ಬೆಂಗಳೂರು: ಬೆಂಗಳೂರು ಸೆ 13 ವಿಧಾನಪರಿಷತ್‌: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದ ಅಂಗನವಾಡಿಗಳಲ್ಲಿ ಅಳವಡಿಸಲಾಗುತ್ತಿದ್ದು, ಹೆಚ್ಚಿನ ವಿದ್ಯಾರ್ಹತೆ ಹೊಂದಿರದೇ ಇರುವ ಅಂಗನವಾಡಿ ಕಾರ್ಯಕರ್ತೆಯರನ್ನ ಕೆಲಸದಿಂದ ತಗೆದು ಹಾಕುವ ಪ್ರಶ್ನೆಯೇ ಇಲ್ಲ ಎಂದು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶ್ರೀ ಹಾಲಪ್ಪ ಆಚಾರ್‌ ಸ್ಪಷ್ಟಪಡಿಸಿದ್ದಾರೆ.

ಇಂದು ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ವಿಧಾನಪರಿಷತ್‌ ಸದಸ್ಯರಾದ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸುವ ಸಂಧರ್ಭದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸುಮಾರು 66,361 ಅಂಗನವಾಡಿ ಕೇಂದ್ರಗಳಿವೆ. ಇತ್ತೀಚಿಗೆ ರಾಜ್ಯ ಸರಕಾರ ನೂತನ 4,244 ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಪೈಕಿ 732 ಜನ ಸ್ನಾತಕೋತ್ತರ ಪದವಿಧರರಿದ್ದಾರೆ. 6,017 ಪದವೀಧರರು, 14,303 ಪಿಯುಸಿ ಮತ್ತು 40,786 ಅಂಗನವಾಡಿ ಕಾರ್ಯಕರ್ತೆಯರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಪಿಯುಸಿ ಗಿಂತ ಹೆಚ್ಚಿನ ವಿದ್ಯಾಹರ್ತೆ ಹೊಂದಿರುವ ಸುಮಾರು 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಎನ್‌ಇಪಿಯನ್ನು ಅನುಷ್ಠಾನಗೊಳಿಸಲಾಗುವುದು.

ಇನ್ನುಳಿದ ಅಂಗನವಾಡಿ ಕೇಂದ್ರಗಳಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಕಡಿಮೆ ವಿದ್ಯಾರ್ಹತೆ ಹೊಂದಿದ್ದು, ಅವರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಆ ಕೇಂದ್ರಗಳಲ್ಲೂ ನೂತನ ಪಠ್ಯಕ್ರಮ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಸಂಧರ್ಭದಲ್ಲಿ 6 ತಿಂಗಳಿನಿಂದ 1 ವರ್ಷದ ವರೆಗೂ ಡಿಪ್ಲಮೋ ತರಬೇತಿ ನೀಡಲು ಯೋಜಿಸಲಾಗಿದೆ. ಯಾವುದೇ ಹಂತದಲ್ಲಿಯೂ ಅವರನ್ನ ಕೆಲಸದಿಂದ ತಗೆಯುವ ಪ್ರಶ್ನೆ ಸರಕಾರದ ಮುಂದೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ನೂತನ ನೇಮಕಾತಿಯಲ್ಲಿ ಹೆಚ್ಚಿನ ವಿದ್ಯಾರ್ಹತೆ:
ರಾಜ್ಯದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ 4,244 ಅಂಗನವಾಡಿ ಕೇಂದ್ರಗಳ ನೇಮಕಾತಿಯ ಸಂಧರ್ಭದಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಬೇಕು ಎನ್ನುವ ಪರಿಷತ್‌ ಸದಸ್ಯರುಗಳ ಸಲಹೆಯನ್ನು ಸಚಿವರು ಸ್ವಾಗತಿಸಿದರು. ಈ ಬಗ್ಗೆ ಚಿಂತಿಸುವ ಭರವಸೆಯನ್ನು ನೀಡಿದರು.

ಎನ್‌ಇಪಿ ಪಠ್ಯಕ್ರಮಗಳ ಬಗ್ಗೆ ಇನ್ನೂ ಕೇಂದ್ರ ಸರಕಾರದಿಂದ ಸ್ಪಷ್ಟವಾದ ಮಾರ್ಗಸೂಚಿಗಳು ಲಭ್ಯವಾಗಿಲ್ಲ. ನಮ್ಮ ರಾಜ್ಯದಲ್ಲೂ 6 ಸಮಿತಿಗಳನ್ನು ರಚಿಸಲಾಗಿದ್ದು ಅವುಗಳು ಹಾಗೂ ಪರಿಷತ್‌ ಸದಸ್ಯರು ನೀಡಿದ ಸಲಹೆಯ ಮೇರೆಗೆ ಸಂಘ ಸಂಸ್ಥೆಗಳ ಸಲಹೆಗಳನ್ನು ಪಡೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Share.
Exit mobile version