ನವದೆಹಲಿ:ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಗುರುವಾರ (ಮೇ 14, 2026) ಯುಎಇ ಕರಾವಳಿಯ ಬಳಿ ಅಪರಿಚಿತರು ಹಡಗೊಂದನ್ನು ಅಪಹರಿಸಿ ಇರಾನ್‌ನತ್ತ ಕೊಂಡೊಯ್ದಿದ್ದರೆ, ಇತ್ತ ಓಮನ್ ಕರಾವಳಿಯಲ್ಲಿ ಭಾರತೀಯ ಧ್ವಜ ಹೊತ್ತ ಹಡಗೊಂದು ಡ್ರೋನ್ ದಾಳಿಗೆ ತುತ್ತಾಗಿ ಸಮುದ್ರದಲ್ಲಿ ಮುಳುಗಿದೆ.
ಸೊಮಾಲಿಯಾದಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಭಾರತೀಯ ಸರಕು ಸಾಗಣೆ ಹಡಗು ‘ಹಾಜಿ ಅಲಿ’ ಮೇಲೆ ಓಮನ್ ಕರಾವಳಿಯ ಬಳಿ ಭೀಕರ ಡ್ರೋನ್ ದಾಳಿ ನಡೆದಿದೆ. ದಾಳಿಯ ಬೆನ್ನಲ್ಲೇ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಸಮುದ್ರದ ಪಾಲಾಗಿದೆ. ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲಾ 14 ಭಾರತೀಯ ಸಿಬ್ಬಂದಿಯನ್ನು ಓಮನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ದಾಳಿಯನ್ನು ಕಟುವಾಗಿ ಖಂಡಿಸಿದೆ.
ಹಡಗಿನ ಅಪಹರಣ: ಯುಎಇಯ ಫುಜೈರಾ ಬಂದರಿನಿಂದ ಸುಮಾರು 70 ಕಿ.ಮೀ ದೂರದಲ್ಲಿ ಲಂಗರು ಹಾಕಿದ್ದ ಹಡಗೊಂದನ್ನು ಸಶಸ್ತ್ರಧಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಡಗು ಈಗ ಇರಾನ್ ಜಲಪ್ರದೇಶದತ್ತ ಸಾಗುತ್ತಿದೆ ಎಂದು ಬ್ರಿಟಿಷ್ ಸೇನೆ (UKMTO) ದೃಢಪಡಿಸಿದೆ. ಈ ಹಡಗು ಯಾವ ದೇಶಕ್ಕೆ ಸೇರಿದ್ದು ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಜಾಗತಿಕ ತೈಲ ಮಾರುಕಟ್ಟೆಗೆ ಹೊಡೆತ: ವಿಶ್ವದ ಶೇ. 20 ರಷ್ಟು ತೈಲ ಸರಬರಾಜು ನಡೆಯುವ ಈ ಮಾರ್ಗವು ಈಗ ಅಕ್ಷರಶಃ ಬಂದ್ ಆಗಿದೆ. ಇರಾನ್ ಈ ಮಾರ್ಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅಮೆರಿಕವು ಇರಾನ್ ಬಂದರುಗಳ ಮೇಲೆ ದಿಗ್ಬಂಧನ ಹೇರಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 2022ರ ನಂತರದ ಗರಿಷ್ಠ ಮಟ್ಟಕ್ಕೆ ತಲುಪಿದೆ.
ರಾಜತಾಂತ್ರಿಕ ಪ್ರಯತ್ನ: ಈ ಉದ್ವಿಗ್ನತೆಯ ನಡುವೆಯೇ ಚೀನಾ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸಲು ಸಮ್ಮತಿಸಿದ್ದಾರೆ. ಆದರೆ, ವಾಸ್ತವದಲ್ಲಿ ಯುದ್ಧದ ಭೀತಿ ಕಡಿಮೆಯಾದಂತೆ ಕಾಣುತ್ತಿಲ್ಲ.








