ಬೆಂಗಳೂರು : ಬರದಿಂದ ತತ್ತರಿಸಿರುವ ರಾಜ್ಯದ ಅನ್ನದಾತರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೇಂದ್ರದಿಂದ ಬಿಡುಗಡೆಯಾಗಿರುವ ಬರ ಪರಿಹಾರ ಹಣದಲ್ಲಿ 2,425 ಕೋಟಿ ರು. ಹಣವನ್ನು 27.38 ಲಕ್ಷ ರೈತರಿಗೆ ಅರ್ಹತೆಗೆ ಅನುಗುಣವಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾವಣೆ ಮಾಡಲಾಗಿದೆ. 2-3 ದಿನಗಳಲ್ಲಿ ಎಲ್ಲ ರೈತರ ಖಾತೆಗಳಿಗೆ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2023ರ ಮುಂಗಾರು ಬೆಳೆ ಹಾನಿ ಬರ ಪರಿಹಾರ ವಿತರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಸೋಮವಾರವೇ ರೈತರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಆರ್ ಬಿಐನಿಂದ ರೈತರ ಖಾತೆಗೆ ವರ್ಗಾಯಿಸಲು 48 ಗಂಟೆ ಸಮಯ ಅಗತ್ಯ. ಹೀಗಾಗಿ ಎರಡು ಮೂರು ದಿನದಲ್ಲಿ ಎಲ್ಲರಿಗೂ ಹಣ ತಲುಪಲಿದೆ ಎಂದು ಹೇಳಿದ್ದಾರೆ.

2023 ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರಿಗೆ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 2000 ರೂ.ಗಳ ವರೆಗೆ ರೈತರಿಗೆ ಪಾವತಿಸಲು ಸರ್ಕಾರವು ಅನುಮತಿಯನ್ನು ನೀಡಲಾಗಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು.

ರಾಮನಗರ ಜಿಲ್ಲೆಯಲ್ಲಿ 2023 ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರಿಗೆ ಡಿಜಿಟಲ್ ಬೆಳೆ ಸಮೀಕ್ಷೆ ಮಾಹಿತಿ ಮತ್ತು ಎಫ್.ಐ.ಡಿ ಹೊಂದಿರುವ ರೈತರ ಮಾಹಿತಿಯನ್ನಾಧರಿಸಿ ಮೊದಲನೇ ಹಂತದಲ್ಲಿ ಗರಿಷ್ಠ 2000 ರೂ.ಗಳಂತೆ ಒಟ್ಟು 65170 ರೈತರಿಗೆ 1161.40 ಲಕ್ಷ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ಮೊತ್ತವನ್ನು ಜಮೆ ಮಾಡಲಾಗಿರುತ್ತದೆ.

ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತವನ್ನು ಮೇ 2 ರಂದು ಒಟ್ಟು 40810 ರೈತರಿಗೆ 2038.91 ಲಕ್ಷ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೊದನೆ ನೀಡಲಾಗಿದ್ದು ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಬೆಳೆ ಪರಿಹಾರ ಹಣ ಖಾತೆಗೆ ಜಮಾ ಆಗದೆ ಇರುವ ಬಗ್ಗೆ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದ್ದು ಸಾರ್ವಜನಿಕರು ದೂರುಗಳನ್ನು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ ಹಾಗೂ ಸಂಬಂಧಪಟ್ಟ ತಾಲ್ಲೂಕು ಕೃಷಿ ಅಧಿಕಾರಿ/ತಹಶೀಲ್ದಾರ್ ರವರ ಕಚೇರಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

Share.
Exit mobile version