್ಚು

BIGG NEWS: ನಾಮಫಲಕ ವಿವಾದ: ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ವರ್ಗಾವಣೆ!?

Share.
Exit mobile version