ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹೊಸದಾಗಿ ನೇಮಕಗೊಂಡ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳ ಕೈದಿಗಳು ತಮ್ಮ ತಮ್ಮ ಧರ್ಮಗಳ ಪವಿತ್ರ ಗ್ರಂಥಗಳನ್ನ ಕಂಠಪಾಠ ಮಾಡಿದರೆ ಅವರ ಜೈಲು ಶಿಕ್ಷೆಯನ್ನು ಕಡಿಮೆ ಮಾಡಲು ಪ್ರಸ್ತಾಪಿಸಿದೆ.

ಪಂಜಾಬ್ ಪ್ರಾಂತ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಕ್ರಿಶ್ಚಿಯನ್, ಹಿಂದೂ ಮತ್ತು ಸಿಖ್ ಕೈದಿಗಳಿಗೆ ಮೂರರಿಂದ ಆರು ತಿಂಗಳ ನಡುವಿನ ಶಿಕ್ಷೆಯನ್ನ ಮನ್ನಾ ಮಾಡುವಂತೆ ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆ ಗುರುವಾರ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಅವರಿಗೆ ಸಾರಾಂಶವನ್ನು ಕಳುಹಿಸಿದೆ.

“ಕ್ರಿಶ್ಚಿಯನ್ ಮತ್ತು ಹಿಂದೂ ಕೈದಿಗಳ ಪವಿತ್ರ ಗ್ರಂಥಗಳಾದ ಬೈಬಲ್ ಮತ್ತು ಭಗವದ್ಗೀತೆಯನ್ನು ಕ್ರಮವಾಗಿ ಕಂಠಪಾಠ ಮಾಡಿದ್ದಕ್ಕಾಗಿ ಮೂರರಿಂದ ಆರು ತಿಂಗಳ ನಡುವಿನ ಶಿಕ್ಷೆಯನ್ನ ಮನ್ನಾ ಮಾಡುವ ಪ್ರಸ್ತಾಪಕ್ಕಾಗಿ ಪಂಜಾಬ್ ಸರ್ಕಾರದ ಗೃಹ ಇಲಾಖೆ ಮುಖ್ಯಮಂತ್ರಿಗೆ ಸಾರಾಂಶವನ್ನ ಕಳುಹಿಸಿದೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

ಪಂಜಾಬ್‌ನ ಜೈಲು ಸೇವೆಯ ಅಧಿಕೃತ ವೆಬ್ಸೈಟ್ ಪ್ರಕಾರ, ಪವಿತ್ರ ಕುರಾನ್ ಕಂಠಪಾಠ ಮಾಡುವ ಮುಸ್ಲಿಂ ಅಪರಾಧಿಗಳು ಆರು ತಿಂಗಳಿನಿಂದ ಎರಡು ವರ್ಷಗಳವರೆಗೆ ಶಿಕ್ಷೆ ವಿನಾಯಿತಿ ಪಡೆಯಬಹುದು.

ಇನ್ನು ಮುಖ್ಯಮಂತ್ರಿಗಳ ಅನುಮೋದನೆಯ ನಂತರ, ಸಾರಾಂಶವನ್ನು ಅನುಮೋದನೆಗಾಗಿ ಸಂಪುಟಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ನಂತ್ರ ಗೃಹ ಇಲಾಖೆ ಕ್ರಿಶ್ಚಿಯನ್ ಮತ್ತು ಹಿಂದೂ ಕೈದಿಗಳನ್ನು ಬಿಡುಗಡೆ ಮಾಡಲು ಅಧಿಸೂಚನೆ ಹೊರಡಿಸುತ್ತದೆ.

ಈ ಕ್ರಮವು ಅಲ್ಪಸಂಖ್ಯಾತ ಸಮುದಾಯಗಳ ಕೈದಿಗಳಿಗೆ ಅವರ ಪವಿತ್ರ ಗ್ರಂಥಗಳನ್ನ ಅಧ್ಯಯನ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಅಧಿಕಾರಿ ಹೇಳಿದರು.

ಅಂದ್ಹಾಗೆ, ಪಾಕಿಸ್ತಾನ ಕಾರಾಗೃಹಗಳ ನಿಯಮಗಳು 1978ರ ನಿಯಮ 215 ರ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾದ ವಿನಾಯಿತಿ ಇತರ ಧರ್ಮಗಳ ಕೈದಿಗಳಿಗೆ ನೀಡುವಂತೆ ಕೋರಿ ಕ್ರಿಶ್ಚಿಯನ್ ಒಬ್ಬರು ಅರ್ಜಿ ಸಲ್ಲಿಸಿದ ನಂತ್ರ ಮಾರ್ಚ್‌ನಲ್ಲಿ ಲಾಹೋರ್ ಹೈಕೋರ್ಟ್, ಅಲ್ಪಸಂಖ್ಯಾತ ಕೈದಿಗಳಿಗೆ ವಿನಾಯಿತಿ ನೀಡುವ ಬಗ್ಗೆ ಪಂಜಾಬ್ ಸರ್ಕಾರದಿಂದ ವರದಿಯನ್ನ ಕೋರಿತ್ತು.

Share.
Exit mobile version