ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಹಾಗೂ ಮುಂಗಾರು ಕೃಷಿ ಚಟುವಟಿಕೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ,ಇನ್ನು ಮುಂದೆ ಕಲುಷಿತ ನೀರಿನಿಂದ ತೊಂದರೆಯಾದರೆ ಡಿಸಿಗಳೇ ನೇರ ಹೊಣೆ ಎಂದು ತಿಳಿಸಿದರು.

ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಇನ್ನೂ ಅನೇಕ ವಿಷಯಗಳ ಕುರಿತು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳು ಜೊತೆಗೆ ಆಚರಿಸಿದರು ಅದರ ಕೆಲವು ಮುಖ್ಯಾಂಶಗಳು ಹೀಗಿವೆ

ಸಭೆಯ ಮುಖ್ಯಾಂಶಗಳು

1. ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಂದರೆ ಮಾರ್ಚ್‌ ಒಂದರಿಂದ ಈ ವರೆಗೆ 87 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಈ ವರ್ಷ 123 ಮಿ.ಮೀ. ಮಳೆ ಆಗಿದೆ. ಅದರಲ್ಲಿ 8 ಜಿಲ್ಲೆಗಳಲ್ಲಿ ಅತ್ಯಧಿಕ, 8 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದೆ.

2. ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹಣಾ ಸಾಮರ್ಥ್ಯದ ಶೇ. 20 ರಷ್ಟು ನೀರು ಸಂಗ್ರಹವಾಗಿದೆ. ರಾಜ್ಯದಾದ್ಯಂತ ಮಳೆ ಆಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಇದು ಹೆಚ್ಚಳವಾಗುವ ನಿರೀಕ್ಷೆ ಇದೆ.

3. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ.

4. ಈ ಹಿನ್ನೆಲೆಯಲ್ಲಿ ಬರ ಪರಿಹಾರ ಕ್ರಮಗಳು ಮತ್ತು ಮುಂಗಾರು ಸಿದ್ಧತೆ ಮತ್ತು ಸಂಬಂಧಿಸಿದ ವಿಷಯಗಳ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಮಾಹಿತಿ ಪಡೆಯಲಾಯಿತು. ಹಾಗೂ ಕೆಲವು ಸೂಚನೆಗಳನ್ನು ನೀಡಲಾಯಿತು.

5. ಚುನಾವಣಾ ನೀತಿ ಸಂಹಿತೆ ಸಮಯ ಈ ಬಾರಿ ದೀರ್ಘವಾಗಿತ್ತು. ಇದರಿಂದ ಆಡಳಿತ ಯಂತ್ರ ಸ್ಥಗಿತವಾದಂತೆ ಆಗಿತ್ತು.ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲು ಅಧಿಕಾರಿಗಳಿಂದ ಸಾಧ್ಯ ಆಗಿರಲಿಲ್ಲ.ನಮ್ಮ ಮನವಿ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದೆ.

6. ಈಗ ಮಳೆ ವಾಡಿಕೆಗಿಂತ ಅಧಿಕವಾಗಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ.

7. ನೀತಿ ಸಂಹಿತೆ ಜೂನ್ ಆರರ ವರೆಗೆ ಇದೆ. ಆದರೂ ತುರ್ತು ಕೆಲಸಗಳಿಗೆ ಗಮನ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು.

9.ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದಂತೆ ಜೂನ್ ಕೊನೆಯ ವೇಳೆಗೆ ಆದೇಶ ಹೊರ ಬರಬೇಕು. ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕೂಡ ಶೀಘ್ರವಾಗಿ ಆಗಬೇಕು.

10. ಚುನಾವಣೆ ಮುಗಿದಿದೆ. ನೀತಿ ಸಂಹಿತೆ ಸಡಿಲವಾಗಿದೆ. ಹೀಗಾಗಿ ಅಧಿಕಾರಿಗಳು ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಬೇಕು.

11. ಮೈಸೂರಿನ ಎರಡು ಗ್ರಾಮಗಳಲ್ಲಿ ಕಾಲರಾ ಕಂಡು ಬಂದಿದೆ. ಇದಕ್ಕೆ ಕಾರಣ ಕಲುಷಿತ ನೀರು. ನೀರು ಕಲುಷಿತಗೊಳ್ಳಲು ಇಂಜಿನಿಯರುಗಳು ಕಾರಣ. ಕುಡಿಯಲು ನೀರು ಯೋಗ್ಯವೇ ಅಲ್ಲವೇ ಎಂಬುದನ್ನು ಪತ್ತೆ ಮಾಡದಿರುವುದು ದೊಡ್ಡ ಅಪರಾಧ.

12. ಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ಆಗಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳೇ ಇದಕ್ಕೆ ಹೊಣೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲಾಗುವುದು.

13. ಇನ್ನು ಮುಂದೆ ಕಲುಷಿತ ನೀರಿನಿಂದ ತೊಂದರೆ ಆದರೆ ಡಿಸಿಗಳೇ ನೇರ ಹೊಣೆ. ಕಾಲರ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು.

14. ಪ್ರಸ್ತುತ ಮುಂಗಾರು ಹಂಗಾಮಿಗೆ 82.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 2024-25 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಅಂದರೆ ಮೇ 17 ರ ವರೆಗೆ 2.95 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಗೆ 68,600 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ. 23 ರಷ್ಟು ಸಾಧನೆಯಾಗಿದೆ.

15.2024 ರ ಮುಂಗಾರು ಹಂಗಾಮಿಗೆ ಸಹಾಯಧನದಡಿ 5,52,350 ಕ್ವಿಂಟಾಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 9,01,397 ಕ್ವಿಂಟಾಲ್‌ ಬಿತ್ತನೆ ಬೀಜ ಲಭ್ಯವಿದೆ. ಮೇ 22 ರ ವರೆಗೆ 5492.44 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 14,608.49 ಕ್ವಿಂಟಾಲ್‌ ಬಿತ್ತನೆ ಬೀಜರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಲಭ್ಯವಿದೆ. ಬೇಡಿಕೆಗೆ ತಕ್ಕಂತೆ ಸಂಬಂಧಿಸಿದ ಸಂಸ್ಥೆಗಳಿಂದ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದೆ.

16. ಏಪ್ರಿಲ್‌ 1, 2024 ರಿಂದ 3.22 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಮಾರಾಟವಾಗಿದ್ದು, ಒಟ್ಟು 14,86,067 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಲಭ್ಯವಿದೆ.

17. ಹಾವೇರಿ ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದ್ದರಿಂದ ಏಕಾಏಕಿ ರೈತರು ರಸಗೊಬ್ಬರ ಪಡೆಯಲು ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಅಧಿಕಾರಿಗಳು ವಿವರಿಸಿದರು.

18. ರಸಗೊಬ್ಬರ ಲಭ್ಯತೆ ಬಗ್ಗೆ ನಿರಂತರವಾಗಿ ಮಾಹಿತಿ ಒದಗಿಸಬೇಕು. ಡಿಸಿ , ಸಿಇಓಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

19. ಸಕಾಲದಲ್ಲಿ ರೈತರಿಗೆ ಸಾಲ ಸಿಗುವುದನ್ನು ಖಾತರಿಪಡಿಸಬೇಕು. ಜಿಲ್ಲಾ ಬ್ಯಾಂಕರುಗಳೊಂದಿಗೆ ಸಮನ್ವಯ ವಹಿಸಿ, ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

20. ಬೆಳೆ ವಿಮೆ ಕ್ಲೇಮ್‌ ಮಾಡುವ ಸಂದರ್ಭದಲ್ಲಿ ಕಂಪೆನಿಗಳ ಸ್ಯಾಂಪಲ್‌ ಪರಿಶೀಲನೆಯ ಕುರಿತು ರೈತರು ಹಲವು ಸಂದೇಹಗಳನ್ನು ಹೊಂದಿದ್ದು, ಈ ಕುರಿತು ಮುಂಚಿತವಾಗಿಯೇ ವಿಮಾ ಕಂಪೆನಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

21. ಎಲ್ಲ ನಗರ ಹಾಗೂ ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಖಾತರಿ ಪಡಿಸಲು ಸೂಚಿಸಲಾಯಿತು. ಕಲುಷಿತ ನೀರು ಪೂರೈಕೆ ಪ್ರಕರಣಗಳನ್ನು ತಡೆಯಬೇಕು.

22. ಮುಂದಿನ ಒಂದು ವಾರದೊಳಗೆ ಇನ್‌ಪುಟ್‌ ಸಬ್ಸಿಡಿ ಶೇ. 100 ರಷ್ಟು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.

23. ಜೀವನೋಪಾಯ ನಷ್ಟ ಪರಿಹಾರಕ್ಕೆ 2800 ರೂ. ನಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ 460 ಕೋಟಿ ರೂ. ಗಳನ್ನು 20 ಲಕ್ಷ ರೈತರಿಗೆ ಒದಗಿಸಲಾಗುತ್ತಿದೆ.

24. ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 826 ಕೋಟಿ ರೂ. ಲಭ್ಯವಿದೆ.

25. ರಾಜ್ಯದಲ್ಲಿ 2023-24 ರಲ್ಲಿ 842 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 90 ಮನವಿಗಳು ತಿರಸ್ಕೃತವಾಗಿದೆ. 132 ಡಿಬಿಟಿ ಗೆ ಬಾಕಿಯಾಗಿದೆ. 62 ಉಪವಿಭಾಗಾಧಿಕಾರಿಗಳ ಹಂತದಲ್ಲಿ ಬಾಕಿ ಇದೆ. ಉಳಿದ ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದರಲ್ಲಿ ಬಹಳ ಪ್ರಕರಣಗಳು Forensic ವರದಿಯ ನಿರೀಕ್ಷೆಯಲ್ಲಿರುವುದರಿಂದ ವಿಳಂಬವಾಗಿದೆ. ಈ ಪ್ರಕರಣಗಳಲ್ಲಿಯೂ ತ್ವರಿತವಾಗಿ ಪರಿಹಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

26. ರೈತರ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕೆಂದು ಸೂಚಿಸಲಾಯಿತು. ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಎಂದು ಅಧ್ಯಯನ ನಡೆಸಲು ಸೂಚಿಸಲಾಯಿತು.

27. ಬರ ಪರಿಹಾರ ಕಾಮಗಾರಿಗಳು ಮತ್ತು ಇತರ ಕಾರ್ಯಗಳ ಬಿಲ್ಲುಗಳ ಪಾವತಿಯನ್ನು ಪ್ರತಿ 15 ದಿನಕ್ಕೊಮ್ಮೆ ಮಾಡುವಂತೆ ಸೂಚಿಸಲಾಯಿತು.

28. ಈ ಬಾರಿ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಕೃಷ್ಣಾ ನದಿ, ಭೀಮಾನದಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಮೊದಲಾದ ಕಡೆ ಸಾವು ನೋವಿನ ಪ್ರಕರಣಗಳು ಹೆಚ್ಚಾಗಿವೆ. ಸಾವು ನೋವಿನ ಪ್ರಕರಣಗಳು ಸಂಭವಿಸುವ ಸಾಧ್ಯತೆ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ, ಸಾವಿನ ಪ್ರಕರಣಗಳನ್ನು ತಡೆಗಟ್ಟುವಂತೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಹೆಚ್.ಕೆ. ಪಾಟೀಲ್‌, ಕೆ.ಹೆಚ್.‌ ಮುನಿಯಪ್ಪ, ಚೆಲುವರಾಯಸ್ವಾಮಿ, ಬೈರತಿ ಸುರೇಶ್‌, ಶಿವರಾಜ್‌ ತಂಗಡಗಿ, ಪ್ರಿಯಾಂಕ್‌ ಖರ್ಗೆ, ರಹೀಂ ಖಾನ್‌, ಶಿವಾನಂದ ಪಾಟೀಲ, ಎಸ್.‌ ಎಸ್.‌ ಮಲ್ಲಿಕಾರ್ಜುನ್‌, ಸಂತೋಷ್‌ ಲಾಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Share.
Exit mobile version