ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಧ್ಯರಾತ್ರಿ ತುರ್ತು ಸಭೆಯಲ್ಲಿ ಮಾತಾಡಿ ಅವರು, ಇದು ಅತ್ಯಂತ ಅಮಾಯಕ ಯುವಕನ ಕೊಲೆ ಆಗಿದೆ, ಈ‌ ಘಟನೆ ನೋಡಿ ಮನಸ್ಸಿಗೆ ತುಂಬಾ ನೋವು ಉಂಟಾಗಿದೆ. ಇದರಿಂದ ನನ್ನ ಮನಸ್ಸಿಗೆ ಶಾಂತಿ ಅನ್ನೋದೆ ಇರಲಿಲ್ಲ. ಅವರ ಕುಟುಂಬಸ್ಥರ ನೋವು ನೋಡಿ ನನಗೆ ಬಹಳ ಸಂಕಷ್ಟವಾಯಿತು.ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ ರದ್ದು ಗೊಳಿಸಲಾಗಿದೆ. ಬದಲಾಗಿ ಕೇವಲ ಪತ್ರಿಕಾಗೋಷ್ಠಿ ಮಾತ್ರ ಇರುತ್ತದೆ ಎಂದಿದ್ದಾರೆ.

ಇನ್ನು ಉಗ್ರ ನಿಗ್ರಹಕ್ಕಾಗಿ ವಿಶೇಷ ಸ್ಕ್ವಾಡ್‌ ರಚಿಸಲಾಗುತ್ತದೆ. ಅದರ ಸ್ವರೂಪವನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುತ್ತದೆ ಎಂದರು.ಹಿಂಸೆಯ ಮೂಲಕ ದ್ವೇಷ ಬಿತ್ತುವ ಹುನ್ನಾರ ಹಿನ್ನೆಲೆಯಲ್ಲಿ ಈ ಕೃತ್ಯವಾಗಿದೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ನಡೆದಿದೆ. ಇಂತಹ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಜಾರಿಯಲ್ಲಿರುವ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಕಾನೂನು ಕ್ರಮ ಜರಗಿಸಲು ಚಿಂತನೆ ನಡೆಯುತ್ತಿದೆ ಎಂದರು.

 

Share.
Exit mobile version