ಕೇಂದ್ರ ತನಿಖಾ ದಳದ (CBI) ನಿರ್ದೇಶಕ ಪ್ರವೀಣ್ ಸೂದ್ ಅವರ ಅಧಿಕಾರ ಅವಧಿಯನ್ನು ಕೇಂದ್ರ ಸರ್ಕಾರವು ಬುಧವಾರ ಮತ್ತೆ ಒಂದು ವರ್ಷದವರೆಗೆ ವಿಸ್ತರಿಸಿದೆ. ಸರ್ಕಾರಿ ಆದೇಶದ ಪ್ರಕಾರ, ಮೇ 24ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಅವರ ಅವಧಿಯನ್ನು ಈಗ ಮುಂದೂಡಲಾಗಿದೆ.
”ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ, ಸಂಪುಟದ ನೇಮಕಾತಿ ಸಮಿತಿಯು 1986ರ ಬ್ಯಾಚ್‌ನ ಕರ್ನಾಟಕ ಕೆಡರ್ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಅಧಿಕಾರ ಅವಧಿಯನ್ನು ಮೇ 24, 2026ರ ನಂತರ ಒಂದು ವರ್ಷದ ಅವಧಿಗೆ ಸಿಬಿಐ ನಿರ್ದೇಶಕರಾಗಿ ವಿಸ್ತರಿಸಲು ಅನುಮೋದನೆ ನೀಡಿದೆ” ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯು ಮಂಗಳವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಈ ಪ್ರಕ್ರಿಯೆಯ ಬಗ್ಗೆ ರಾಹುಲ್ ಗಾಂಧಿ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದೊಂದು “ಪಕ್ಷಪಾತದ ಪ್ರಕ್ರಿಯೆ” ಎಂದು ಕರೆದಿರುವ ಅವರು, ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಭಿನ್ನಾಭಿಪ್ರಾಯದ ಟಿಪ್ಪಣಿ (Dissent Note) ನೀಡಿದ್ದಾರೆ.
61 ವರ್ಷದ ಪ್ರವೀಣ್ ಸೂದ್ ಅವರು ಮೇ 25, 2023 ರಂದು ಎರಡು ವರ್ಷಗಳ ಅವಧಿಗೆ ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. ಇದು ಅವರ ಅಧಿಕಾರ ಅವಧಿಯಲ್ಲಿ ನೀಡಲಾದ ಎರಡನೇ ವಿಸ್ತರಣೆಯಾಗಿದೆ.
ಸಿಬಿಐ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಚಟುವಟಿಕೆಗಳಿಗೆ ಧಕ್ಕೆ ಬಾರದಂತೆ ನಾಯಕತ್ವದ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಪ್ರವೀಣ್ ಸೂದ್ ಅವರ ಅವಧಿಯಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2020ರಲ್ಲಿ 1,695 ಇದ್ದ ಬಾಕಿ ಪ್ರಕರಣಗಳ ಸಂಖ್ಯೆ 2025ರ ವೇಳೆಗೆ 1,048ಕ್ಕೆ ಇಳಿದಿದೆ. ಅಲ್ಲದೆ, 2025ರಲ್ಲಿ 1,022 ಪ್ರಕರಣಗಳ ವಿಚಾರಣೆಯು ಪೂರ್ಣಗೊಂಡಿದೆ.
ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (DSPE) ಕಾಯ್ದೆ, 1946ಕ್ಕೆ 2021ರಲ್ಲಿ ತರಲಾದ ತಿದ್ದುಪಡಿಗಳ ಅಡಿಯಲ್ಲಿ ಈ ಅವಧಿ ವಿಸ್ತರಣೆಯನ್ನು ಮಾಡಲಾಗಿದೆ.








