ಬೀದರ್ : ಯಾವುದೇ ರಾಗ, ದ್ವೇಷವಿಲ್ಲದೆ ಕರ್ತವ್ಯ ನಿರ್ವಹಿಸುವುದಾಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಶಾಸಕನಾಗಿ, ಈಗ ಒಂದು ಕೋಮಿನ ಬಗ್ಗೆ ಹೀನಾಯವಾಗಿ ಮಾತನಾಡುವ, ದ್ವೇಷ ಬಿತ್ತುವ ಕೋಮುವಾದಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶಾಸಕನಾಗಿರುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ, ಅವರ ಹೆಣ್ಣುಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂದು ಊಹಾತ್ಮಕ ಹೇಳಿಕೆ ನೀಡಿ, ಮತದಾರರಲ್ಲಿ ಭೀತಿ ಹುಟ್ಟಿಸುತ್ತಿರುವ ಮತ್ತು ದ್ವೇಷ ಬಿತ್ತುತ್ತಿರುವ ಯತ್ನಾಳ್ ವಿರುದ್ಧ ಚುನಾವಣಾ ಆಯೋಗ ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಖಂಡ್ರೆ ಕುಟುಂಬ ಲಿಂಗಾಯತರಿಗೆ ಕೊಟ್ಟಿರುವ ಕೊಡುಗೆ ಏನು ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ, ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ ಸಂಘಟನೆ ಮಾಡಿದ್ದೇ ಶತಾಯುಷಿ ಭೀಮಣ್ಣ ಖಂಡ್ರೆ ಅವರು, ಬೆಂಗಳೂರಿನಲ್ಲಿ ಭವ್ಯ ವೀರಶೈವ ಲಿಂಗಾಯತ ಭವನ ನಿರ್ಮಿಸಿದ್ದೂ ಭೀಮಣ್ಣ ಖಂಡ್ರೆ ಅವರು, ಇಂದು ಜಿಲ್ಲೆ, ತಾಲೂಕು ಮಟ್ಟದಲ್ಲಿ ವೀರಶೈವ ಭವನ ನಿರ್ಮಾಣವಾಗಿದ್ದರೆ ಅದಕ್ಕೆ ಸಭಾ ಕಾರಣ, ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿರುವುದು ಮಹಾಸಭಾ. ಇದಾವ ಮಾಹಿತಿಯೂ ಇಲ್ಲದ ಇತ್ತ ಬಸವವಾದಿಯೂ ಅಲ್ಲದ, ಅತ್ತ ಹಿಂದೂವೂ ಅಲ್ಲದ ಬಸನಗೌಡ ಪಾಟೀಲ್ ಯತ್ನಾಳ್ ರಾತ್ರಿ ಸೆರೆ ಕುಡಿದು, ಮಾಂಸ ತಿಂದು, ಬೆಳಗ್ಗೆ ವಿಭೂತಿ ಹಚ್ಚಿಕೊಂಡು ಬರುತ್ತಾರೆ. ಇವರಿಗೆ ವೀರಶೈವ ಲಿಂಗಾಯತ ಮಹಾಸಭಾ ಬಗ್ಗೆಯಾಗಲೀ, ತಮ್ಮ ತಂದೆ ಪೂಜ್ಯ ಭೀಮಣ್ಣ ಖಂಡ್ರೆ ಅವರ ಬಗ್ಗೆಯಾಗಲೀ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ.

3 ಬಿ ಮೀಸಲಾತಿಗಾಗಿ ಹೋರಾಟ ಮಾಡಿದವರು ಯಾರು? ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತು ಶರಣರಿಗೆ ಅವಮಾನ ಮಾಡುವಂತಹ ಕೃತಿಗಳನ್ನು ಮುಟ್ಟುಗೋಲು ಹಾಕಿಸಲು ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದವರು ಯಾರು? ಕೇಂದ್ರ ಓಬಿಸಿ ಪಟ್ಟಿಯಲ್ಲಿ ಲಿಂಗಾಯತ ವೀರಶೈವರನ್ನು ಸೇರಿಸಬೇಕು ಎಂದು ಹೋರಾಟ ಮಾಡುತ್ತಿರುವವರು ಯಾರು? ಯಾವುದೇ ಮಾಹಿತಿ ಇಲ್ಲದೆ, ಭಗವಂತ ಖೂಬಾ ಹೇಳಿ ಕೊಟ್ಟ ಮಾತನ್ನು ಭಾಲ್ಕಿಗೆ ಬಂದು ಗಿಳಿಪಾಠದಂತೆ ಒಪ್ಪಿಸಿ ಹೋಗಿರುವ ಯತ್ನಾಳ್ ಮೊದಲು ವಿಧಾನಸಭೆಯ ಕಲಾಪದ ಕಡತ ತೆಗೆಸಿ ಓದಿ ನಂತರ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ರಜಾಕಾರರ ವಿರುದ್ಧ ಹೋರಾಟ ನಡೆಸಿದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸೆರೆ ವಾಸ ಅನುಭವಸಿದ ತಮ್ಮ ತಂದೆ ಸಚಿವರಾಗಿ, ಶಾಸಕರಾಗಿ, ವೀರಶೈವ ಲಿಂಗಾಯತ ಮುಖಂಡರಾಗಿ ಈ ನಾಡಿಗೆ ನೀಡಿರುವ ಕೊಡುಗೆ ಅನುಪಮವಾದ್ದು, ಇತಿಹಾಸವರಿಯದ ಯತ್ನಾಳ್ ಭೀಮಣ್ಣ ಖಂಡ್ರೆ ಅವರ ಬಗ್ಗೆ ಮಾತನಾಡುವುದಿರಲಿ, ಅವರ ಉಂಗುಷ್ಟದ ಧೂಳಿಗೂ ಸಮನಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಬಗ್ಗೆ ಮಾತನಾಡಿದ್ದಾರೆ, ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರೊಂದಿಗೆ ಸೇರಿ ಈ ಸಂಸ್ಥೆ ಕಟ್ಟಲು ನಮ್ಮ ತಂದೆ ಎಷ್ಟು ಬೆವರು ಸುರಿಸಿದ್ದಾರೆ, ಎಷ್ಟು ಹಣ ಹೂಡಿಕೆ ಮಾಡಿದ್ದಾರೆ ಎಂಬುದು ಇಡೀ ಬೀದರ್ ಜನತೆಗೆ ತಿಳಿದಿದೆ. ಈ ಬಗ್ಗೆ ಗೋಮುಖವ್ಯಾಘ್ರ ಯತ್ನಾಳ್ ಗಾಗಲೀ, ಸದಾ ಸುಳ್ಳು ಆರೋಪ ಮಾಡುತ್ತಲೇ ಕಾಲ ತಳ್ಳುವ ಭಗವಂತ ಖೂಬಾಗಾಗಲೀ ವಿವರಣೆ ನೀಡುವ ಅಗತ್ಯವಿಲ್ಲ ತಮಗೆ ಇಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿಯ ಬಗ್ಗೆ, ತಮ್ಮ ಪಕ್ಷದ ನಾಯಕರ ಬಗ್ಗೆಯೂ ಆರೋಪ ಮಾಡುವ ಯತ್ನಾಳ್ ದಾಖಲೆ ಕೇಳಿದರೆ ಪಲಾಯನ ಹೋಗುತ್ತಾರೆ. ಹೀಗೆ ಆಧಾರ ಇಲ್ಲದೆ, ತಲೆ ಬುಡ ಇಲ್ಲದೆ ಸುಳ್ಳು ಆರೋಪ ಮಾಡುವ ಯತ್ನಾಳ್ ಗೆ ಏಕೆ ಉತ್ತರ ಕೊಡಬೇಕು ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.

ಅನುಮತಿ ಇಲ್ಲದೆ ಎಥನಾಲ್ ಕಾರ್ಖಾನೆ ಸ್ಥಾಪಿಸಿ, ಕೈಗಾರಿಕಾ ತ್ಯಾಜ್ಯವನ್ನು ನದಿಗೆ ಬಿಟ್ಟು ಕುಡಿಯುವ ನೀರನ್ನೇ ವಿಷ ಮಾಡಿ, ಜನರಿಗೆ ವಿಷ ಉಣಿಸುತ್ತಿರುವ ಯತ್ನಾಳ್ ಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯೇ ಕೋಟ್ಯಂತರ ರೂಪಾಯಿ ದಂಡ ವಿಧಿಸಿದೆ. ಇವರು ತಮ್ಮ ಎಲೆಯಲ್ಲಿ ಇಲಿ ಸತ್ತು ಬಿದ್ದಿರುವಾಗ, ಬೇರೆಯವರ ಎಲೆಯಲ್ಲಿ ಬಿದ್ದಿರುವ ಇರುವೆಯ ಬಗ್ಗೆ ಮಾತನಾಡಲು ಬರುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

ಈ ಬಾರಿ ಜನರು ಸಾರಾ ಸಗಟಾಗಿ ಬಿಜೆಪಿಯನ್ನು ತಿರಸ್ಕರಿಸುತ್ತಾರೆ. ಬದಲಾವಣೆ ತರುತ್ತಾರೆ. ಈ ಮೂಲಕ ಕೋಮುವಾದಿಗಳ ಬಾಯಿಗೆ ಬೀಗ ಹಾಕುತ್ತಾರೆ ಎಂದು ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಚುನಾವಣೆಗೂ ಮುನ್ನವೇಕೆ?” : ಕೇಜ್ರಿವಾಲ್ ಬಂಧನದ ಕುರಿತು ‘ED’ಗೆ ಸುಪ್ರೀಂಕೋರ್ಟ್ ಪ್ರಶ್ನೆ

Stock Market : ಸೆನ್ಸೆಕ್ಸ್ 765 , ನಿಫ್ಟಿ 215 ಅಂಕ ಕುಸಿತ, ಷೇರು ಮಾರುಕಟ್ಟೆ ದಿನದ ವಹಿವಾಟು ಅಂತ್ಯ!

Share.
Exit mobile version