ಕೆಎನ್ಎನ್ ಸಿನಿಮಾ ಡೆಸ್ಕ್: ವಿವಿಧ ರೀತಿಯ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕತೆಯ ಸಿನಿಮಾಗಳು ಈಗಾಗ್ಲೇ ಸ್ಯಾಂಡಲ್ ವುಡ್ ನಲ್ಲಿ ಮೂಡಿಬಂದಿವೆ. ಅದೇ ರೀತಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಒಂದು ಡಿಫರೆಂಟ್ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಚೇಸ್. ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಇದೇ ತಿಂಗಳ 15ರಂದು ಚೇಸ್ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವಾಗ ಚಿತ್ರತಂಡ ಸದ್ಯ ತಮ್ಮ ಟ್ರೈಲರ್ ನ್ನು ರಿವೀಲ್ ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹಾಗೂ ಕುತೂಹಲಗಳನ್ನು ದುಪ್ಪಟ್ಟು ಮಾಡಿದೆ.

ಸಾಮಾನ್ಯವಾಗಿ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ನ ಚಿತ್ರಗಳಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುವ ಭಯಾನಕ ಅಪರಾಧೀ ಕೃತ್ಯಗಳ ನಿಜ ರೂಪವನ್ನು ತೋರಿಸಿ ಆ ಮೂಲಕ ಸೋಷಿಯಲ್ ಮೆಸೇಜ್ ನೀಡುತ್ತವೆ. ಚೇಸ್ ಸಿನಿಮಾ ಕೂಡ ಅಂತಹದ್ದೇ ಒಂದು ಮರ್ಡರ್ ಮಿಸ್ಟರಿ ಕಥೆಯನ್ನು ಹೇಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಹೇಳಲು ಹೊರಟಿದೆ. ದುಷ್ಟರ ಗುಂಪೊಂದು ಮಹಿಳೆಯರನ್ನು ಯಾವ ರೀತಿ ಯಾಮಾರಿಸಿ ಬಲಿ ತೆಗೆದುಕೊಳ್ಳುತ್ತಾರೆ, ಅದರ ಹಿಂದಿನ ನಿಗೂಢತೆ, ಸತ್ಯಾಸತ್ಯತೆಗಳನ್ನು ಈ ಚಿತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿ ಹೇಳಲಾಗಿದೆ ಅನ್ನೋದು ಟ್ರೈಲರ್ ನೋಡಿದ್ರೆ ತಿಳಿಯುತ್ತೆ. ಚಿತ್ರದಲ್ಲಿನ ಪ್ರತೀ ಪಾತ್ರಗಳು, ಸಸ್ಪೆನ್ಸ್ ಥ್ರಿಲ್ಲರ್ ಸನ್ನಿವೇಶಗಳು ಪ್ರೇಕ್ಷಕರ ಹುಬ್ಬೇರಿಸ್ತಿದೆ.

ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ರಾಜೇಶ್ ನಟರಂಗ, ಸುಶಾಂತ್ ಪೂಜಾರಿ, ವೀಣಾ ಸುಂದರ್, ಸುಂದರ್, ರೆಹಮಾನ್ ಹಾಸನ್, ಪ್ರಮೋದ್ ಶೆಟ್ಟಿ ಇನ್ನೂ ಮುಂತಾದ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನೂ ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ. ಅನಂತ ರಾಜ್ ಅರಸ್ ಛಾಯಾಗ್ರಹಣ ಮಾಡಿದ್ದಾರೆ.

ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ನಲ್ಲಿ ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ. ಒಟ್ಟಾರೆ ಸದ್ಯ ಹೊರಬಂದಿರುವ ಚೇಸ್ ಸಿನಿಮಾದ ಟ್ರೈಲರ್ ಗೆ ಯೂಟ್ಯೂಬ್ ನಲ್ಲಿ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ಸಿನಿಮಾ ರಿಲೀಸ್ ನಂತ್ರ ಥಿಯೇಟರ್ ಗಳಲ್ಲಿ ಚೇಸ್ ಯಾವ ರೀತಿ ಕಮಾಲ್ ಮಾಡಿಲಿದ್ಯೋ ನೋಡ್ಬೇಕು.

Share.
Exit mobile version