ಬೆಂಗಳೂರು: ನೇಹಾ ಹಿರೇಮಠ್ ಕೊಲೆಯ ಬಗ್ಗೆ ಬಿಜೆಪಿಯವರು ಇಷ್ಟೊಂದು ಸೊಲ್ಲೆತ್ತುತ್ತಿದ್ದಾರಲ್ಲ. ಅದೇ ಮಾರ್ಚ್.31ರಂದು ರುಕ್ಸಾನಾ ಎಂಬಾಕೆಯನ್ನು ಪ್ರೀತಿಸಲು ನಿರಾಕರಿಸಿದ್ದಕ್ಕೆ ಪ್ರದೀಪ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದನಲ್ಲ ಆಗ ಯಾಕೆ ಬಿಜೆಪಿಯವರು ಧ್ವನಿ ಎತ್ತಲಿಲ್ಲ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಇಂದು ಸರಣಿ ಎಕ್ಸ್ ಮಾಡಿರುವಂತ ಅವರು, ಹುಬ್ಬಳ್ಳಿಯಲ್ಲಿ ನಿನ್ನೆ ನಡೆದಿರುವ ನೇಹಾ ಹಿರೇಮಠ್‌ರ ಬರ್ಬರ ಕೊಲೆ ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ. ಅದೇ ರೀತಿ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿಯವರ ನಡೆಯೂ ಕೂಡ ಕ್ಷಮಾರ್ಹವಲ್ಲ. ನೇಹಾ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ BJPಯವರಿಗೆ ಒಂದು ಪ್ರಶ್ನೆಯಿದೆ. ಕಳೆದ ಮಾರ್ಚ್ 31 ರಂದು ಪ್ರದೀಪ್ ಎಂಬಾತ ತಾನು ಪ್ರೀತಿಸುತ್ತಿದ್ದ 22 ವರ್ಷದ ರುಕ್ಸಾನಾ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಂದು ತುಮಕೂರಿನಲ್ಲಿ ಸುಟ್ಟು ಹಾಕಿದ್ದ. ಜೊತೆಗೆ ಆಕೆಯ ಎಳೆಯ ಮಗುವನ್ನು ಬೆಂಗಳೂರಿನ ಕೈಗಾಡಿಯೊಂದರ ಮೇಲೆ ಅನಾಥವಾಗಿ‌ ಮಲಗಿಸಿ ಹೋಗಿದ್ದ. ಈ ಬಗ್ಗೆ BJPಯವರು ಇಲ್ಲಿಯವರೆಗೂ ಸೊಲ್ಲೆತ್ತಿಲ್ಲ. BJPಯವರ ಕಣ್ಣಿಗೆ ಈ ಪ್ರಕರಣ ಕ್ರೌರ್ಯದ ಪರಮಾವಧಿ ಎನ್ನಿಸಲಿಲ್ಲವೆ.? ಎಂದು ಕೇಳಿದ್ದಾರೆ.

ಫಯಾಜ್ ಎಂಬ ಕ್ರಿಮಿಯಿಂದ ಹತ್ಯೆಯಾದ ನೇಹಾ ಹಾಗೂ ಪ್ರದೀಪ್ ಎಂಬ ದುರುಳನಿಂದ ಕೊಲೆಯಾದ‌ ರುಕ್ಸಾನಾ ಎರಡೂ ಹೆಣ್ಣು ಜೀವಗಳೆ. ಹತ್ಯೆಯಾದ ನೇಹಾ ಪ್ರಕರಣವನ್ನು ರಾಜಕೀಯಗೊಳಿಸಿ ಬೆಂಕಿ ಹಚ್ಚಲು‌ ಪ್ರಯತ್ನಿಸುತ್ತಿರುವ BJPಯವರು ರುಕ್ಸಾನಾ ಪ್ರಕರಣದಲ್ಲೂ ಇದೇ ರೀತಿ ವರ್ತಿಸಿದ್ದರೆ ಭೇಷ್ ಎನ್ನಬಹುದಿತ್ತು. ಕೊಲೆಯಾದ ರುಕ್ಸಾನಾಳ ಬಗ್ಗೆ ಚುರುಕ್ ಎನ್ನದ BJPಯವರ ಕರುಳು‌ ನೇಹಾ ವಿಚಾರದಲ್ಲಿ ಮಾತ್ರ ಯಾಕೆ ಹೆಂಗರುಳಾಗಿದೆ.? ಕೊಲೆಯಾದವರ ಹಾಗೂ ಕೊಲೆ ಮಾಡಿದವರ ಧರ್ಮ ಇದಕ್ಕೆ ಕಾರಣವಲ್ಲವೇ.? ಎಂದಿದ್ದಾರೆ.

ನೇಹಾ ಪ್ರಕರಣದಲ್ಲಿ ಬಿಜೆಪಿಯವರದ್ದು‌ ಮೊಸಳೆ ಕಣ್ಣೀರೆ ಹೊರತು ಬೇರೆನೂ ಅಲ್ಲ. ನೇಹಾ‌ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ಕಾನೂನಿನ ಕುಣಿಕೆ ತೊಡಿಸಿದ್ದಾರೆ. ಇಂತಹ ಹೀನ ಕೃತ್ಯ ಎಸಗಿದ ಫಯಾಜ್ ಎಂಬ ದುರುಳನಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿರಬೇಕು. ಹೆಣದ ಮೇಲೆ ರಾಜಕೀಯ ಮಾಡುವುದಲ್ಲ. ಹೀಗೆ ರಾಜಕೀಯ ಮಾಡುವುದರಿಂದ ನೊಂದ ನೇಹಾ ಕುಟುಂಬ ಇನ್ನಷ್ಟು ದುಃಖ ಹಾಗೂ ಮಾನಸಿಕ ಆಘಾತಗೊಳಗಾಗಲಿದೆ ಎಂಬ ಕನಿಷ್ಠ ಪ್ರಜ್ಞೆ BJPಯವರಿಗಿರಬೇಕು. ತೀರಾ ವಾಕರಿಕೆ ಬರುವಂತೆ ವರ್ತಿಸಬಾರದು ಎಂದು ಕಿಡಿಕಾರಿದ್ದಾರೆ.

BREAKING : ಒಡಿಶಾದ ಮಹಾನದಿಯಲ್ಲಿ ದೋಣಿ ಪಲ್ಟಿ : ಹಲವರು ನಾಪತ್ತೆ

‘ನಕ್ಷತ್ರಗಳಿಗೆ ರಾಕೆಟ್ ಕಳುಹಿಸಿ’ : ಇರಾನ್ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಂತ್ರ ‘ಎಲೋನ್ ಮಸ್ಕ್’ ರಹಸ್ಯ ಸಂದೇಶ

Share.
Exit mobile version