ಶರೀರ ಆಯಾಸ ಜನನಂ ಕರ್ಮ ವ್ಯಾಯಾಮ ಸಂಜ್ಞಿತಮ್||
ಅಂದರೆ ಶರೀರಕ್ಕೆ ಯಾವ ಕಾರ್ಯವು ಆಯಾಸವನ್ನು ಉಂಟುಮಾಡುತ್ತದೆಯೋ ಅದಕ್ಕೆ ವ್ಯಾಯಾಮ ಎಂದು ಕರೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ದೇಹದಾರ್ಢ್ಯತೆಗೆ ಮತ್ತು ತಮ್ಮ ದೇಹದ ತೂಕ ನಿರ್ವಹಣೆಗಾಗಿ ಜಿಮ್, ಏರೋಬಿಕ್ಸ್ , ವಾಕಿಂಗ್ ಇತ್ಯಾದಿಗಳನ್ನು ಅಭ್ಯಾಸಿಸುತ್ತಿರುತ್ತಾರೆ, ತಪ್ಪಿಲ್ಲ. ಆದರೆ “ಅತಿಯಾದರೆ ಅಮೃತವೂ ವಿಷ” ಎಂಬಂತೆ ವ್ಯಾಯಾಮವನ್ನು ಕೂಡ ಅತಿಯಾಗಿ ಶರೀರಕ್ಕೆ ಶ್ರಮವಾಗುವಂತೆ ಮಾಡಿದರೆ ತೊಂದರೆಗಳು ಉಂಟಾಗಬಹುದು. ಶರೀರಕ್ಕೆ ಅಗತ್ಯವಿರುವಷ್ಟು ವ್ಯಾಯಾಮವನ್ನು ಮಾಡಿದರೆ ಅದರಿಂದ ದೇಹದಲ್ಲಿನ ರಕ್ತ ಪರಿಚಲನೆ, ಶರೀರಕ್ಕೆ ದೃಢತೆ, ಜೀರ್ಣಕ್ರಿಯೆಯನ್ನು ಸುವ್ಯವಸ್ಥೆಯಲ್ಲಿ ಇಡುತ್ತದೆ. ಹಾಗಾದರೆ ಎಷ್ಟು ವ್ಯಾಯಾಮ ಮಾಡಬೇಕು?
ಯಾರು ಮತ್ತು ಯಾವಾಗ ವ್ಯಾಯಾಮ ಮಾಡಬೇಕು?
ಆರೋಗ್ಯವಂತ, ದೇಹದಲ್ಲಿ ಹೆಚ್ಚು ಬಲ ಹೊಂದಿರುವವನು, ದಿನಾಲು ಜಿಡ್ಡಿನ ಪದಾರ್ಥಗಳನ್ನು ಸೇವಿಸುತ್ತಿರುವವರು, ಕಫ ಮತ್ತು ಹೆಚ್ಚು ಕೊಬ್ಬಿನಾಂಶ ಹೊಂದಿರುವವರು, ಮಧುಮೇಹದಿಂದ ಬಳಲುತ್ತಿರುವವರು ಮತ್ತು ಹೇಮಂತ ,ಶಿಶಿರ ಮತ್ತು ವಸಂತ ಋತುಗಳಲ್ಲಿ ವ್ಯಾಯಾಮವನ್ನು ಮಾಡಬೇಕು.
ಯಾರು ಮತ್ತು ಯಾವಾಗ ವ್ಯಾಯಾಮವನ್ನು ಮಾಡಬಾರದು
ವಾತ ಪ್ರಕೃತಿಯನ್ನು ಹೊಂದಿರುವವರು, ಯಾವುದೇ ಇನ್ನಿತರ ಚಟುವಟಿಕೆಗಳಿಂದ ಆಯಾಸಗೊಂಡವರು, ಆಹಾರ ಸೇವನೆ ಮಾಡಿದ ತಕ್ಷಣದಲ್ಲಿ ಮತ್ತು ಸೇವನೆ ಮಾಡಿದ ಆಹಾರ ಸಂಪೂರ್ಣ ಜೀರ್ಣವಾಗುವ ಮೊದಲು, ಬೇಸಿಗೆ ಮತ್ತು ಮಳೆಗಾಲದಲ್ಲಿ ವ್ಯಾಯಾಮ ಮಾಡಕೂಡದು.
ಎಷ್ಟು ವ್ಯಾಯಾಮ ಮಾಡಬೇಕು
ವಿಶ್ವ ಆರೋಗ್ಯ ಸಂಸ್ಥೆ (WHO) 18-64 ವರ್ಷ ವಯಸ್ಸಿನ ವಯಸ್ಕರು ವಾರಕ್ಕೆ ಕನಿಷ್ಠ 150 ನಿಮಿಷ( 2 ಗಂಟೆ 30 ನಿಮಿಷ)ಮಧ್ಯಮ ತೀವ್ರತೆಯ ಚಟುವಟಿಕೆಗಳಲ್ಲಿ ಅಥವಾ ವಾರಕ್ಕೆ 75 ನಿಮಿಷ (1ಗಂಟೆ 15 ನಿಮಿಷ) ತೀವ್ರವಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಿಫಾರಸು ಮಾಡುತ್ತದೆ. ಒಬ್ಬ ವ್ಯಕ್ತಿಯು ತನ್ನ ದೇಹಬಲದ ಅರ್ಧದಷ್ಟು (ಅರ್ಧ ಶಕ್ತಿ) ವ್ಯಾಯಾಮವನ್ನು ಮಾಡಬೇಕು. ಅಂದರೆ ಹಣೆಯಮೇಲೆ, ಮೂಗಿನಲ್ಲಿ, ಸಂಧಿಗಳಲ್ಲಿ (joints) ಕಂಕುಳದಲ್ಲಿ(axilla) ಬೆವರು ಬರುವವರೆಗೂ ಮಾತ್ರ.ದೇಹಕ್ಕೆ ಅತಿಯಾದ ಶ್ರಮ ವಾಗುವ ಮೊದಲೇ ವ್ಯಾಯಾಮವನ್ನು ನಿಲ್ಲಿಸಬೇಕು.
ಅತಿ ವ್ಯಾಯಾಮದಿಂದ ಏನೆಲ್ಲಾ ಆಗುತ್ತದೆ
ಶರೀರಕ್ಕೆ ಅವಶ್ಯಕತೆ ಇರುವುದಕ್ಕಿಂತ ಹೆಚ್ಚು ಮತ್ತು ದೇಹವನ್ನು ಹೆಚ್ಚು ಶ್ರಮ ಪಡಿಸುವುದು ಅತಿ ವ್ಯಾಯಾಮ . ಇದರಿಂದ ಅತಿಯಾದ ಬಾಯಾರಿಕೆ, ದೇಹ ಕ್ಷೀಣತೆ, ಉಸಿರಾಟ ತೊಂದರೆಗಳು, ರಕ್ತಹೀನತೆ, ವಾತದ ರೋಗಗಳು, ಮೂಲವ್ಯಾಧಿ, ವಾತದ ಹೃದ್ರೋಗ ಹೀಗೆ ನಾನಾ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ದೀರ್ಘಕಾಲ ತೀವ್ರವಾದ ಚಟುವಟಿಕೆಗಳನ್ನು ಮಾಡುವವರಿಗೆ ಹೃದಯ ಸಂಬಂಧಿ ತೊಂದರೆಗಳು ಉಂಟಾಗಬಹುದು ಎಂದು ತಿಳಿಸಿವೆ.
ದಿನಾಲೂ ವ್ಯಾಯಾಮವನ್ನು ರೂಡಿಸಿಕೊಂಡವರಿಗೆ ಕೆಲವು ಟಿಪ್ಸ್
ವ್ಯಕ್ತಿಯ ಬಲ, ವಯಸ್ಸು, ಪ್ರಕೃತಿ, ಕಾಲ ಮತ್ತು ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ವ್ಯಾಯಾಮ ಮಾಡುವುದು ಉತ್ತಮ. ದಿನನಿತ್ಯ ತೈಲ(ಎಣ್ಣೆ)ದಿಂದ ದೇಹವನ್ನು ಮಸಾಜ್ ಮಾಡಿಕೊಳ್ಳಬೇಕು. ವ್ಯಾಯಾಮ ಮಾಡಿದ ತಕ್ಷಣವೇ ಬೇರೊಂದು ಆಯಾಸದಾಯಕ ಚಟುವಟಿಕೆಯನ್ನು ಮಾಡಬಾರದು . ವ್ಯಾಯಾಮ ಮಾಡಿದ ನಂತರ ಮಧ್ಯವನ್ನು ಸೇವಿಸಬಾರದು. ಆದ್ದರಿಂದ ಶರೀರವನ್ನು ಶ್ರಮ ಪಡಿಸದೆ ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ ಮಾಡಿ ಆರೋಗ್ಯದಿಂದಿರಿ.
ಲೇಖಕರು :- ಡಾ. ಪ್ರವೀಣ್ ಕುಮಾರ್, ಆಯುರ್ವೇದ ವೈದ್ಯರು. ಆರೋಗ್ಯ ಮಾಹಿತಿಯ ವಾಟ್ಸಾಪ್ ಗ್ರೂಪ್ ಸೇರಲು ಮತ್ತು ವೈದ್ಯರ ಸಂದರ್ಶನಕ್ಕಾಗಿ 8660885793 ಗೆ ಮೇಸೆಜ್ ಮಾಡಿ.
BIGG NEWS : ರಾಜ್ಯದಲ್ಲಿ `ಮುಂಗಾರು ಪೂರ್ವ ಮಳೆ’ಗೆ 52 ಮಂದಿ ಸಾವು, ತಲಾ 5 ಲಕ್ಷ ಪರಿಹಾರ : ಸಿಎಂ ಸಿದ್ದರಾಮಯ್ಯ
‘ಮತದಾರರ ಪಟ್ಟಿ’ಗೆ ‘ಜನನ, ಮರಣದ ಮಾಹಿತಿ ಲಿಂಕ್’ಗೆ ಸರ್ಕಾರ ಯೋಜನೆ – ಗೃಹ ಸಚಿವ ಅಮಿತ್ ಶಾ