ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಎರಡು ವರ್ಷಗಳಲ್ಲಿ ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರತಿಪಾದಿಸಿದರು.

ಅಹಮದಾಬಾದ್ ನಗರದ ನರೋಡಾ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಎಡಪಂಥೀಯ ಉಗ್ರವಾದವನ್ನು (ಎಲ್ಡಬ್ಲ್ಯೂಇ) ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಅನುವು ಮಾಡಿಕೊಡಲು ಮೋದಿಯವರನ್ನು ಮತ್ತೆ ಆಯ್ಕೆ ಮಾಡುವಂತೆ ಮತದಾರರನ್ನು ಒತ್ತಾಯಿಸಿದರು.

ಕಳೆದ ಐದು ವರ್ಷಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ನಕ್ಸಲ್ ಮುಕ್ತವಾಗಿವೆ. ಛತ್ತೀಸ್ ಗಢದ ಕೆಲವು ಭಾಗಗಳಲ್ಲಿ ನಕ್ಸಲೀಯರು ಇನ್ನೂ ಇದ್ದಾರೆ. ಪ್ರಧಾನಿ ಮೋದಿಗೆ ಮೂರನೇ ಅವಧಿಯನ್ನು ನೀಡಿ, ಮತ್ತು ಮೋದಿ ಎರಡು ವರ್ಷಗಳಲ್ಲಿ ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಹಿರಿಯ ಬಿಜೆಪಿ ನಾಯಕ ಘೋಷಿಸಿದರು.

ಅಹ್ಮದಾಬಾದ್-ಪೂರ್ವ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಸ್ಮುಖ್ ಪಟೇಲ್ ಅವರನ್ನು ಬೆಂಬಲಿಸಿ ನಡೆದ ರ್ಯಾಲಿಯನ್ನುದ್ದೇಶಿಸಿ ಅಮಿತ್ ಶಾ ಮಾತನಾಡುತ್ತಿದ್ದರು.

ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಉಲ್ಲೇಖಿಸಿದ ಅವರು, ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೆ ಮೋದಿ ಸರ್ಕಾರ ಉಚಿತ ಆರೋಗ್ಯ ಸೇವೆ ನೀಡಲಿದೆ ಎಂದು ಹೇಳಿದರು.

Share.
Exit mobile version