ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದ್ದು, ಈ ತಾಲೂಕುಗಳಿಗೆ ಸಂಬಂಧಪಟ್ಟಂತೆ ಕೇಂದ್ರದ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮಳೆ ಬಾರದ ಕಾರಣ ರಾಜ್ಯವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಿತ್ತು. ಈ ಸಂಬಂಧ ರಾಜ್ಯದ ಸುಮಾರು 195 ತಾಲೂಕುಗಳನ್ನು ಈಗಾಗಲೇ ನಾವು ಬರಪೀಡಿತ ತಾಲೂಕುಗಳು ಎಂದು ಘೋಷಿಸಿದ್ದೇವೆ. ಈ ಬರಪೀಡಿತ ತಾಲೂಕುಗಳಿಗೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು ಶೀಘ್ರದಲ್ಲಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯದಲ್ಲಿ ಅಂದಾಜಿನ ಪ್ರಕಾರ 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದರೆ, 2 ಲಕ್ಷ ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಕೇಂದ್ರಕ್ಕೆ ಮನವಿ ಸಲಸಲು ವರದಿಯನ್ನು ಸಿದ್ದಪಡಿಸುವ ಕೆಲಸ ಈಗಾಗಲೇ ಶೇ.70 ರಷ್ಟು ಮುಗಿದಿದೆ. ಮೇವಿಗೂ, ಕುಡಿಯುವ ನೀರಿಗೂ ಪ್ರತ್ಯೇಕ ಪರಿಹಾರದ ಅವಕಾಶವಿದ್ದು, ಮುಂದಿನ ಮೂರು ದಿನದಲ್ಲಿ ಈ ಎಲ್ಲವನ್ನೂ ಸೇರಿಸಿ ಸಂಪೂರ್ಣ ವರದಿಯನ್ನು ತಯಾರಿಸಲಾಗುವುದು ಎಂದು ಹೇಳಿದರು.
ಎನ್ ಡಿ ಆರ್ ಎಫ್ ನಿಯಮಗಳ ಅನ್ವಯ ಒಟ್ಟಾರೆ 5 ರಿಂದ 6 ಸಾವಿರ ಕೋಟಿ ಪರಿಹಾರ ಪಡೆಯಲು ಅವಕಾಶ ಇದೆ. ಕೇಂದ್ರಕ್ಕೆ ಮನವಿ ಸಲ್ಲಿಸಿದ ಕೂಡಲೇ ಕೇಂದ್ರದ ಅಧಿಕಾರಿಗಳೂ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮೆಮೊರಾಂಡಮ್ ಅನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಈ ವಾರಾಂತ್ಯದೊಳಗೆ ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.