ದಾವಣಗೆರೆ : ಅವರೆಲ್ಲರೂ ಗೋವಾಕೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಈ ವೇಳೆ ಕಂಟೈನರ್ ಲಾರಿಗೆ ವೇಗವಾಗಿ ಬಂದಂತಹ ಕಾರೊಂದು ಅಪ್ಪಳಿಸಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದು, ಇನ್ನುಳಿದ ನಾಲ್ವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಪ್ರಜ್ವಲ್ ರೆಡ್ಡಿ, ಮಕ್ಕಳಾದ ಹರ್ಷಿತಾ, ನೋಹನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ವಿಜಯ್ ರೆಡ್ಡಿ ಎನ್ನುವವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆಗೆ ಕಂಟೈನರ್ ಲಾರಿ ಬರುತ್ತಿತ್ತು. ಇತ್ತ ಬೆಂಗಳೂರಿಂದ ಗೋವಕ್ಕೆಂದು ಫಾರ್ಚುನರ್​ ಕಾರೊಂದು ಹೋಗುತ್ತಿತ್ತು. ಈ ವೇಳೆ ಲಾರಿಯ ಟೈರ್​ ಬರ್ಸ್ಟ್​ ಆಗಿ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎಂಟು ಜನರಲ್ಲಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನುಳಿದ ಶಿಲ್ಪಾ, ಸ್ವರ್ಣ ಜಾರ್ಜ್, ಮಧುಮಿತ, ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದವರು ಬೆಂಗಳೂರಿನ ತಾಣಸಂದ್ರ ನಿವಾಸಿಗಳು ಆಗಿದ್ದು, ಕುಟುಂಬ ಸಮೇತ ಗೋವಾಗೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಈ ಮಧ್ಯೆ ಚಿತ್ರದುರ್ಗದ ಬಳಿ ಈ ಘಟನೆ ನಡೆದಿದೆ. ಮೃತ ದೇಹಗಳನ್ನು ದಾವಣಗೆರೆ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Exit mobile version