ಕೆಎನ್ ಎನ್ ಸಿನಿಮಾ ಡೆಸ್ಕ್ : ಕಳೆದ ವರ್ಷದ ಕಡೇಯ ಭಾಗದಲ್ಲಿ ಬಿಡುಗಡೆಯಾಗಿದ್ದ `ಗುರು ಶಿಷ್ಯರು’ ಚಿತ್ರದ ಮೂಲಕ ಶರಣ್ ಯಶಸ್ಸಿನ ಪಯಣ ಮತ್ತಷ್ಟು ವೇಗ ಪಡೆದುಕೊಂಡಿದೆ. ಅದರ ಬೆನ್ನಲ್ಲಿಯೇ ಬಿಡುಗಡೆಯತ್ತ ದಾಪುಗಾಲಿಡುತ್ತಾ, ಟಾಕ್ ಕ್ರಿಯೇಟ್ ಮಾಡಿದ್ದ ಚಿತ್ರ ಛೂ ಮಂತರ್. ನವನೀತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಫಸ್ಟ್ ಲುಕ್ ಮೂಲಕ ಭಾರೀ ಸದ್ದು ಮಾಡಿತ್ತು. ಇದೀಗ ನಾಯಕ ಶರಣ್ ಅವರ ಬರ್ತ್‍ಡೇ ಗಿಫ್ಟ್ ಎಂಬಂತೆ ಸ್ಪೆಷಲ್ ಟೀಸರ್ ಬಿಡುಗಡೆಗೆ ಚಿತ್ರತಂಡ ತಯಾರಾಗಿದೆ.
ಇದೇ ತಿಂಗಳ ಆರನೇ ತಾರೀಕಿನಂದು ಶರಣ್ ನವ ವಂಸಂತಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅಂದೇ ಸಂಜೆ 5 ಗಂಟೆ ಒಂದು ನಿಮಿಷಕ್ಕೆ ಸರಿಯಾಗಿ ಛೂ ಮಂತರ್ ಟೀಸರ್ ಲೋಕಾರ್ಪಣೆಗೊಳ್ಳಲಿದೆ. ಈ ಘೋಷಣೆಯೊಂದಿಗೆ ನಿಜಕ್ಕೂ ಸಿನಿಮಾ ಪ್ರೇಮಿಗಳು ಒಂದಷ್ಟು ನಿರೀಕ್ಷೆಗಳನ್ನು ಒಟ್ಟುಗೂಡಿಸಿಕೊಂಡು ಕಾಯುವಂತಾಗಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಫಸ್ಟ್ ಲುಕ್ ಮೂಲಕವೇ ಛೂ ಮಂತರ್ ಸುತ್ತ ಒಂದಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು. ಅದರೊಂದಿಗೆ, ಶರಣ್ ಈ ಸಿನಿಮಾದಲ್ಲಿ ಮತ್ತೊಂದು ನವೀನ ಅವತಾರದೊಂದಿಗೆ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆಂಬುದೂ ಗ್ಯಾರೆಂಟಿಯಾಗಿತ್ತು.
ಇದೀಗ ಬಿಡುಗಡೆಗೊಳ್ಳಲಿರೋ ಟೀಸರ್ ಛೂ ಮಂತರ್‍ನ ಮತ್ತೊಂದಷ್ಟು ಮಜಲುಗಳನ್ನು ಪ್ರೇಕ್ಷಕರೆದುರು ತೆರೆದಿಡುವ ನಿರೀಕ್ಷೆಗಳಿದ್ದಾವೆ. ಹೀಗೆ ಬಿಡುಗಡೆಗೆ ತಯಾರಾಗುತ್ತಿರುವ ಈ ಹೊತ್ತಿನಲ್ಲಿ ಛೂ ಮಂತರ್ ಈ ಪರಿಯಾಗಿ ಗಮನ ಸೆಳೆದಿರೋದರ ಹಿಂದೆ ನಾನಾ ಕಾರಣಗಳಿದ್ದಾವೆ. ಇದು ಪ್ರತಿಭಾವಂತ ಯುವ ನಿರ್ದೇಶಕ ನವನೀತ್ ನಿರ್ದೇಶನದ ಚಿತ್ರವೆಂಬುದು ಅದರಲ್ಲೊಂದು. ಈ ಹಿಂದೆ ಕರ್ವ ಎಂಬ ಹೊಸತನದ ಸಿನಿಮಾ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದವರು ನವನೀತ್. ಆ ಚಿತ್ರ ಗೆದ್ದ ನಂತರದಲ್ಲಿ ಅವರು ಕರ್ವ2 ನಿರ್ದೇಶನ ಮಾಡಲಿದ್ದಾರೆಂಬಂತೆ ಸುದ್ದಿಯಾಗಿತ್ತು. ಆದರೆ ನವನೀತ್ ಸದ್ದೇ ಇಲ್ಲದೆ ಛೂ ಮಂತರ್ ಶುರುವಿಟ್ಟುಕೊಂಡಿದ್ದರು.
ಇದು ನಟ ಶರಣ್ ವೃತ್ತಿ ಬದುಕಿನ ಮಹತ್ವದ ಮೈಲಿಗಲ್ಲಾಗುವ ಲಕ್ಷಣಗಳು ಈಗಾಗಲೇ ಮೂಡಿಕೊಂಡಿವೆ. ಒಂದು ಕಾಲದಲ್ಲಿ ಹಾಸ್ಯ ನಟನಾಗಿದ್ದ, ತಮ್ಮದೇ ಶೈಲಿ, ಮ್ಯಾನರಿಸಮ್ಮುಗಳ ಮೂಲಕ ಗಮನ ಸೆಳೆದಿದ್ದವು, ಗೆಲುವು ಕಂಡಿದ್ದವರು ಶರಣ್. ಬಹು ಬೇಡಿಕೆ ಹೊಂದಿರುವಾಗಲೇ ನಾಯಕ ನಟನಾಗಿದ್ದ ಅವರು, ಆ ಹಾದಿಯಲ್ಲಿ ಅವುಡುಗಚ್ಚಿ ಸಾಗಿ ಬಂದಿದ್ದಾರೆ. ಅದರ ಫಲವಾಗಿಯೇ ಒಂದಷ್ಟು ಗೆಲುವುಗಳು ಅವರನ್ನು ಅಪ್ಪಿಕೊಂಡಿವೆ. ಆ ಸಾಲಿಗೆ ಛೂ ಮಂತರ್ ಕೂಡಾ ಸೇರ್ಪಡೆಯಾಗುವ ಸಂಭವವಿದೆ. ಈ ಸಿನಿಮಾದಲ್ಲಿ ಹಾಸ್ಯದೊಂದಿಗೆ ಹಾರರ್ ಅಂಶಗಳೂ ಇದ್ದಾವೆ. ಇದರಲ್ಲಿ ಶರಣ್ ಈ ಹಿಂದೆಂದೂ ಮಾಡಿರದಂಥಾ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಅದೆಲ್ಲವೂ ಬಿಡುಗಡೆಯಾಗಲಿರೋ ಟೀಸರ್‍ನಲ್ಲಿ ಕಾಣಿಸುವ ನಿರೀಕ್ಷೆಗಳಿದ್ದಾವೆ.