BBMPಯಿಂದ ದಿನಸಿ ಸಾಮಗ್ರಿಗಳ ಆಹಾರ ಕಿಟ್ ವಿತರಣೆಗೆ ಚಾಲನೆ – Kannada News Now


State

BBMPಯಿಂದ ದಿನಸಿ ಸಾಮಗ್ರಿಗಳ ಆಹಾರ ಕಿಟ್ ವಿತರಣೆಗೆ ಚಾಲನೆ

 

ಬೆಂಗಳೂರು : ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕೊರೋನ ವೈರಸ್ ಸಾಂಕ್ರಮಿಕದಿಂದ ಸಂಕಷ್ಟದಲ್ಲಿ ಇರುವ ಹಕ್ಕಿ,ಪಿಕ್ಕಿ ಜನಾಂಗಕ್ಕೆ ,ಮಂಗಳಮುಖಿಯರಿಗೆ ಮತ್ತು ಆಹಾರ ಅಗತ್ಯ ಇರುವ ಬಡವರಿಗೆ ನೀಡಲಾಗುವುದು. ಅಧಿಕಾರಿ ಮತ್ತು ನೌಕರರು ನೀಡಿದ ಅಕ್ಕಿ ,ಅಡುಗೆ ಎಣ್ಣಿ ಗೋಧಿ ,ಸಕ್ಕರೆ ಇನ್ನಿತರೆ ಆಹಾರ ಸಾಮಗ್ರಿಗಳ ಹಂಚಲಾಗುತ್ತಿದೆ .

ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ಸಂಘದ ಅವರಣದಿಂದ ವಾಹನಗಳ ಮೂಲಕ ತಾವರೆಕೆರೆ ಬಳಿ ಯಲಚಗುಪ್ಪೆ ಹಾಗೂ ಕುಂಬಗೂಡು ಬಳಿಯಿರುವ ಭದ್ರಪುರ ಪ್ರದೇಶದಲ್ಲಿ ವಿತರಿಸಲಾಗುವುದು. ಪೂಜ್ಯ ಮಹಾಪೌರರಾದ ಗೌತಮ್ ಕುಮಾರ್ ರವರು ,ಮಾನ್ಯ ಆಯುಕ್ತರಾದ ಬಿ.ಹೆಚ್.ಆನಿಲ್ ಕುಮಾರ್ ರವರು ಅಧ್ಯಕ್ಷರಾದ ಅಮೃತ್ ರಾಜ್ ,ಕಾರ್ಯಾಧ್ಯಕ್ಷರಾದ ಹೆಚ್.ವಿ.ಅಶ್ವಥ್ ರವರು ಕನ್ನಡ ಧ್ವಜ ಹಾರಿಸುವ ಮೂಲಕ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು.

ಮಹಾಪೌರರಾದ ಗೌತಮ್ ಕುಮಾರ್ ರವರು ಮಾತನಾಡಿ ಕೊರೋನ ವೈರಸ್ ಸಾಂಕ್ರಮಿಕ ರೋಗ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಪ್ರತಿಯೊಬ್ಬ ನಾಗರಿಕರು ಖಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ .ಜನರ ಸಹಕಾರದಿಂದ ಮಾತ್ರ ಕೊರೋನ ವೈರಸ್ ಬರದಂತೆ ತಡಗಟ್ಟಬಹುದು .ಸೋಂಕಿತರು ಕಂಡುಬರುವ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲರನ್ನು ವೈದ್ಯಕೀಯ ತಪಾಸಣೆ ಮಾಡಲಾಗುವುದು ಎಂದು ಹೇಳಿದರು.

ಆಯುಕ್ತರಾದ ಬಿ.ಹೆಚ್.ಆನಿಲ್ ಕುಮಾರ್ ರವರು ಮಾತನಾಡಿ ನೌಕರರ ಸಂಘದ ವತಿಯಿಂದ 1200 ಕುಟುಂಬಗಳಿಗೆ ಆಹಾರ ಕಿಟ್ ನೀಡಲಾಗುತ್ತಿದೆ,ಒಂದು ಕುಟುಂಬಕ್ಕೆ ಬೇಕಾದ ಆಹಾರ ಕಿಟ್ ನೀಡಲಾಗುತ್ತಿದೆ .ಬಡವರು ,ಮಂಗಳ ಮುಖಿಯರು ,ಹಕ್ಕಿ,ಪಿಕ್ಕಿ ಜನಾಂಗಕ್ಕೆ ಸಮಾಜದ ಕಟ್ಟಕಡೆಯ ನೊಂದ ಕುಟುಂಬಗಳನ್ನು ಗುರುತಿಸಿ ಕೊಡಲಾಗುತ್ತಿದೆ.ಸೀಲ್ ಡೌನ್ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗದಂತೆ ನಿಭಾಯಿಸಲಾಗುತ್ತಿದೆ ಜನರ ಸಹಕಾರದಿಂದ ಮಾತ್ರ ಕೊರೋನ ವೈರಸ್ ಸಾಂಕ್ರಮಿಕ ರೋಗ ತಡೆಗಟ್ಟಬಹುದು ಎಂದು ಹೇಳಿದರು.

ಅಧ್ಯಕ್ಷರಾದ ಅಮೃತ್ ರಾಜ್ ರವರು ಮಾತನಾಡಿ ಸಮಾಜದಲ್ಲಿ ಕಟ್ಟಕಡೆಯ ,ಸಂಕಷ್ಟದಲ್ಲಿರುವ ವ್ಯಕ್ತಿಗೆ ಆಹಾರ ಸಾಮಗ್ರಿಗಳು ತಲುಪಬೇಕು .ಅವರು ಸಂಕಷ್ಟ ಪಡಬಾರದು .ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ಕೊಡಗು ಮತ್ತು ಉತ್ತರ ಕರ್ನಾಟಕ ಪ್ರವಾಹ ಸಂದರ್ಭದಲ್ಲಿ ಸಂಘದ ವತಿಯಿಂದ ಆಹಾರ ಕಿಟ್ ಒದಗಿಸಲಾಗಿತ್ತು .ಇದೀಗ ಕೊರೋನ ವೈರಸ್ ಸಾಂಕ್ರಮಿಕದಿಂದ ಸಂಕಷ್ಟದಲ್ಲಿರುವ ಜನರಿಗೆ ಬಿ.ಬಿ.ಎಂ.ಪಿ.ನೌಕರರ ಒಂದು ದಿನದ ಸಂಬಳ ಹಾಗೂ ಬಡವರಿಗೆ ,ಮಂಗಳ ಮುಖಿಯರಿಗೆ ಹಕ್ಕಿ,ಪಿಕ್ಕಿ ಜನಾಂಗದವರಿಗೆ ಆಹಾರ ಕಿಟ್ ನೀಡಲಾಗುತ್ತಿದೆ ಎಂದು ಹೇಳಿದರು.

ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಡಿ.ಗಂಗಾಧರ್, ಕೆ.ಮಂಜೇಗೌಡ, ಹೆಚ್.ನಂಜಪ್ಪ , ಕೆ.ಜಿ.ರವಿ, ಕೆ.ನರಸಿಂಹ ಸಾಯಿ ಶಂಕರ್, ಕೆ.ಸಂತೋಷಕುಮಾರ ನಾಯ್ಕ, ಮಂಜುನಾಥ್ ಇನ್ನೂ ಮೊದಲಾದವರು ಹಾಜರಿದ್ದರು.